ADVERTISEMENT

‘ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ’ ಪ್ರದಾನ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2015, 20:08 IST
Last Updated 3 ಅಕ್ಟೋಬರ್ 2015, 20:08 IST

ಬೆಂಗಳೂರು: ತ್ಯಾಗಿ ಸೇವಾ ಟ್ರಸ್ಟ್‌ ಮತ್ತು ದಕ್ಷಿಣ ಕನ್ನಡ ಜೈನ ಮೈತ್ರಿ ಕೂಟ ಸಹಯೋಗದಲ್ಲಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಕೆ.ರಾಜರತ್ನ ಆರಿಗ ಅವರಿಗೆ ‘ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ರಾಜರತ್ನ ಅವರು ಪ್ರಶಸ್ತಿ ಸ್ವೀಕರಿಸಿ, ‘ಧಾರ್ಮಿಕ ಕ್ಷೇತ್ರದಲ್ಲಿ ಮಾಡಿದ ಸೇವೆ ಗುರುತಿಸಿ ಸನ್ಮಾನಿಸಿರುವುದಕ್ಕೆ ನಾನು ಚಿರಋಣಿಯಾಗಿರುವೆ’ ಎಂದರು.

‘ದೇಶದಲ್ಲಿ ಜೈನ ಧರ್ಮಿಯರ ಸಂಖ್ಯೆ ತುಂಬಾ ಕಡಿಮೆ ಇದೆ. ಆದ್ದರಿಂದ, ನಾವೆಲ್ಲ ಒಗ್ಗಟ್ಟಿನಿಂದ ಸಮಾಜದ ಏಳಿಗೆಗೆ ದುಡಿಯಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಕೂಟದ ಅಧ್ಯಕ್ಷ ಡಿ.ಸುರೇಂದ್ರಕುಮಾರ್ ಮಾತನಾಡಿ, ‘ಕೂಟದ ವತಿಯಿಂದ ಸಮಾಜ ಸೇವೆ ಮಾಡುವವರನ್ನು ಗುರುತಿಸಿ, ಗೌರವಿಸುತ್ತ ಬರಲಾಗುತ್ತಿದೆ. ರಾಜರತ್ನ ಅವರು ಧರ್ಮಸ್ಥಳ ಸೇರಿದಂತೆ ಹಲವಾರು ಮಸ್ತಕಾಭಿಷೇಕಗಳಲ್ಲಿ ಹಗಲಿರುಳು ಶ್ರಮಿಸಿದ್ದಾರೆ. ಅನೇಕ ದಶಕಗಳ ಕಾಲ ಧಾರ್ಮಿಕ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತ ಬಂದಿದ್ದಾರೆ’ ಎಂದು ಹೇಳಿದರು.

ಮುನಿಶ್ರೀ ವೀರಸಾಗರ ಮಹಾರಾಜ ಮಾತನಾಡಿ, ‘ಜೈನ ಧರ್ಮದಲ್ಲಿ ಹುಟ್ಟಿದ ಮಾತ್ರಕ್ಕೆ ಎಲ್ಲರೂ ಮಹಾನ್‌ ವ್ಯಕ್ತಿಗಳಾಗುವುದಿಲ್ಲ. ತಾನು ಮಾಡುವ ಕೃತ್ಯಗಳಿಂದ ಮಾತ್ರ ಮನುಷ್ಯ ಉನ್ನತಿ ಸಾಧಿಸಲು ಸಾಧ್ಯ. ಅಂಜಿಕೆ ಮತ್ತು ನಾಚಿಕೆ ಬಿಡುವವರೆಗೆ ವ್ಯಕ್ತಿ ದೊಡ್ಡವನಾಗಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಧರ್ಮಸ್ಥಳ ಕ್ಷೇತ್ರದ ಕಲಾವಿದರು ‘ಭರತೇಶ ವೈಭವ’ ಎಂಬ ಯಕ್ಷಗಾನ ಪ್ರಸಂಗ ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.