ADVERTISEMENT

‘ಬಿಬಿಎಂಪಿ ವಿಭಜನೆ ಕೈಬಿಡಿ’

ಮೈತ್ರಿ ಪ್ರಸ್ತಾವ: ಕಾಂಗ್ರೆಸ್‌ಗೆ ಜೆಡಿಎಸ್‌ ಷರತ್ತು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2015, 19:56 IST
Last Updated 2 ಸೆಪ್ಟೆಂಬರ್ 2015, 19:56 IST

ಬೆಂಗಳೂರು:ಕಾಂಗ್ರೆಸ್‌ ಜತೆ ಮೈತ್ರಿಗೆ  ಮುಂದಾಗಿರುವ ಜೆಡಿಎಸ್‌, ಬಿಬಿಎಂಪಿ ವಿಭಜನೆ ನಡೆಸಬಾರದು ಎಂಬ ಷರತ್ತು ವಿಧಿಸಿದೆ.

ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ಅವರ ಜತೆ ಬುಧವಾರ ಮಾತುಕತೆ ನಡೆಸಿದ ಸಂದರ್ಭದಲ್ಲಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರು ಈ ವಿಚಾರ  ಸ್ಪಷ್ಟಪಡಿಸಿದ್ದಾರೆ.

ದೆಹಲಿ ಮಹಾನಗರ ಪಾಲಿಕೆಯನ್ನು ವಿಭಜನೆ ಮಾಡಿಯೂ ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ ಬೆಂಗಳೂರನ್ನು ವಿಭಜಿಸುವ ಪ್ರಸ್ತಾವ ಕೈಬಿಡಬೇಕು ಎಂದು ಸಲಹೆ ನೀಡಿದರು ಎನ್ನಲಾಗಿದೆ.

ಮಾತುಕತೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ದೇವೇಗೌಡ, ‘ಈ ಮೈತ್ರಿ ಬಿಬಿಎಂಪಿಗೆ ಸೀಮಿತ. ಮೈತ್ರಿಗೂ ಪಕ್ಷದ ಸಿದ್ಧಾಂತಕ್ಕೂ ಸಂಬಂಧ ಇಲ್ಲ. ಬೆಂಗಳೂರಿನ ಅಭಿವೃದ್ಧಿಗೆ ಅನುದಾನದ ಅಗತ್ಯ ಇದೆ. ಹಾಗಾಗಿ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ ಪಕ್ಷದ ಜತೆ ಮೈತ್ರಿಗೆ ಮುಂದಾಗಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

‘ಮೈತ್ರಿ ಬಗ್ಗೆ ಸಿದ್ದರಾಮಯ್ಯ, ಪರಮೇಶ್ವರ್ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಜತೆಯಲ್ಲಿ ಕುಳಿತು ಚರ್ಚಿಸುವಂತೆ ಸಲಹೆ ನೀಡಿದ್ದೇನೆ. ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ನಡೆಸಿಲ್ಲ. ಅಧಿಕಾರ ಹಂಚಿಕೆ ಬಗ್ಗೆ ಚೌಕಾಸಿ ಮಾಡುವ ಪ್ರಶ್ನೆ ಇಲ್ಲ. ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದಿಂದ ಹಿಡಿದು ಎಲ್ಲದ­ರಲ್ಲೂ ಜೆಡಿಎಸ್‌ ಸದಸ್ಯರಿಗೆ ಸಹಜ­ವಾಗಿಯೇ  ಸೂಕ್ತ ಸ್ಥಾನಮಾನ ಸಿಗಲಿವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಬಿಬಿಎಂಪಿಯಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ತೆರೆದ ಮನಸ್ಸು ಹೊಂದಿರುವುದಾಗಿ ದೇವೇಗೌಡರು ಹೇಳಿಕೆ ನೀಡಿದ್ದನ್ನು ನೋಡಿ, ಅವರನ್ನು ಭೇಟಿ ಆಗಿದ್ದೇನೆ. ಮೈತ್ರಿಯ ಸಾಧಕ ಬಾಧಕಗಳ ಬಗ್ಗೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಿರಿಯ ನಾಯಕರು ಸೇರಿ  ಚರ್ಚಿಸಿದ್ದೇವೆ. ಈ ಬಗ್ಗೆ ಎಚ್‌.ಡಿ.ಕುಮಾರಸ್ವಾಮಿ ಅವರ ಜತೆಯೂ ಚರ್ಚೆ ನಡೆಸಲಿದ್ದೇವೆ’ ಎಂದು ಪರಮೇಶ್ವರ್‌ ತಿಳಿಸಿದರು.

ದೇವೇಗೌಡರು ವಿಧಿಸಿರುವ ಷರತ್ತಿನ ಬಗ್ಗೆ ಪರಮೇಶ್ವರ್‌ ಅವರು ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರ ಜತೆ ಚರ್ಚಿಸಿದರು. ಕುಮಾರಸ್ವಾಮಿ ಅವರನ್ನು ಬುಧವಾರವೇ ಭೇಟಿ ಮಾಡಲು ಪರಮೇಶ್ವರ್‌ ಪ್ರಯತ್ನಿಸಿದ್ದರು.  ಕುಮಾರಸ್ವಾಮಿ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಭೇಟಿ ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.