ADVERTISEMENT

‘ಸಿನಿಮಾ ಸಾಮಾಜಿಕ ಶಿಕ್ಷಣದ ಪ್ರಭಾವಿ ಮಾಧ್ಯಮ’

ಚಲನಚಿತ್ರ ಅಕಾಡೆಮಿಯಿಂದ ಕನ್ನಡ ಚಿತ್ರರಂಗ ಕುರಿತ ‘ಚಂದನವನ’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2015, 20:06 IST
Last Updated 28 ನವೆಂಬರ್ 2015, 20:06 IST

ಬೆಂಗಳೂರು: ಕನ್ನಡ ಚಿತ್ರರಂಗದ ಕುರಿತು ಕರ್ನಾಟಕ ಚಲನಚಿತ್ರ ಅಕಾಡೆಮಿ ಹೊರತಂದಿರುವ ‘ಚಂದನವನ’ ಪುಸ್ತಕವನ್ನು ನಗರದಲ್ಲಿ ಶನಿವಾರ ಅಕಾಡೆಮಿ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ನಿರ್ದೇಶಕ ಟಿ.ಎಸ್.ನಾಗಾಭರಣ, ‘ಸಿನಿಮಾ ಮಾಧ್ಯಮವನ್ನು ಇಂದು ಬೇಕಾಬಿಟ್ಟಿಯಾಗಿ ಬಳಸಲಾಗುತ್ತಿದೆ. ಆದರೆ, ಅದೊಂದು ಸಾಮಾಜಿಕ ಶಿಕ್ಷಣವನ್ನು ಅತ್ಯಂತ ಪ್ರಭಾವಿಯಾಗಿ ನೀಡುವ ನೈಜ ಮಾಧ್ಯಮವೆಂದು ಚಿತ್ರರಂಗದ ಬಹಳಷ್ಟು ಮಂದಿ ಮರೆತಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಕನ್ನಡ ಚಿತ್ರರಂಗದ ಸಾಧನೆ ಕಡಿಮೆ ಎಂದು ಕೆಲವರು ಆಧಾರರಹಿತವಾಗಿ ಮಾತನಾಡುತ್ತಾರೆ. ಆದರೆ, ಅಕಾಡೆಮಿ ಹೊರತಂದಿರುವ ಚಂದನವನದಲ್ಲಿ ಒಳಹೊಕ್ಕು ನೋಡಿದಾಗ ಅವರ ಆರೋಪ ಸಳ್ಳು ಎನಿಸುತ್ತದೆ’ ಎಂದರು.

‘ಸಿನಿಮಾ ಮಂದಿ ತಮ್ಮ ಕುರಿತು ಈ ಪುಸ್ತಕದಲ್ಲಿ ಏನಾದರೂ ಬಂದಿದ್ದರೆ ಮಾತ್ರ ನೋಡುತ್ತಾರೆ. ಆದರೆ, ಸಿನಿಮಾ ವಿದ್ಯಾರ್ಥಿಗಳಿಗೆ ಚಂದನವನ ದಾರಿದೀಪವಾಗುವುದರಲ್ಲಿ ಸಂದೇಹವಿಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿರ್ದೇಶಕ ಗಿರೀಶ್ ಕಾಸರವಳ್ಳಿ ಮಾತನಾಡಿ, ‘ಕನ್ನಡ ಚಿತ್ರರಂಗದ ಬಗ್ಗೆ ಅತ್ಯುತ್ತಮ ಪುಸ್ತಕವೊಂದನ್ನು ಅಕಾಡೆಮಿ ವಿಶೇಷ ಕಾಳಜಿ ವಹಿಸಿ ಪ್ರಕಟಿಸಿರುವುದು ಶ್ಲಾಘನೀಯ. ಬೆಳ್ಳಿಸಿನಿಮಾ ಮತ್ತು ಬೆಳ್ಳಿ ಹೆಜ್ಜೆ ಕಾರ್ಯಕ್ರಮಗಳು ರಾಜ್ಯದ ಬೇರೆ ಕಡೆಯೂ ನಡೆಯೂವಂತಾಗಲಿ’ ಎಂದು ಆಶಿಸಿದರು.

