ADVERTISEMENT

‘ಸಮತೋಲಿತ ಸಾಹಿತ್ಯ ಇಂದಿನ ಅಗತ್ಯ’

​ಪ್ರಜಾವಾಣಿ ವಾರ್ತೆ
Published 6 ಜುಲೈ 2015, 19:30 IST
Last Updated 6 ಜುಲೈ 2015, 19:30 IST

ಬೆಂಗಳೂರು:  ‘ಸ್ತ್ರೀವಾದ ಪುರುಷ ಜಾತಿಯನ್ನು ವಿರೋಧಿಸಲು  ಸೀಮಿತ ವಾಗಬಾರದು’ ಎಂದು ಕರ್ನಾಟಕ ಉರ್ದು ಅಕಾಡೆಮಿ ಅಧ್ಯಕ್ಷೆ ಫೌಜಿಯಾ ಚೌಧರಿ ಅಭಿಪ್ರಾಯಪಟ್ಟರು.

ಸಾಹಿತ್ಯ ಅಕಾಡೆಮಿ ಹಾಗೂ ಜೈನ್‌ ವಿಶ್ವವಿದ್ಯಾಲಯದಿಂದ ಸೋಮವಾರ ನಗರದಲ್ಲಿ ಆಯೋಜಿಸಿದ್ದ ‘ನಾರೀ ಚೇತನ’ ಕಾರ್ಯಕ್ರಮದಲ್ಲಿ ‘ಹೊಸ ಸ್ತ್ರೀವಾದಿ ಚಿಂತನೆಗಳು ಹಾಗೂ ಹೊಸ ಪ್ರತಿಸ್ಪಂದನೆಗಳು’ ಕುರಿತ ಚರ್ಚಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಮಹಿಳೆಯರ ಮೇಲೆ ನಡೆಯುತ್ತಿರುವ ಎಲ್ಲ ರೀತಿಯ ದೌರ್ಜನ್ಯಗಳಿಗೆ ಕೇವಲ ಪುರುಷರನ್ನು ಹೊಣೆ ಮಾಡು ವುದು ಸರಿಯಲ್ಲ. ಪುರುಷರನ್ನು ವಿರೋಧಿಸಲೆಂದೇ ಸ್ತ್ರೀಯರು ಸಾಹಿತ್ಯ ಬರೆದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ. ಇಂದು ಸಮತೋಲಿತ ಸಾಹಿತ್ಯದ ಅವಶ್ಯಕತೆ ಇದೆ. ಮಹಿಳೆ ತನ್ನ ಹಕ್ಕಿಗಾಗಿ ಯಾರೊಂದಿಗೂ ಕದನಕ್ಕೆ ಇಳಿಯುವ ಅಗತ್ಯವಿಲ್ಲ.  ಶಿಕ್ಷಣ, ಜ್ಞಾನದ ಮೂಲಕ ತನ್ನ ಪಾಲಿನ ಹಕ್ಕುಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕು’ ಎಂದು ಸಲಹೆ ಮಾಡಿದರು.

‘ಹೆಣ್ಣಿನ ದೊಡ್ಡ ಶತ್ರು ಆಕೆಯಲ್ಲಿರುವ ದೌರ್ಬಲ್ಯ. ಇದರಿಂದ ಹೊರಬಂದರೆ ಆಕೆ ಏನು ಬೇಕಾದರೂ ಸಾಧಿಸಬಲ್ಲಳು’ ಎಂದು ಹೇಳಿದರು.
ಲೇಖಕಿ ಪಿ. ಚಂದ್ರಿಕಾ ಅವರು ಮಾತನಾಡಿ, ‘ಬಹಳ ಉದಾರವಾಗಿ ಕಾಣುವ ಇಂದಿನ ಜಗತ್ತಿನಲ್ಲಿ ಮಹಿಳೆ ಮೇಲೆ ಹೊಸ ರೀತಿಯ ಕ್ರೌರ್ಯಗಳು ನಡೆಯುತ್ತಿವೆ’ ಎಂದು ಹೇಳಿದರು.

ಲೇಖಕಿ ಅಂಶು ಜೋಹ್ರಿ ಮಾತನಾಡಿ, ‘ಲಿಂಗ ಪಾತ್ರದ ಬಗ್ಗೆ ಸಮಾಜದಲ್ಲಿ ದೊಡ್ಡ ಗೊಂದಲ ಇದೆ’ ಎಂದು ತಿಳಿಸಿದರು.
‘ಹೆಣ್ಣು ಮತ್ತು ಗಂಡು ಮಕ್ಕಳನ್ನು ಸಮಾನವಾಗಿ ಬೆಳೆಸಿದರೆ ಲಿಂಗ ತಾರತಮ್ಯಕ್ಕೆ ಆಸ್ಪದವೇ ಸಿಗುವುದಿಲ್ಲ’ ಎಂದೂ ಹೇಳಿದರು.
ಇದೇ ವೇಳೆ ಪುಸ್ತಕ ಪ್ರದರ್ಶನ ಮತ್ತು ಮಾರಾಟವೂ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.