ADVERTISEMENT

‘ನೀರು ಬರದಿದ್ದರೂ ಬಿಲ್‌ ಕಟ್ಟ ಬೇಕು’

ಸಂವಾದದಲ್ಲಿ ಕೊಳೆಗೇರಿ ನಿವಾಸಿಗಳ ಅಳಲು

​ಪ್ರಜಾವಾಣಿ ವಾರ್ತೆ
Published 30 ಮೇ 2016, 19:55 IST
Last Updated 30 ಮೇ 2016, 19:55 IST
ಸಮಾರಂಭದಲ್ಲಿ ಆರ್‌.ರಾಜಣ್ಣ ಅವರು ಮೊಹಮದ್‌ ಆರಿಫ್‌ ಅವರೊಂದಿಗೆ ಚರ್ಚೆ ನಡೆಸಿದರು. ಸಿ.ಕೆ.ರವಿಕುಮಾರ್‌, ಗೀತಾ ಇದ್ದಾರೆ  –ಪ್ರಜಾವಾಣಿ ಚಿತ್ರ
ಸಮಾರಂಭದಲ್ಲಿ ಆರ್‌.ರಾಜಣ್ಣ ಅವರು ಮೊಹಮದ್‌ ಆರಿಫ್‌ ಅವರೊಂದಿಗೆ ಚರ್ಚೆ ನಡೆಸಿದರು. ಸಿ.ಕೆ.ರವಿಕುಮಾರ್‌, ಗೀತಾ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಶ್ರೀಮಂತರು ವಾಸಿಸುವ ಬಡಾವಣೆಗಳಿಗೆ ಸಮರ್ಪಕವಾಗಿ ನೀರು ಪೂರೈಸುವ ಜಲಮಂಡಳಿಗೆ ಕೊಳೆಗೇರಿ ಗಳನ್ನು ಕಂಡರೆ ತಾತ್ಸರ ಏಕೆ? ನೀರು ಬರದಿದ್ದರೂ ಬಿಲ್‌ ಬರುತ್ತದೆ. ಬಿಲ್‌ ಕಟ್ಟ ಲಿಲ್ಲವೆಂದು ಬಡ್ಡಿ ಹಾಕುತ್ತಾರೆ.

ಹೀಗಾ ದರೆ ನಾವು ಬದುಕುವುದು ಹೇಗೆ? ಕರ್ನಾಟಕ ಕೊಳೆಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ಬೆಂಗಳೂರು ನಗರ ಕೊಳೆಗೇರಿಗಳ ಸಮಸ್ಯೆಗಳು’ ಕುರಿತ ಸಂವಾದದಲ್ಲಿ ಸಾರ್ವಜನಿಕರು ಕೇಳಿದ ಪ್ರಶ್ನೆಗಳಿವು.

ಸಂಘಟನೆಯ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಎಸ್‌.ಲೀಲಾವತಿ ಅವರು ಕೊಳೆಗೇರಿಗಳ ಸಮಸ್ಯೆ ಬಗ್ಗೆ ಮಾತನಾಡಿ, ‘ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯು ವಸತಿ ಸಮು ಚ್ಚಯಗಳನ್ನು ನಿರ್ಮಿಸಿ ಮೂಲಸೌಕರ್ಯ ಕಲ್ಪಿಸುತ್ತದೆ. ಆದರೆ, ನೀರಿನ ಸಂಪರ್ಕ ಪಡೆಯಬೇಕಾದರೆ ಜಲಮಂಡಳಿಗೆ ಏಕೆ ಕಂತಿನ ಶುಲ್ಕ ಪಾವತಿಸಬೇಕು.  ಈ ಶುಲ್ಕ ಪಾವತಿಸುವಷ್ಟು ಶಕ್ತಿ ಮಂಡಳಿಗೆ ಇಲ್ಲದಿ ರುವುದರಿಂದ ನೀರಿನ ಸಂಪರ್ಕ ಪಡೆಯಲು ಸಾಧ್ಯವಾಗುತ್ತಿಲ್ಲ’ ಎಂದರು.