ಅಕಾಡೆಮಿ ಅಧ್ಯಕ್ಷ ರಾಜೇಂದ್ರಸಿಂಗ್ ಬಾಬು ಮಾತನಾಡಿ, ‘ಕನ್ನಡ ಚಿತ್ರರಂಗದ ತಾಂತ್ರಿಕತೆಗೆ ಸಂಬಂಧಿಸಿದ ಪುಸ್ತಕಗಳನ್ನು ಮುಂಬರುವ ದಿನಗಳಲ್ಲಿ ಪ್ರಕಟಿಸಲಾಗುವುದು. ಒಟ್ಟಾರೆ ಸಿನಿಮಾ ಪುಸ್ತಕಗಳಿಗೆ ಗ್ರಂಥಾಲಯವೊಂದನ್ನು ಸ್ಥಾಪಿಸಲಾಗುವುದು’ ಎಂದು ತಿಳಿಸಿದರು.

ಪುಸ್ತಕದ ಸಂಪಾದಕ ಮಂಡಳಿ ಸದಸ್ಯ, ಪತ್ರಕರ್ತ ಚ.ಹ.ರಘುನಾಥ್ ಮಾತನಾಡಿ, ‘ಚಿತ್ರರಂಗದ ಬಗ್ಗೆ ಪುಸ್ತಕವನ್ನು ಹೊರತರುವುದೆಂದರೆ, ಕೇವಲ ಅಂಕಿ–ಸಂಖ್ಯೆಗಳ ಸಂಗ್ರಹವಲ್ಲ. ಅದು ಸಿನಿಮಾ ಜಗತ್ತಿನ ಅನುಸಂದಾನ ಹಾಗೂ ವಿಶ್ಲೇಷಣೆ’ ಎಂದು ಅಭಿಪ್ರಾಯಪಟ್ಟರು.

‘ಪುಸ್ತಕದ ರಚನೆಗೆ ಸಾಕಷ್ಟು ಸಮಸ್ಯೆಗಳು ಎದುರಾದವು. ನಮ್ಮ ಸಿನಿಮಾಗಳ ಬಗೆಗಿನ ಸರಿಯಾದ ಮಾಹಿತಿಗಳನ್ನು ಚಲನಚಿತ್ರ ಅಕಾಡೆಮಿಯವರಾಗಲಿ, ವಾಣಿಜ್ಯ ಮಂಡಳಿಯವರಾಗಲಿ ಅಥವಾ ಚಿತ್ರರಂಗದವರಾಗಲಿ ಇಡದಿರುವುದು ದುರ್ದೈವದ ಸಂಗತಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು, ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್, ಹಾಗೂ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್ ಉಪಸ್ಥಿತರಿದ್ದರು. ಇದೇ ವೇಳೆ ಚಂದನವನ ಪುಸ್ತಕದ ಸಂಪಾದಕ ಮಂಡಳಿಯ ಸದಸ್ಯರಾದ ಚ.ಹ.ರಘುನಾಥ್, ವಿಶಾಖ ಎನ್ ಮತ್ತು ಚೇತನ ನಾಡಿಗೇರ್ ಅವರನ್ನು ಸನ್ಮಾನಿಸಲಾಯಿತು.
*
ವೆಬ್‌ಸೈಟ್‌ಗೆ ಚಾಲನೆ
ಕಾರ್ಯಕ್ರಮದಲ್ಲಿ ಚಲನಚಿತ್ರ ಅಕಾಡೆಮಿಯ ನೂತನ ವೆಬ್‌ಸೈಟ್‌ www.kcainfo.com ಗೆ ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧಾ ಚಾಲನೆ ನೀಡಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.