ADVERTISEMENT

‘ಪ್ರೌಢ ಕನ್ನಡ’ವಿರಲಿ; ಇಂಗ್ಲಿಷ್‌ ಕಲಿಸಿ

ವಿಜ್ಞಾನಿ ಸಿ.ಎನ್‌.ಆರ್‌ ರಾವ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 5 ಮೇ 2015, 19:47 IST
Last Updated 5 ಮೇ 2015, 19:47 IST

ಬೆಂಗಳೂರು: ‘ಪ್ರೌಢಶಾಲಾ ಹಂತದ ವರೆಗೆ ಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕು. ಜತೆಗೆ ಇಂಗ್ಲಿಷ್‌ ಭಾಷೆಯನ್ನೂ ಚೆನ್ನಾಗಿ ಕಲಿಸಬೇಕು’ ಎಂದು ಹಿರಿಯ ವಿಜ್ಞಾನಿ ಡಾ.ಸಿ.ಎನ್‌.ಆರ್‌. ರಾವ್‌ ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್‌ ಬೆಂಗಳೂರು ನಗರ ಜಿಲ್ಲಾ ಘಟಕದ ಆಶ್ರಯದಲ್ಲಿ ಚೌಡಯ್ಯ ಸ್ಮಾರಕ ಭವನದಲ್ಲಿ ಮಂಗಳವಾರ ನಡೆದ 9ನೇ ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಮಾತೃಭಾಷೆಯಲ್ಲೇ ಶಿಕ್ಷಣ ನೀಡಿದರೆ ಮಕ್ಕಳು ಚೆನ್ನಾಗಿ ಕಲಿಯುತ್ತಾರೆ. ಹಾಗೆಂದ ಮಾತ್ರಕ್ಕೆ ಇಂಗ್ಲಿಷ್‌ ದ್ವೇಷ ಬೇಡ. ಪ್ರಪಂಚ ಸುತ್ತಲು ಇಂಗ್ಲಿಷ್‌ ಅಗತ್ಯ’ ಎಂದು ಅವರು ಪ್ರತಿಪಾದಿಸಿದರು.

‘ಬೆಂಗಳೂರಿನ ಮಕ್ಕಳಿಗೆ ದುಡ್ಡು ಮಾಡುವುದರಲ್ಲಿ ಹೆಚ್ಚು ಆಸಕ್ತಿ. ಹಾಗಾಗಿ ಅವರು ಐಟಿ- ಬಿಟಿ ಕಡೆಯ ಮುಖ ಮಾಡುತ್ತಾರೆ. ಆದರೆ, ಹಳ್ಳಿಯ ಮಕ್ಕಳು ಹಾಗಲ್ಲ. ಅವರಿಗೆ ವಿಜ್ಞಾನದಲ್ಲಿ ಆಸಕ್ತಿ ಇದೆ. ಅವರಿಗೆ ಕನ್ನಡದ ಜತೆಗೆ ಇಂಗ್ಲಿಷ್  ಭಾಷೆಯನ್ನೂ ಕೆಲಸ ಆಗಬೇಕು’ ಎಂದು ಅಭಿಪ್ರಾಯಪಟ್ಟರು.

‘ದೇಶದಲ್ಲಿ ಈಗ ಶಿಕ್ಷಣ ಕ್ಷೇತ್ರಕ್ಕೆ ಜಿಡಿಪಿಯ ಶೇ 2 ರಷ್ಟು ಮಾತ್ರ ನೀಡಲಾಗುತ್ತಿದೆ. ವಿಜ್ಞಾನ ಕ್ಷೇತ್ರಕ್ಕೆ ಜಿಡಿಪಿಯ ಶೇ 0.9 ನೀಡಲಾಗುತ್ತಿದೆ. ಐಟಿ - ಬಿಟಿಗೆ ಮಾತ್ರ ಉತ್ತೇಜನ ನೀಡಿದರೆ ಸಾಲದು. ಎಲ್ಲ ಕ್ಷೇತ್ರಕ್ಕೂ ಪ್ರೋತ್ಸಾಹ ನೀಡಿದರೆ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯ’ ಎಂದರು.

‘ಇತ್ತೀಚಿನ ವರ್ಷಗಳಲ್ಲಿ ರಾಜಧಾನಿಯ ವಾತಾವರಣ ಹಾಳಾಗಿದೆ. ಕಲೆ, ಸಂಸ್ಕೃತಿ, ಸಾಹಿತ್ಯದ ಮೇಲಿನ ಒಲವು ಕಡಿಮೆಯಾಗುತ್ತಿದೆ. ಐಟಿ ಮೇಲಿನ ಪ್ರೀತಿ  ವಿಪರೀತವಾಗಿದೆ’ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್‌. ಹನುಮಂತಯ್ಯ ಮಾತನಾಡಿ, ‘ಪದವಿ ತರಗತಿಗಳಲ್ಲಿ ಈಗ ಒಂದೇ ಸೆಮಿಸ್ಟರ್‌ನಲ್ಲಿ ಮಾತ್ರ ಕನ್ನಡ ಕಲಿಸಲಾಗುತ್ತಿದೆ. ಕನಿಷ್ಠ 4 ಸೆಮಿಸ್ಟರ್‌ ವರೆಗೆ ಕನ್ನಡದಲ್ಲಿ ಕಲಿಸಬೇಕು ಎಂಬುದು ಪ್ರಾಧಿಕಾರದ ಆಶಯ. ಈ ಸಂಬಂಧ ಕುಲಪತಿಗಳ ಸಭೆ ಕರೆಯಲು ಚಿಂತಿಸಲಾಗಿತ್ತು. ಅದಕ್ಕೆ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ನಗರ ಜಿಲ್ಲಾ ಘಟಕದ ಅಧ್ಯಕ್ಷ ಟಿ. ತಿಮ್ಮೇಶ್‌, ಶಾಸಕ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

ನಡೆದೇ ಸಾಗಿದರು
ಸಮ್ಮೇಳನಾಧ್ಯಕ್ಷ ಜಿ. ರಾಮಕೃಷ್ಣ ಅವರು ಉದ್ಘಾಟನಾ ಸಮಾರಂಭದ ಮೆರವಣಿಗೆಯಲ್ಲಿ ನಡೆದೇ ಸಾಗಿದರು.

ಆನಂದ ರಾವ್‌ ವೃತ್ತದ ಬಳಿ ಕನ್ನಡ ಜಾಗೃತಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಶೇಷಾದ್ರಿಪುರ ಮುಖ್ಯ ರಸ್ತೆ, ನಟರಾಜ್‌ ಚಿತ್ರಮಂದಿರ, ಸಂಪಿಗೆ ರಸ್ತೆ, ಮಲ್ಲೇಶ್ವರ ವೃತ್ತ, ಕಾಡುಮಲ್ಲೇಶ್ವರ ದೇವಸ್ಥಾನದ ಮಾರ್ಗದಲ್ಲಿ ಸಾಗಿ 19ನೇ ಅಡ್ಡ ರಸ್ತೆಯಲ್ಲಿ ತಿರುವು ಪಡೆದು ಚೌಡಯ್ಯ ಸ್ಮಾರಕ ಭವನಕ್ಕೆ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT