ADVERTISEMENT

‘ನಾಡಿನ ಬದುಕಿನ ಭಾಷೆ ಕನ್ನಡ’

ಯಶವಂತಪುರ ಕ್ಷೇತ್ರ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2014, 20:19 IST
Last Updated 1 ಆಗಸ್ಟ್ 2014, 20:19 IST

ಕೆಂಗೇರಿ: ‘ಕನ್ನಡ ಎಂಬುದು ಬರಿ ಭಾಷೆ­ಯಲ್ಲ, ಅದು ನಾಡಿನ ಜನಾಂಗದ ಸಂಸ್ಕೃತಿಯ ಬದುಕಿನ ಭಾಷೆ’ ಎಂದು ಜನಪದ ವಿದ್ವಾಂಸ ಡಾ. ಕೂಡ್ಲೂರು ವೆಂಕಟಪ್ಪ ಅಭಿಪ್ರಾಯಪಟ್ಟರು. ಕೆಂಗೇರಿ ಉಪನಗರದಲ್ಲಿ ನಡೆದ ಯಶವಂತಪುರ ವಿಧಾನಸಭಾ ಕ್ಷೇತ್ರದ 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಇಂಗ್ಲಿಷ್ ಶಿಕ್ಷಣ ಪದ್ಧತಿಯಿಂದಾಗಿ ನಮ್ಮ ಮಕ್ಕಳು ನಮ್ಮ ನೆಲದಲ್ಲಿಯೇ ಅಪರಿಚಿತರಾಗುತ್ತಿದ್ದಾರೆ. ಜಾಗತೀಕ­ರಣ­ದಿಂದಾಗಿ ಕೃಷಿ ಪ್ರಧಾನವಾದ ನಾಡು ಉದ್ಯಮ ಪ್ರಧಾನ ನಾಡಾಗು­ತ್ತಿದೆ. ಶಿಕ್ಷಣ ಕೂಡ ಉದ್ಯಮವಾಗಿ ಹೋಗಿದೆ’  ಎಂದರು. ‘ಸಾಮಾಜಿಕವಾಗಿ ಆದ ಬದಲಾವ­ಣೆಗಳಿಂದಾಗಿ ವೃದ್ಧರ ಮೇಲಿನ ದೌರ್ಜ­ನ್ಯ­ಗಳು, ಹೆಣ್ಣಿನ ಮೇಲಿನ ಅತ್ಯಾಚಾರ­ಗಳು, ಮಕ್ಕಳ ಮೇಲೆ ಅತ್ಯಾಚಾರಗಳು ಹೆಚ್ಚಾಗುತ್ತಿವೆ’ ಎಂದರು.

ಕವಿ ಎಲ್‌.ಹನುಮಂತಯ್ಯ ಮಾತ­ನಾಡಿ, ‘ಜಾಗತೀಕರಣದಿಂದಾಗಿ ನಮ್ಮ ಜೀವನದಲ್ಲಿ ಎಲ್ಲ ಕಡೆಗಳಲ್ಲಿಯೂ ಅಸಮಾನತೆ ಹೆಚ್ಚಿದೆ. ಹೀಗಾಗಿ ಆರೋಗ್ಯ, ಶಿಕ್ಷಣ, ರಾಜಕೀಯ ಹೀಗೆ ಎಲ್ಲೆಲ್ಲೂ ತಾರತಮ್ಯವಿದೆ’ ಎಂದರು. ಕವಿ ಎಲ್.ಎನ್. ಮುಕುಂದರಾಜ್ ಮಾತನಾಡಿ, ‘ಕರ್ನಾಟಕ, ಕನ್ನಡ, ಕನ್ನಡಿಗ ಈ ಮೂರು ಸಂಕಷ್ಟದಲ್ಲಿ­ರುವ ಕಾಲಘಟ್ಟವಿದು. ಭ್ರಷ್ಟಾಚಾರ, ಅತ್ಯಾಚಾರ, ದುರಾಚಾರ ಇವು ನಮಗೆ ಮುಂದಿವೆ. ಸ್ವಾರ್ಥದ ಕಾರಣದಿಂದ ನಮ್ಮ ದೇಶ ಪ್ರಗತಿಗೆ ಬದಲು ದುರಾಚಾರದತ್ತ ಸಾಗುತ್ತಿದೆ’ ಎಂದರು.

ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ. ತಿಮ್ಮೇಶ್‌ ಮಾತ­ನಾಡಿ, ‘ಯಶವಂತಪುರ ವಿಧಾನಸಭಾ ಕ್ಷೇತ್ರದ ಸಾಹಿತ್ಯ ಪರಿಷತ್ತಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ದಾನಿಗಳ ಸಹಕಾರ ಅಗತ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.