ADVERTISEMENT

‘ಶೋಷಣೆಯೇ ನನ್ನನ್ನು ಕವಿಯಾಗಿಸಿತು’

‘ಮನೆಯಂಗಳದಲ್ಲಿ ಮಾತುಕತೆ’ಯ ಅತಿಥಿಯಾಗಿ ಡಾ. ಸಿದ್ದಲಿಂಗಯ್ಯ

​ಪ್ರಜಾವಾಣಿ ವಾರ್ತೆ
Published 17 ಜುಲೈ 2015, 19:30 IST
Last Updated 17 ಜುಲೈ 2015, 19:30 IST

ಬೆಂಗಳೂರು: ‘ಬಾಲ್ಯದಲ್ಲಿ ಅನುಭವಿಸಿದ ಹಸಿವು ಮತ್ತು  ಶೋಷಣೆಯೇ ನನ್ನನ್ನು ಕವಿಯಾಗಿಸಿತು’ ಎಂದು ಹಿರಿಯ ಕವಿ ಡಾ. ಸಿದ್ದಲಿಂಗಯ್ಯ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ‘ಮನೆಯಂಗಳದಲ್ಲಿ ಮಾತುಕತೆ’ ತಿಂಗಳ ಕಾರ್ಯಕ್ರಮದ ಅತಿಥಿಯಾಗಿ ಅವರು ಮಾತನಾಡಿದರು.

‘ನಾನು ಐದು ವರ್ಷದವನಿದ್ದಾಗ ಒಂದು ದಿನ ಅಯ್ಯನವರ ಗದ್ದೆ ಕಡೆ ನೋಡುತ್ತಿದ್ದೆ. ಅಲ್ಲಿ ಎತ್ತಿನ ಬದಲಿಗೆ ಇಬ್ಬರು ವ್ಯಕ್ತಿಗಳ ಹೆಗಲಿಗೆ ನೊಗ ಕಟ್ಟಿ ಗದ್ದೆ ಉಳುತ್ತಿದ್ದರು. ಏನೂ ಅರಿಯದ ನನಗೆ ಅದು ವಿಚಿತ್ರ ಖುಷಿ ಕೊಟ್ಟಿತ್ತು. ಎತ್ತಿಗಿಂತ ಇದೇ ಒಂಥರ ಚೆನ್ನಾಗಿದೆ ಎಂದುಕೊಂಡಿದ್ದೆ. ಆದರೆ, ಸಂಜೆ ಅಪ್ಪನ ಹೆಗಲಿಗೆ ಅಮ್ಮ ಎಣ್ಣೆ ತಿಕ್ಕಿ ನೇವರಿಸುವಾಗ ತಿಳಿಯಿತು ಬೆಳಿಗ್ಗೆಯಿಂದ ಗದ್ದೆಯಲ್ಲಿ ಎತ್ತಾಗಿದ್ದ ಇಬ್ಬರಲ್ಲಿ ಒಬ್ಬ ನನ್ನಪ್ಪ ಎಂದು. ಅವತ್ತೇ ಇಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಭಾವ ಬೆಳೆದಿತ್ತು’ ಎಂದು ಬಾಲ್ಯದಲ್ಲಿ ಕಂಡ ನೋವಿನ ಕ್ಷಣವನ್ನು ತೆರೆದಿಟ್ಟರು.

‘ಸಾಲದ ಬಾಧೆಯಿಂದ ಅಪ್ಪ ರಾತ್ರೋರಾತ್ರಿ ಊರು ಬಿಟ್ಟು ಬೆಂಗಳೂರಿಗೆ ಬಂದಿದ್ದ. ಕೆಲ ತಿಂಗಳು ಕಳೆದ ನಂತರ ಹೆಂಡತಿ ಮಕ್ಕಳನ್ನು ಕರೆಸಿಕೊಂಡಿದ್ದ. ಶ್ರೀರಾಮಪುರದ ಸ್ಲಂನಲ್ಲಿ ವಾಸ ಆರಂಭಿಸಿದ್ದೆವು. ಅಲ್ಲಿನ ಸರ್ಕಾರಿ ಶಾಲೆಯಲ್ಲಿ ಆಂಡಾಳಮ್ಮ  ಅಂತ  ಟೀಚರ್ ಇದ್ದರು. ಅವರು ಮಕ್ಕಳಿಗೆ ಮನೆಯಿಂದ ಪುಳಿಯೊಗರೆ ತಂದು ಹಂಚುತ್ತಿದ್ದರು.  ನನಗೆ ಪುಳಿಯೊಗರೆ ಎಂಬ ಪದ ಮತ್ತು ರುಚಿ ಎರಡೂ ಅಂದೇ ತಿಳಿದದ್ದು. ನಂತರ ದಿನಾ ಪುಳಿಯೊಗರೆಯದೇ ಧ್ಯಾನ. ಆಂಡಾಳಮ್ಮ ಟೀಚರ್‌ ದೇವತೆಯಂತೆ  ಕಂಡಿದ್ದರು’ ಎಂದು ನೆನಪಿನ ಬುತ್ತಿ ಬಿಚ್ಚಿಟ್ಟರು.

