ADVERTISEMENT

‘ಸೇವ್‌ ವೈಟ್‌ಫೀಲ್ಡ್‌’ನಿಂದ ನಾಳೆ ಪ್ರತಿಭಟನೆ

ರಸ್ತೆ ರಿಪೇರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2015, 19:59 IST
Last Updated 28 ನವೆಂಬರ್ 2015, 19:59 IST

ಬೆಂಗಳೂರು: ರಾಜಧಾನಿಯ ಐಟಿ– ಬಿಟಿ ಪ್ರದೇಶ ಎಂದೇ ಖ್ಯಾತಿಯಾಗಿರುವ ವೈಟ್‌ಫೀಲ್ಡ್‌ ಸುತ್ತಮುತ್ತ ಹದಗೆಟ್ಟಿರುವ ರಸ್ತೆಗಳ ರಿಪೇರಿ ಸೇರಿದಂತೆ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ‘ಸೇವ್ ವೈಟ್‌ಫೀಲ್ಡ್‌’ ಸಂಘಟನೆ ಸದಸ್ಯರು ನ.  ಸೋಮವಾರ (ನ. 30) ಐಟಿಪಿಎಲ್‌ನಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಲಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಸಂಘಟನೆಯ ಉತ್ಕರ್ಷ್ ಸಿಂಗ್, ‘ನ. 16ರಂದು ವೈಟ್‌ಫೀಲ್ಡ್‌ನಲ್ಲಿ ಉಂಟಾಗಿದ್ದ ಸಂಚಾರ ದಟ್ಟಣೆಯಿಂದಾಗಿ ಬಹುತೇಕ ರಸ್ತೆಗಳು ಸ್ತಬ್ಧಗೊಂಡಿದ್ದವು. ಸುರಿಯುತ್ತಿದ್ದ ಮಳೆಯಲ್ಲೇ ಸವಾರರು ಸುಮಾರು 4 ತಾಸು ಕಳೆದರು’ ಎಂದು ಹೇಳಿದರು.

‘ಈ ಪ್ರದೇಶದ ರಸ್ತೆಗಳ ಅಸಮರ್ಪಕ ನಿರ್ವಹಣೆ ಮತ್ತು ಸಂಚಾರ ನಿರ್ವಹಣೆಯ ಕೊರತೆಯಿಂದಾಗಿ ಸಮಸ್ಯೆ ಉಂಟಾಗಿತ್ತು. ಈ ಕುರಿತು ಜನಾಂದೋಲನ ಪ್ರಾರಂಭಿಸುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದಾಗ, ಬಹುತೇಕ ಮಂದಿ ಬೆಂಬಲ ಸೂಚಿದರು’ ಎಂದರು. ‘ಅದೇ ಸ್ಫೂರ್ತಿಯಲ್ಲಿ ಪ್ರತಿಭಟನಾ ರ್‍ಯಾಲಿ ಆಯೋಜಿಸಲು 6 ದಿನಾಂಕಗಳನ್ನು ನಿಗದಿಪಡಿಸಿದೆವು. ಆದರೆ, ನ. 30 ಅಂತಿಮಗೊಂಡಿತು.

ಕಳೆದ ಮೂರು ತಿಂಗಳಲ್ಲಿ ಇಲ್ಲಿನ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ’ ಎಂದು ತಿಳಿಸಿದರು. ವೈಟ್‌ಫೀಲ್ಡ್‌ ರೈಸಿಂಗ್‌ (ಡಬ್ಲ್ಯೂ) ಸಂಘಟನೆಯ ಜಿಬಿ ಜಮಾಜ್, ‘ಇಲ್ಲಿನ ರಸ್ತೆಗಳು ಸದಾ ಸಂಚಾರದಟ್ಟಣೆಯಿಂದ ಕೂಡಿರುತ್ತವೆ. ಪಾದಚಾರಿ ಮಾರ್ಗಗಳು ಗೂಡು ಅಂಗಡಿಗಳಿಂದ ಅತಿಕ್ರಮವಾಗಿವೆ. ಕಿತ್ತುಹೋಗಿರುವ ರಸ್ತೆಗಳಲ್ಲಿ ವಾಹನ ಚಲಾಯಿಸುವುದೇ ಸವಾಲಾಗಿದೆ’ ಎಂದು ದೂರಿದರು.

ಸೇವ್ ವೈಟ್‌ಫೀಲ್ಡ್‌: ಸಂಚಾರ ಸಮಸ್ಯೆ ಮತ್ತು ನಾಗರಿಕ ಸೌಲಭ್ಯಗಳ ಕೊರತೆ ಕುರಿತು ದನಿ ಎತ್ತುವ ಸಲುವಾಗಿ, ಬೆರಳೆಣಿಕೆಯ ಸಮಾನ ಮನಸ್ಕರಿಂದ ಆರಂಭಗೊಂಡ ಈ ಸಂಘಟನೆಯೇ ‘ಸೇವ್ ವೈಟ್‌ಫೀಲ್ಡ್‌’.  ವೈಟ್‌ಪೀಲ್ಡ್ ಪ್ರದೇಶದ ನಿವಾಸಿಗಳು, ಐಟಿ–ಬಿಟಿ ಉದ್ಯೋಗಿಗಳು, ಆಟೊ ರಿಕ್ಷಾ, ಕ್ಯಾಬ್‌  ಹಾಗೂ ಶಾಲಾ ವಿದ್ಯಾರ್ಥಿಗಳು ಸೇರಿದಂತೆ 3 ಸಾವಿರ ಮಂದಿ ಈ ಸಂಘಟನೆಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.
*
ಎಲ್ಲೆಲ್ಲಿ ಜಾಥಾ
ವೈಟ್‌ಫೀಲ್ಡ್‌ ಪ್ರದೇಶದ ವ್ಯಾಪ್ತಿಯ ಮಾರತ್ತಹಳ್ಳಿ, ಗ್ರಾಫೈಟ್, ಕೆಟಿಪಿಒ, ಹೂಡಿ, ಫೋರಂ, ಓಫಾರಂ ಹಾಗೂ ನಲ್ಲೂರಹಳ್ಳಿಯಲ್ಲಿ ನಿಗದಿಯಾಗಿರುವ ಸ್ಥಳಗಳಲ್ಲಿ ಸದಸ್ಯರು ಬೆಳಿಗ್ಗೆ 10.30ಕ್ಕೆ ಜಾಗೃತಿ ಫಲಕ ಮತ್ತು ಭಿತ್ತಿಪತ್ರಗಳೊಂದಿಗೆ ಸೇರುತ್ತಾರೆ. ಬಳಿಕ ಅಲ್ಲಿಂದ ಮೆರವಣಿಗೆ ಮುಲಕ ರಾಜಧಾನಿಯ ಮೊದಲ ಐಟಿ ಹಬ್ ಎಂಬ ಹೆಗ್ಗಳಿಗೆ ಪಾತ್ರವಾದ ಐಟಿಪಿಎಲ್‌ ಬಳಿ ಮಧ್ಯಾಹ್ನ 12.30ಕ್ಕೆ ಸೇರಿದ ನಂತರ, ಪ್ರತಿಭಟನಾ ಸಭೆ ನಡೆಯಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.