ADVERTISEMENT

‘ಸೆಲೆಬ್ರಿಟಿಗಿಂತ ಸಾಮಾಜಿಕ ಜಾಲತಾಣ ಪ್ರಭಾವಿ’

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2015, 19:48 IST
Last Updated 23 ಫೆಬ್ರುವರಿ 2015, 19:48 IST

ಬೆಂಗಳೂರು: ‘ಸಿನಿಮಾ ತಾರೆಗಳು ಇಲ್ಲವೆ ಕ್ರಿಕೆಟ್‌ ಆಟಗಾರರು ಜಾಹೀರಾತಿನಲ್ಲಿ ಕಾಣಿಸಿಕೊಂಡರೆ ಸರಕು ಮಾರಾಟವಾಗುವ ಜಮಾನ ಮುಗಿದಿದೆ. ಈಗೇನಿದ್ದರೂ ದೂರದಲ್ಲಿ ಎಲ್ಲೋ ಕುಳಿತು ಸರಕಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ತನ್ನ ಅಭಿಪ್ರಾಯವನ್ನು ನಿಸ್ಸಂಕೋಚವಾಗಿ ಹೇಳುವ ಜನಸಾಮಾನ್ಯನ ಪ್ರಭಾವವೇ ತುಂಬಿದೆ’
–ಆರ್‌. ಸ್ಕ್ವೇರ್‌ ಕನ್ಸಲ್ಟಿಂಗ್‌ ಸಂಸ್ಥೆ ನಗರದಲ್ಲಿ ಸೋಮವಾರದಿಂದ ಏರ್ಪಡಿಸಿರುವ ‘ಸಾಮಾಜಿಕ ಜಾಲತಾಣ ಸಪ್ತಾಹ’ದಲ್ಲಿ ನಡೆದ ತಜ್ಞರೊಂದಿ­ಗಿನ ಸಂವಾದದಲ್ಲಿ ಮೂಡಿಬಂದ ಅಭಿಪ್ರಾಯ ಇದು.

ಸೆಲೆಬ್ರಿಟಿಗಳು ಜಾಹೀರಾತಿನಲ್ಲಿ ಕಾಣಿಸಿಕೊಂಡ ಮಾತ್ರಕ್ಕೆ ಸರಕು ಮಾರಾಟವಾಗುವ ಖಾತ್ರಿ ಈಗಿಲ್ಲ. ಜಾಹೀರಾತಿನ ಬದಲು ಆ ಸೆಲೆಬ್ರಿಟಿಗಳಿಂದ ಟ್ವೀಟ್‌ ಮಾಡಿಸಿ ಇಲ್ಲವೆ ಫೇಸ್‌ಬುಕ್‌ನಲ್ಲಿ ಮೆಚ್ಚುಗೆ ಮಾತು ಬರೆಸಿ ವ್ಯಾಪಾರ ಗಿಟ್ಟಿಸಬ­ಹುದು. ಆದರೆ, ಸೆಲೆಬ್ರಿಟಿಗಳಿಗಿಂತ ಜನಸಾಮಾ­ನ್ಯರ ಪ್ರಾಮಾಣಿಕ ಅನಿಸಿಕೆಗಳಿಗೆ ಗ್ರಾಹಕರು ಮನ್ನಣೆ ನೀಡುತ್ತಾರೆ ಎಂದು ಸಂವಾದದಲ್ಲಿ ಪಾಲ್ಗೊಂಡ ಬಹುತೇಕ ತಜ್ಞರು ಅಭಿಪ್ರಾಯಪಟ್ಟರು.

‘ಸಾಮಾಜಿಕ ಜಾಲತಾಣದಲ್ಲಿ ತನ್ನ ಅಭಿಪ್ರಾಯ ಮಂಡಿಸುವ ಒಬ್ಬ ವ್ಯಕ್ತಿ ಎಷ್ಟು ಜನರ ಮೇಲೆ ಪ್ರಭಾವ ಬೀರಬಹುದು’ ಎನ್ನುವ ಪ್ರಶ್ನೆಯೂ ತೂರಿಬಂತು. ‘ಒಬ್ಬ ವ್ಯಕ್ತಿ 200 ಫೇಸ್‌ಬುಕ್‌ ಗೆಳೆಯರನ್ನು ಹೊಂದಿದ್ದರೆ ಅದರಲ್ಲಿ ಶೇ 10ರಷ್ಟಾದರೂ ಫೇಸ್‌ಬುಕ್‌ನಲ್ಲಿ ವ್ಯಕ್ತವಾದ ಅಭಿಪ್ರಾಯದಿಂದ ಪ್ರಭಾವಿತರಾಗುತ್ತಾರೆ’ ಐಬಿಎಂ ಮಾರುಕಟ್ಟೆ ವಿಭಾಗದ ನಿರ್ದೇಶಕ ವಸಂತಕುಮಾರ್‌ ಹೇಳಿದರು.

ಡೆಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಕೃಷ್ಣಕುಮಾರ್‌, ‘ನಮ್ಮ ಕಂಪೆನಿಯ ಎಲ್ಲ ಉದ್ಯೋಗಿಗಳೂ ಸಾಮಾಜಿಕ ಜಾಲತಾಣ­ವನ್ನು ಬಳಕೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲ­ತಾಣದ ಮೂಲಕ ಬ್ರಾಂಡ್‌ ಬೆಳೆಸುವ ನಮ್ಮ ಯೋಜನೆ ಒಳ್ಳೆಯ ಫಲವನ್ನೇ ಕೊಟ್ಟಿದೆ’ ಎಂದರು.

‘ಸರಕಿನ ಸರಿಯಾದ ಮಾಹಿತಿ, ಪಾರದರ್ಶಕ ನಡೆ, ಸೈಬರ್‌ ಕಾನೂನುಗಳ ಪಾಲನೆ ಬ್ರಾಂಡ್‌ ಬೆಳೆಸುವ ಕಾರ್ಯದಲ್ಲಿ ಅತ್ಯಗತ್ಯವಾಗಿವೆ’ ಎಂದು ಅವರು ಹೇಳಿದರು. ‘ಅಮೆರಿಕದಲ್ಲಿ ಪ್ರತಿ 8 ವಿವಾ­ಹ­ಗಳಲ್ಲಿ ಒಂದು ಸಾಮಾಜಿಕ ಜಾಲತಾಣದ ಮೂಲ­ಕವೇ ಆಗುತ್ತಿದ್ದು, ಈ ಮಾಧ್ಯಮ ಜಗತ್ತಿ­ನಾ­ದ್ಯಂತ ಬಲು ವೇಗವಾಗಿ ಬೆಳೆಯುತ್ತಿದೆ’ ಎಂದರು.

‘ಸಾಮಾಜಿಕ ಜಾಲತಾಣ ಹೊಸ ಧರ್ಮ­ವಾಗಿದೆ’ ಎಂದು ನಟಿ ಅದಿತಿ ಮಿತ್ತಲ್‌ ಅಭಿಪ್ರಾಯ­ಪಟ್ಟರು. ಪ್ರಾಸ್ತಾವಿಕವಾಗಿ ಮಾತನಾಡಿದ ಆರ್‌. ಸ್ಕ್ವೇರ್‌ ಕನ್ಸಲ್ಟಿಂಗ್‌ ಮುಖ್ಯಸ್ಥ ರೋಹಿತ್‌ ವರ್ಮಾ, ‘ದೇಶ­ದಲ್ಲಿ 11.8 ಕೋಟಿ ಜನ ಸಾಮಾ­ಜಿಕ ಜಾಲತಾಣ ಬಳಕೆ ಮಾಡುತ್ತಿದ್ದಾರೆ. ಪ್ರಭಾವಿ ಮಾಧ್ಯಮವಾಗಿ ಇದು ಬೆಳೆಯುತ್ತಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.