‘ಬೆಂಗಳೂರಿಗೆ ಬಂದ ನಂತರ ಅಮ್ಮ ಹಾಸ್ಟೆಲ್‌ನಲ್ಲಿ ಕಸ ಗುಡಿಸುವ ಕೆಲಸಕ್ಕೆ ಸೇರಿದ್ದಳು. ನಾನು ಅದೇ ಹಾಸ್ಟೆಲ್‌ನಲ್ಲಿದ್ದು ಶಾಲೆಗೆ ಹೋಗುತ್ತಿದ್ದೆ. ಒಂದಿನ ಹಾಸ್ಟೆಲ್‌ನಲ್ಲಿ  ಯಾವುದೋ ಹಬ್ಬ ಆಚರಿಸುತ್ತಿದ್ದರು. ಊಟದ ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರನ್ನು ಎಳೆದು ಹೊರಗೆ ದಬ್ಬುತ್ತಿದ್ದ ದೃಶ್ಯ ಕಂಡಿತು. ನೋಡಿದರೆ ಅದು ನನ್ನಪ್ಪ. ಹೆಂಡತಿ, ಮಗ ಇಬ್ಬರೂ ಹಾಸ್ಟೆಲ್‌ನಲ್ಲಿದ್ದಾರೆ ಎಂಬ ಸಲುಗೆಯಿಂದ ಅಪ್ಪ ಊಟಕ್ಕೆ ಬಂದು ನಿಂತಿದ್ದ. ಆದರೆ, ಒಂದು ಹೊತ್ತಿನ ಊಟಕ್ಕೆ ಬಂದವನನ್ನು ಈ ರೀತಿ ಹೊರದಬ್ಬುವುದನ್ನು ಕಂಡು ಆಘಾತವಾಗಿತ್ತು. ಇಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಭಾವನೆ ಇನ್ನಷ್ಟು ನಿಚ್ಚಳವಾಗಿತ್ತು’ ಎಂದರು.

‘ನಂತರ ಎಂ.ಜಿ. ರಸ್ತೆಯಲ್ಲಿದ್ದ  ಹಾಸ್ಟೆಲ್‌ಗೆ ಸೇರಿದ್ದೆ. ಅಲ್ಲಿ  ಊಟ ಬಡಿಸುವಾಗ ನಾನು ತಟ್ಟೆ ನೋಡುವ ಬದಲು ಬೇರೆಲ್ಲೋ ನೋಡುತ್ತಿದ್ದೆ. ತಟ್ಟೆ ನೋಡಿದರೆ ಸಾಕು ಎನ್ನಬೇಕಾಗುತ್ತದೆ,  ಬಡಿಸುವಷ್ಟು ಬಡಿಸಲಿ ಅಂತ ಹಾಗೆ ಮಾಡುತ್ತಿದ್ದೆ. ಹೊಟ್ಟೆ ತುಂಬ ಊಟಕ್ಕಾಗಿ ಅಷ್ಟು ಆಸೆಪಡುತ್ತಿದ್ದೆ’ ಎಂದು ಹಸಿವಿನ ಕತೆ ಬಿಚ್ಚಿಟ್ಟರು.

ಸ್ಮಶಾನದಲ್ಲಿ ಕವಿಯಾದೆ
ಮನೆಗೆ ನೆಂಟರು ಬಂದರೆ ಮಕ್ಕಳು ಹೊರಗಿರಬೇಕಿತ್ತು. ಹೊರಗೆ ಬಂದರೆ ರಸ್ತೆಯಲ್ಲಿ ಓಡಾಡುವ ಜನರನ್ನು ನೋಡುತ್ತಾ ನಿಲ್ಲಬೇಕಿತ್ತು. ಹೀಗೆ ರಸ್ತೆಯಲ್ಲಿ ನಿಲ್ಲಲಾಗದೆ ಒಂದಿನ ಉತ್ತರ ದಿಕ್ಕಿಗೆ ನಡೆದುಕೊಂಡು ಹೋದೆ. ಅಲ್ಲಿ ಸ್ಮಶಾನ ಸಿಕ್ಕಿತು.

ಅಲ್ಲಿನ ಹಾಸುಗಲ್ಲು, ಹೂವಿನ ಗಿಡಗಳನ್ನು ನೋಡಿ ಅಲ್ಲೇ ಇದ್ದುಬಿಡುವ ಮನಸಾಯಿತು. ಅಲ್ಲೇ ಕುಳಿತು ಹೋರಾಟದ ಹಾಡುಗಳನ್ನು ಬರೆಯತೊಡಗಿದೆ. ಸ್ಮಶಾನ ಕಾಯುವ ಕುಟುಂಬದವರು ರಾತ್ರಿಯೆಲ್ಲ ಟೀ ಮಾಡಿ ಕೊಡುತ್ತಿದ್ದರು. ಅಲ್ಲೇ ‘ಹೊಲೆಮಾದಿಗರ  ಹಾಡು ರಚಿಸಿದ್ದೆ’ ಎಂದು ಸಿದ್ದಲಿಂಗಯ್ಯ ನೆನಪು ಮಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT