ADVERTISEMENT

‘ದೃಶ್ಯ ಮಾಧ್ಯಮದಲ್ಲಿ ಮೌಢ್ಯವಿದೆ’

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2015, 19:57 IST
Last Updated 23 ಮಾರ್ಚ್ 2015, 19:57 IST

ಬೆಂಗಳೂರು: ದೃಶ್ಯ ಮಾಧ್ಯಮದ ಎಲ್ಲ ಕಾರ್ಯಕ್ರಮಗಳ ಒಳ ಹರಿವಿನಲ್ಲೂ ಮೌಢ್ಯ ಇದೆ’ ಎಂದು ಮಾಧ್ಯಮ ತಜ್ಞ ಅಬ್ದುಲ್‌ ರೆಹಮಾನ್‌ ಪಾಷಾ ಹೇಳಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಲೇಖಕಿಯರ ಸಂಘ ಹಾಗೂ ವಿಜಯ ಕಾಲೇಜು ಸಹಯೋಗ­ದೊಂದಿಗೆ ಸೋಮವಾರ  ಆಯೋಜಿಸಿದ್ದ ‘ಮಾಧ್ಯಮ ಮತ್ತು ಮಹಿಳೆ’ ವಿಚಾರ­ಸಂಕಿರಣದಲ್ಲಿ ‘ಮಾಧ್ಯಮ ಮತ್ತು ಮೌಢ್ಯ’ ಕುರಿತು ಅವರು ಮಾತನಾಡಿದರು.

‘ಕೆಲ ಕಾರ್ಯಕ್ರಮಗಳಲ್ಲಿ ಮೌಢ್ಯ­ವನ್ನು ನೇರವಾಗಿ ಗುರುತಿಸುವುದು ಸಾಧ್ಯ. ಆದರೆ, ಧಾರಾವಾಹಿಯ ಪಾತ್ರಗಳ ಮೂಲಕ ಬಿತ್ತುವ ಮೌಢ್ಯವನ್ನು ಗುರುತಿಸುವುದು ಅಸಾಧ್ಯ. ಮೌಢ್ಯ ಬಿತ್ತುವುದು ಅವರ ಉದ್ದೇಶವಲ್ಲದಿದ್ದರೂ ಹಣ ಗಳಿಸುವ ಉದ್ದೇಶದಿಂದ ಇಂಥ ಕಾರ್ಯಕ್ರಮಗಳನ್ನು  ಪ್ರಸಾರ ಮಾಡು­ತ್ತಿದ್ದಾರೆ. ಆದರೆ,    ಕಾರ್ಯಕ್ರಮಗಳನ್ನು ಆಯ್ಕೆ  ಮಾಡುವ ರಿಮೋಟ್‌  ಪ್ರೇಕ್ಷಕರ ಕೈಯಲ್ಲಿರುತ್ತದೆ.

ಜನ ಉತ್ತಮ ಕಾರ್ಯಕ್ರಮಗಳನ್ನೇ ನೋಡಿ ಟಿಆರ್‌ಪಿ ಹೆಚ್ಚಾದರೆ ಮಾಧ್ಯಮ­ಗಳು ಅಂಥ ಕಾರ್ಯಕ್ರಮಗಳನ್ನೇ ಪ್ರಸಾರ ಮಾಡಬೇಕಾಗುತ್ತದೆ’ ಎಂದು ವಿಶ್ಲೇಷಿಸಿದರು.

ಆಕಾಶವಾಣಿ ಕಾರ್ಯಕ್ರಮ ನಿರ್ಮಾಪಕಿ ಸುಮಂಗಲಾ ಮುಮ್ಮಿಗಟ್ಟಿ ಮಾತನಾಡಿ, ವಿಜ್ಞಾನ ತಂತ್ರಜ್ಞಾನದ ಸೌಲಭ್ಯಗಳು ಮೌಢ್ಯವನ್ನು ವೇಗವಾಗಿ ಬಿತ್ತುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಗೋಷ್ಠಿಯ  ಅಧ್ಯಕ್ಷತೆ  ವಹಿಸಿ ಮಾತನಾಡಿದ ‘ಮಯೂರ’ ಮಾಸಿಕದ ಸಹಾಯಕ ಸಂಪಾದಕಿ ಡಾ. ಆರ್‌. ಪೂರ್ಣಿಮಾ, ‘ದೇವರು, ಪೂಜೆ, ಮೌಢ್ಯ ಇವೆಲ್ಲವನ್ನೂ ಮಹಿಳೆಯರ ದೌರ್ಜನ್ಯಕ್ಕೆ  ಬಳಸಿಕೊಳ್ಳಲಾಗಿದೆ.    ಆದರೆ, ಮೌಢ್ಯದ ಮೂಲಕ ಯಾರ ಹಿತಾಸಕ್ತಿಯನ್ನು ರಕ್ಷಿಸಲಾಗುತ್ತಿದೆ ಎಂಬುದನ್ನು ಮಹಿಳೆ­ಯರು ಅರ್ಥ ಮಾಡಿಕೊಳ್ಳಬೇಕು’ ಎಂದರು.

ಮಹಿಳಾ ಸುರಕ್ಷತೆಗೆ ಧಕ್ಕೆ: ಸಮಾನತೆಯನ್ನು ಆಶಿಸುವ ಕಾಲಘಟ್ಟದಲ್ಲಿ ಮಹಿಳಾ ಸುರಕ್ಷತೆಗೆ ಧಕ್ಕೆ ಬಂದಿರುವುದು ಆತಂಕಕಾರಿ ಸಂಗತಿ ಎಂದು ಮಹಿಳಾ ಹೋರಾಟಗಾರ್ತಿ ಕೆ.ಎಸ್. ವಿಮಲಾ ಅಭಿಪ್ರಾಯಪಟ್ಟರು.

ಮಹಿಳಾ ಸಂವೇದನೆ ಕುರಿತು   ಮಾತನಾಡಿದ ಪತ್ರಕರ್ತೆ ಭಾರತಿ ಹೆಗಡೆ, ‘ಮಹಿಳೆಯ ವೇಷಭೂಷಣ, ವೃತ್ತಿ ಬದಲಾದರೂ  ಮಹಿಳೆಯನ್ನು  ನೋಡುವ ದೃಷ್ಟಿಕೋನ ಬದಲಾಗಿಲ್ಲ. ದೃಶ್ಯ ಮಾಧ್ಯಮಗಳಲ್ಲಿ ಹೆಣ್ಣನ್ನು ಭೋಗದ ವಸ್ತುವಾಗಿ ಬಿಂಬಿಸಲಾಗುತ್ತಿದೆ’ ಎಂದರು.

‘ಸೈದ್ಧಾಂತಿಕ ಸಂಘರ್ಷಕ್ಕೆ ಒಡ್ಡಿಕೊಳ್ಳ­ಬೇಕಾದ ಅನಿವಾರ್ಯತೆ ಇಂದಿನ ಮಹಿಳೆಗೆ ಬಂದೊದಗಿದೆ’ ಎಂದು ಜನವಾದಿಯ ಕೆ.ಎಸ್‌. ಲಕ್ಷ್ಮಿ, ಹೇಳಿದರು.
‘ದೌರ್ಜನ್ಯ ತಡೆಯಲ್ಲಿ ಮಾಧ್ಯಮದ ಪಾತ್ರ’ ಕುರಿತು ಮಾತನಾಡಿದ ಹಿರಿಯ ಪತ್ರಕರ್ತ ಹುಣಸವಾಡಿ ರಾಜನ್‌, ‘ಮಾಧ್ಯಮಗಳು ಮನಸುಗಳನ್ನು ಅರಳಿಸುವ ಕೆಲಸ ಮಾಡಬೇಕೇ ಹೊರತು ಕೆರಳಿಸುವ ಕೆಲಸ ಮಾಡ­ಬಾರದು’ ಎಂದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಪ್ರಜಾವಾಣಿ ಸಹ ಸಂಪಾದಕಿ ಸಿ. ಜಿ. ಮಂಜುಳಾ ಮಾತನಾಡಿ, ‘ದೌರ್ಜನ್ಯದ ವರದಿ ಮಾಡುವಾಗ ವರದಿಗಾರರು ಘಟನೆಯ ಅಪವ್ಯಾಖ್ಯಾನ ಮಾಡದೆ ಹಿನ್ನೆಲೆ ತಿಳಿಯುವ ಸೂಕ್ಷ್ಮತೆ ಬೆಳೆಸಿ­ಕೊಳ್ಳಬೇಕು’ ಎಂದರು.

ನಿರ್ಣಯ ಮಂಡನೆ: ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ  ಜಾರಿಗೊಳಿಸಬೇಕು, ಶಾಲಾ ಪಠ್ಯಕ್ರಮದಲ್ಲಿ ಲಿಂಗಸೂಕ್ಷ್ಮತೆ, ವೈಜ್ಞಾನಿಕ ಮನೋಭಾವ, ವೈಚಾರಿಕ ಲೇಖನಗಳನ್ನು ಅಳವಡಿಸಲು ಸರ್ಕಾರ­ವನ್ನು ಒತ್ತಾಯಿಸುವ ನಿರ್ಣಯವನ್ನು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಅವರು ಮಂಡಿಸಿದರು. ಶಾಂತಾ ತಮ್ಮಯ್ಯ, ಬಿ.ಕೆ.ಸುಮತಿ, ಎನ್‌. ಪ್ರಭಾ, ಹೇಮಲತಾ ಎಚ್‌, ನಳಿನ ಡಿ, ಎಂ.ಕೆ. ಅಕ್ಷರ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.