‘ಸಮುಚ್ಚಯಗಳಲ್ಲಿ ಪ್ರತಿಯೊಂದು ಮನೆಗೂ ಮೀಟರ್‌ ಅಳವಡಿಸುವ ಬದಲು, ಬ್ಲಾಕ್‌ಗೆ ಒಂದು ಮೀಟರ್‌ ಅಳವಡಿಸಬೇಕು. ಬಿಲ್‌ ಮೊತ್ತವನ್ನು ಎಲ್ಲರಿಗೂ ಸಮನಾಗಿ ಹಂಚಿಕೆ ಮಾಡ ಬೇಕು’ ಎಂದು ಮನವಿ ಮಾಡಿದರು.

‘ಕೊಳೆಗೇರಿಗಳಲ್ಲಿ ಸರಿಯಾಗಿ ನೀರು ಬರುವುದಿಲ್ಲ. ಆದರೆ, ಬಿಲ್‌ ಮಾತ್ರ ಪ್ರತಿ ತಿಂಗಳು ಬರುತ್ತದೆ. ಜತೆಗೆ ಬಡ್ಡಿ ಸೇರಿ ಸಾವಿರಾರು ರೂಪಾಯಿಗಳ ಬಿಲ್‌ ಬಂದಿದೆ. ಸರ್ಕಾರ ಬಡ್ಡಿ ಮನ್ನಾ ಮಾಡಬೇಕು’ ಎಂದು ಕೋರಿದರು.

ನಂಜುಂಡ ಮಾತನಾಡಿ, ‘ನೀಲ  ಸಂದ್ರದ ತಿಮ್ಮರಾಯಪ್ಪ ಗಾರ್ಡನ್‌ನಲ್ಲಿ ಒಳಚರಂಡಿ ಹಾಗೂ ಕಾವೇರಿ ನೀರಿನ ಪೈಪ್‌ಲೈನ್‌ ಅಕ್ಕಪಕ್ಕದಲ್ಲಿ ಹಾದು ಹೋಗಿದೆ. ಕೊಳಚೆ ನೀರು ಕುಡಿಯುವ ನೀರಿನೊಂದಿಗೆ ಸೇರುತ್ತಿದೆ’ ಎಂದರು.

‘ಡಿ.ಜೆ.ಹಳ್ಳಿಗೆ ನೀರು ಪೂರೈಕೆ ಇಲ್ಲ. ದುಡ್ಡು ಕೊಟ್ಟು ಟ್ಯಾಂಕರ್‌ ನೀರು ಪಡೆಯಬೇಕಿದೆ’ ಎಂದು ಮಹಿಳೆ ಯೊಬ್ಬರು ಹೇಳಿದರು. ಜಲಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ಮೊಹಮದ್‌ ಆರೀಫ್‌,  ‘ಎಲ್ಲ ಕೊಳೆಗೇರಿಗಳಲ್ಲಿ ಒಳ ಚರಂಡಿ ಹಾಗೂ ನೀರಿನ ಸಂಪರ್ಕ ಕಲ್ಪಿಸಲಾಗುತ್ತಿದೆ. 100 ಕಿಲೋ ಮೀಟರ್‌ ದೂರದಿಂದ ಬೆಂಗಳೂರಿಗೆ ನೀರನ್ನು ತರಲಾಗುತ್ತಿದೆ. ನೀರನ್ನು ಲಿಫ್ಟ್‌ ಮಾಡಲು ವಿದ್ಯುತ್‌ಗೆ ಪ್ರತಿ ತಿಂಗಳು ₹ 50 ಕೋಟಿ ವೆಚ್ಚವಾಗುತ್ತಿದೆ. ನೀರನ್ನು ಮಿತ ಬಳಕೆ ಮಾಡಿ’ ಎಂದು ಮನವಿ ಮಾಡಿದರು.

ನೀರಿನ ಶುಲ್ಕಕ್ಕೆ ವಿಧಿಸಿರುವ ಬಡ್ಡಿ ಮನ್ನಾ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿ ಸುವ ಸಂಬಂಧ ಹಿರಿಯ ಅಧಿಕಾರಿಗಳ ಜತೆ ಚರ್ಚಿಸುತ್ತೇವೆ’ ಎಂದರು. ಪಡಿತರ ವ್ಯವಸ್ಥೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಕೊಳೆಗೇರಿಗಳ ನಿವಾಸಿಗಳು ಬೆಳಕು ಚೆಲ್ಲಿದರು. ‘ಒಬ್ಬ ವ್ಯಕ್ತಿಗೆ 5 ಕೆಜಿ ಅಕ್ಕಿ ಸಾಲುವುದಿಲ್ಲ. ಮತ್ತಷ್ಟು ಅಕ್ಕಿ ನೀಡಬೇಕು’ ಎಂದು ಹೆಣ್ಣೂರಿನ ಯಶೋದಾ ಕೋರಿದರು.

ಆಹಾರ, ನಾಗರಿಕ ಸರಬ ರಾಜು ಇಲಾಖೆ ಉಪನಿರ್ದೇಶಕ ಆರ್‌. ರಾಜಣ್ಣ ಮಾತನಾಡಿ, ‘ಕೊಳೆಗೇರಿ ನಿವಾಸಿಗಳಿಗೆ ಕಡ್ಡಾಯವಾಗಿ ಪಡಿತರ ಚೀಟಿಯನ್ನು ವಿತರಿಸಬೇಕು. ಅಂಗವಿಕಲರು, ವಿಧವೆಯರು, ವೃದ್ಧರಿಗೆ ಯಾವುದೇ ಷರತ್ತು ವಿಧಿಸದೆ ಪಡಿತರ ಕಾರ್ಡ್‌ ನೀಡಬೇಕು. ಮಧ್ಯವರ್ತಿಗಳು ಹಣ ಕೇಳಿದರೆ 1967 ಟೋಲ್‌ ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು’ ಎಂದರು.

ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಗಳ ನಿರ್ದೇಶನಾಲಯದ ತಹಸೀಲ್ದಾರ್‌ ಗೀತಾ, ಕೊಳೆಗೇರಿ ಅಭಿವೃದ್ಧಿ ಮಂಡಳಿ ಯ ಉಪಮುಖ್ಯ ಎಂಜಿನಿಯರ್‌ ಸಿ.ಕೆ.ರವಿಕುಮಾರ್‌ ಮಾತನಾಡಿದರು.

ಕೂಪನ್ ವ್ಯವಸ್ಥೆ
ಸೋರಿಕೆ ತಡೆಯಲು ಬಯೋ ಮೆಟ್ರಿಕ್‌ ಕೂಪನ್ ವ್ಯವಸ್ಥೆ ಜಾರಿ ಗೊಳಿಸಿದೆ’ ಎಂದು ಆಹಾರ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.‘ಬಿಬಿಎಂಪಿ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಜೂನ್ 1ರಿಂದ ಸೀಮೆಎಣ್ಣೆ ವಿತರಣೆಗೆ ಕೂಪನ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.

ಬೆಂಗಳೂರು ಒನ್‌ ಅಥವಾ ಸೈಬರ್‌ ಕೇಂದ್ರಗಳಲ್ಲಿ ಕೂಪನ್‌ ಪಡೆಯ ಬಹುದು. ಜತೆಗೆ, ನಿಮ್ಮ ಮೊಬೈಲ್‌ ಗೆ ಕೂಪನ್‌ ಕೋಡ್‌ ಸಂಖ್ಯೆಯನ್ನು ಕಳುಹಿಸಲಾಗುತ್ತದೆ. ಅದನ್ನು ತೋರಿಸಿ ಪಡಿತರ ಪಡೆದುಕೊಳ್ಳ ಬಹುದು’ ಎಂದರು. ‘ಒಬ್ಬರು ಅಥವಾ ಇಬ್ಬರು ಇರುವ ಕುಟುಂಬಗಳಿಗೆ 1–2 ಕೆ.ಜಿ. ಅಕ್ಕಿಯನ್ನು ಹೆಚ್ಚುವರಿಯಾಗಿ ನೀಡುವ ಬಗ್ಗೆ ಪರಿಶೀಲಿಸಲಾಗು ವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.