ADVERTISEMENT

‘ವಿವಿಗಳು ಮರುಭೂಮಿಗಳಾಗಿವೆ’

ಹಿರಿಯ ಇತಿಹಾಸಕಾರ ಪ್ರೊ. ಷ.ಶೆಟ್ಟರ್‌ ಬೇಸರ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2015, 20:08 IST
Last Updated 26 ಏಪ್ರಿಲ್ 2015, 20:08 IST
ಕೃತಿ ಬಿಡುಗಡೆ ಮಾಡಿದ ಹಿರಿಯ ಇತಿಹಾಸಕಾರ ಪ್ರೊ. ಷ. ಶೆಟ್ಟರ್‌  ಅವರು ಕೃತಿಯ ಪ್ರತಿಯನ್ನು ವಸು ಮಳಲಿ ಅವರ ಪುತ್ರಿ ಅವನಿ ಅವರಿಗೆ ನೀಡಿದರು. ವಸು ಮಳಲಿ ಅವರ ತಾಯಿ ಶಾಂತಾ ವಸಂತಕುಮಾರ್‌, ಲೇಖಕಿಯರಾದ ಕೆ. ನೀಲಾ, ಡಾ. ಮೀನಾಕ್ಷಿ ಬಾಳಿ ಚಿತ್ರದಲ್ಲಿದ್ದಾರೆ
ಕೃತಿ ಬಿಡುಗಡೆ ಮಾಡಿದ ಹಿರಿಯ ಇತಿಹಾಸಕಾರ ಪ್ರೊ. ಷ. ಶೆಟ್ಟರ್‌ ಅವರು ಕೃತಿಯ ಪ್ರತಿಯನ್ನು ವಸು ಮಳಲಿ ಅವರ ಪುತ್ರಿ ಅವನಿ ಅವರಿಗೆ ನೀಡಿದರು. ವಸು ಮಳಲಿ ಅವರ ತಾಯಿ ಶಾಂತಾ ವಸಂತಕುಮಾರ್‌, ಲೇಖಕಿಯರಾದ ಕೆ. ನೀಲಾ, ಡಾ. ಮೀನಾಕ್ಷಿ ಬಾಳಿ ಚಿತ್ರದಲ್ಲಿದ್ದಾರೆ   

ಬೆಂಗಳೂರು: ‘ರಾಜ್ಯದ ವಿಶ್ವವಿದ್ಯಾಲಯಗಳು ಮರುಭೂಮಿಗಳಾಗಿವೆ. ವಿವಿಗಳ ಇತಿಹಾಸ ವಿಭಾಗಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಇಲ್ಲಿ ಹುಡುಕಿದರೆ 4–5 ಇತಿಹಾಸಕಾರರು ಸಿಗಬಹುದು’ ಎಂದು ಹಿರಿಯ ಇತಿಹಾಸಕಾರ ಪ್ರೊ. ಷ.ಶೆಟ್ಟರ್‌ ಬೇಸರ ವ್ಯಕ್ತಪಡಿಸಿದರು.

‘ನಾವು ಭಾರತೀಯರು’ ಸಂಘಟನೆ ವತಿಯಿಂದ ನಗರದ ಸೆಂಟ್ರಲ್‌ ಕಾಲೇಜಿನ ಸೆನೆಟ್‌ ಸಭಾಂಗಣದಲ್ಲಿ ಭಾನುವಾರ ನಡೆದ ವಸು ಮಳಲಿ ನೆನಪು ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

‘ಯಾಂತ್ರಿಕವಾಗಿ ಬೋಧನೆ ಮಾಡುವ ಅಧ್ಯಾಪಕರು ನಮಗೆ ಬೇಕಿಲ್ಲ.  ಸಾಂಪ್ರದಾಯಿಕ ಮಾದರಿಯನ್ನು ಕೈಬಿಟ್ಟು ಹೊಸ ಇತಿಹಾಸ ಹೇಳುವ ಹಸಿವು ಪ್ರಾಧ್ಯಾಪಕರಿಗೆ ಇರಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

‘ಪಠ್ಯಪುಸ್ತಕ ರಚನೆ ಮಾಡುವಾಗ ಅತಿರೇಕದ, ಉತ್ಪ್ರೇಕ್ಷೆಯ ವಿಷಯಗಳನ್ನು ಬದಿಗಿರಿಸಬೇಕು. ಪಠ್ಯ ಸರಳ ಭಾಷೆಯಲ್ಲಿ ಇರಬೇಕು. ಅದು ಮಕ್ಕಳಿಗೆ ಬಹಳ ಪ್ರಮುಖವಾದುದು ಅನಿಸಬೇಕು’ ಎಂದರು.

ಲೇಖಕಿ ಕೆ. ನೀಲಾ ಮಾತನಾಡಿ, ‘ಶಿಕ್ಷಣ ಕ್ಷೇತ್ರದಲ್ಲಿನ ಅನೇಕ ಲೇಖಕರು ಒಂದೆರಡು ಕೃತಿಗಳನ್ನು ಬರೆದ ಕೂಡಲೇ ಸಾಮಾನ್ಯ ಜನರಿಂದ ದೂರವಾಗಿ ಬಿಡುತ್ತಾರೆ. ಅವರಿಗೆ ಕರೆ ಮಾಡಲು ಹೆದರುವ ಸ್ಥಿತಿ ಇದೆ. ಆದರೆ, ವಸು ಅವರ ವ್ಯಕ್ತಿತ್ವ ವಿಭಿನ್ನ. ಅವರು ಸದಾ ಜನರೊಂದಿಗೆ ಬೆರೆಯುತ್ತಿದ್ದರು’ ಎಂದರು.

‘ಸಮಾಜ ಕಟ್ಟಲು ಹಮ್ಮು ಬಿಮ್ಮು ಇಲ್ಲದ, ಸ್ವಾರ್ಥ ಇಲ್ಲದ, ಜೀವಪರ ನಿಲುವು ತಳೆದಿರುವ ವ್ಯಕ್ತಿಗಳು ನಮಗೆ ಬೇಕು’ ಎಂದರು.
ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್‌ ಅಮೀನ್‌ ಮಟ್ಟು ಉಪಸ್ಥಿತರಿದ್ದರು. ಈ ಸಂದರ್ಭ
ದಲ್ಲಿ ‘ವಸು ಮಳಲಿ– ಉಳಿದವರು ಕಂಡಂತೆ’ ಹಾಗೂ ‘ಒಡಲ ಬೆಂಕಿ ಆರದಿರಲಿ’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

*
ನಮ್ಮಲ್ಲಿ ಅಧ್ಯಾಪಕರ ಮೌಢ್ಯ ವಿದ್ಯಾರ್ಥಿಗಳ ಮೌಢ್ಯಕ್ಕಿಂತ ಜಾಸ್ತಿ ಇದೆ. ಇದು ದೊಡ್ಡ ಸಮಸ್ಯೆ.

ಷ.ಶೆಟ್ಟರ್‌, ಇತಿಹಾಸಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT