ADVERTISEMENT

‘ಬೆಂಗಳೂರು ವಿ.ವಿ ವಿಭಜನೆ ಅಗತ್ಯ’

​ಪ್ರಜಾವಾಣಿ ವಾರ್ತೆ
Published 30 ಜೂನ್ 2015, 19:31 IST
Last Updated 30 ಜೂನ್ 2015, 19:31 IST

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆದ್ದರಿಂದ, ವಿ.ವಿಯನ್ನು ಆಡಳಿತಾತ್ಮಕ ಮತ್ತು ಶೈಕ್ಷಣಿಕ ಪ್ರಗತಿಯ ದೃಷ್ಟಿಯಿಂದ ವಿಭಜನೆ ಮಾಡುವುದು ಒಳಿತು’ ಎಂದು ಪಿ.ಇ.ಎಸ್ ವಿಶ್ವವಿದ್ಯಾಲಯ ಕುಲಾಧಿಪತಿ ಪ್ರೊ.ಎಂ.ಆರ್‌.ದೊರೆಸ್ವಾಮಿ ಅಭಿಪ್ರಾಯವ್ಯಕ್ತಪಡಿಸಿದರು.

ವಿಶ್ವವಿದ್ಯಾಲಯದ ಆವರಣದಲ್ಲಿ ಇತ್ತೀಚೆಗೆ ನಡೆದ ಪಿ.ಇ.ಎಸ್ ಪದವಿ ಕಾಲೇಜಿನ ಪ್ರಥಮ ಬಿ.ಕಾಂ ತರಗತಿಗಳ ಉದ್ಘಾಟನೆ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಶಿಕ್ಷಣ ಪರಿಪೂರ್ಣವಾಗಬೇಕಾದರೆ ಶಾಲಾ ಕಾಲೇಜುಗಳ ಆಡಳಿತ ಮಂಡಳಿ, ಅಧ್ಯಾಪಕ ವರ್ಗ, ವಿದ್ಯಾರ್ಥಿ ವೃಂದ ಹಾಗೂ ಪೋಷಕರು ಪರಸ್ಪರ ಸಕ್ರಿಯ ಸಹಕಾರ ನೀಡುವುದು ಅತ್ಯಗತ್ಯವಾಗಿದೆ’ ಎಂದು ಹೇಳಿದರು.

ಬೆಂಗಳೂರು ವಿ.ವಿ ಮೌಲ್ಯಮಾಪನ ಕುಲಸಚಿವ ಕೆ.ಎನ್. ನಿಂಗೇಗೌಡ ಮಾತನಾಡಿ, ‘ಶಿಕ್ಷಣ ಕ್ಷೇತ್ರದಲ್ಲಿ ದಿನೇ ದಿನೇ ಗುಣಮಟ್ಟದ ಕೊರತೆ ಕಂಡುಬರುತ್ತಿದೆ. ಮೂಲಭೂತ ಸೌಕರ್ಯಗಳು ಮತ್ತು ನೈತಿಕ ಮೌಲ್ಯಗಳ ಬೋಧನೆಯಿಂದ ಈ ಕೊರತೆಯನ್ನು ನೀಗುವ ಅಗತ್ಯವಿದೆ’ ಎಂದು ತಿಳಿಸಿದರು.

‘ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬೇಕಾದರೆ ವಿದ್ಯಾರ್ಥಿಗಳು  ಶ್ರದ್ದೆ, ಶಿಸ್ತು, ಕಠಿಣ ಪರಿಶ್ರಮ ಹಾಗೂ ಸಂಯಮವನ್ನು ಮೈಗೂಡಿಸಿಕೊಳ್ಳಬೇಕು’ ಎಂದರು. ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.