ADVERTISEMENT

‘ಸ್ವಾಮೀಜಿಯಿಂದ ಪ್ರಚೋದನೆ, ಬೆಂಬಲಿಗರಿಂದ ಬೆದರಿಕೆ’

ಮತ್ತೆ ಅತ್ಯಾಚಾರ ನಿಯಂತ್ರಣ ಸಮಿತಿ ಮೊರೆ ಹೋದ ಪ್ರೇಮಲತಾ, ಉಗ್ರಪ್ಪ ಅವರಿಗೆ ಮನವಿ ಸಲ್ಲಿಸಿದ ದಂಪತಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2015, 20:00 IST
Last Updated 6 ಅಕ್ಟೋಬರ್ 2015, 20:00 IST

ಬೆಂಗಳೂರು:  ಅತ್ಯಾಚಾರ ಪ್ರಕರಣದಲ್ಲಿ ಸಿಐಡಿ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ ನಂತರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಬೆಂಬಲಿಗರು ಸಾಕ್ಷಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಇದಕ್ಕೆ ಸ್ವಾಮೀಜಿ ಪ್ರಚೋದನೆ ನೀಡುತ್ತಿದ್ದಾರೆ ಎಂದು ಸಂತ್ರಸ್ತೆ ಗಾಯಕಿ ಪ್ರೇಮಲತಾ ಆರೋಪಿಸಿದ್ದಾರೆ.

ಈ ಸಂಬಂಧ, ಪತಿ ದಿವಾಕರ ಶಾಸ್ತ್ರಿ ಅವರೊಂದಿಗೆ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರ ನಿಯಂ
ತ್ರಣ ಕುರಿತ ತಜ್ಞರ ಸಮಿತಿ ಅಧ್ಯಕ್ಷ  ವಿ.ಎಸ್‌.ಉಗ್ರಪ್ಪ ಅವರನ್ನು ಮಂಗಳವಾರ ಭೇಟಿಯಾಗಿ ದೂರು ನೀಡಿದರು.

‘ಸ್ವಾಮೀಜಿ ಶಿಷ್ಯರು ಸಾಮಾಜಿಕ ಜಾಲತಾಣಗಳಲ್ಲಿ ಸಾಕ್ಷಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಸ್ವಾಮೀಜಿ ವಿರುದ್ಧ ಮಾತನಾಡಬೇಡಿ. ನಿಮ್ಮ ನಿಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳಿ.  ಇಲ್ಲದಿದ್ದರೆ ಮುಂದಿನ ಅನಾಹುತಗಳಿಗೆ ನೀವೇ ಜವಾಬ್ದಾರರಾಗುತ್ತೀರಿ ಎಂದು ಹೆದರಿಸುತ್ತಿದ್ದಾರೆ. ಇದಕ್ಕೆ ಅಗತ್ಯವಾದ ಸಾಕ್ಷ್ಯಗಳು ನಮ್ಮಲ್ಲಿ ಇವೆ’ ಎಂದು ಉಗ್ರಪ್ಪ ಅವರಿಗೆ ದಿವಾಕರ ಶಾಸ್ತ್ರಿ ತಿಳಿಸಿದರು.

‘ಸ್ವತಃ ಸ್ವಾಮೀಜಿಯವರು ಪ್ರಚೋದನಕಾರಿ ಭಾಷಣ ಮಾಡಿ, ಶಿಷ್ಯರನ್ನು ಉತ್ತೇಜಿಸುತ್ತಿದ್ದಾರೆ. ಅವರ ಬೆಂಬಲಿಗರು ಧಾರ್ಮಿಕ ಭಯೋತ್ಪಾದನೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ  ಉಗ್ರರ ಪಡೆಯೇ ಇದೆ’ ಎಂದು ಅವರು ಆರೋಪಿಸಿದರು.

‘ಪುತ್ತೂರಿನ ಕಾಲೇಜೊಂದರಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ಪ್ರಕರಣದ ಸಾಕ್ಷಿದಾರರೊಬ್ಬರಿಗೆ, ಎಂ.ಎಂ. ಕಲಬುರ್ಗಿಗೆ ಆದ ಗತಿ ನಿಮಗೂ ಆಗಲಿದೆ ಎಂದು ಬೆದರಿಕೆ ಒಡ್ಡಿದ್ದಾನೆ. ಇದರಿಂದ ಭಯಭೀತರಾಗಿರುವ ಅವರು ಪೊಲೀಸರಿಗೆ ದೂರು ನೀಡಲು ಹಿಂಜರಿಯುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡರು.

ಪರಿಹಾರ ಬೇಕು: ‘ಬೆದರಿಕೆ ಸಂಬಂಧ ಬನಶಂಕರಿ ಪೊಲೀಸ್‌ ಠಾಣೆಯಲ್ಲಿ ಈ ಹಿಂದೆಯೇ ದೂರು ನೀಡಿದ್ದೇವೆ. ಆದರೆ, ಪೊಲೀಸರು ಇನ್ನೂ ಎಫ್‌ಐಆರ್‌ ದಾಖಲಿಸಿಲ್ಲ. ಪುತ್ತೂರಿನ ಠಾಣೆಯಲ್ಲಿ ದೂರು ನೀಡಲು ಹೋದರೆ, ಪೊಲೀಸರು ಸ್ವಾಮೀಜಿ ಹೆಸರು ತೆಗೆಯಿರಿ ನಂತರ ದೂರು ಸ್ವೀಕರಿಸುತ್ತೇವೆ ಎಂದು ಹೇಳುತ್ತಿದ್ದಾರೆ’ ಎಂದರು.

‘ವ್ಯವಸ್ಥೆ ನಮ್ಮ ರಕ್ಷಣೆಗೆ ಬರುತ್ತಿಲ್ಲ. ಸ್ವಾಮೀಜಿಗೆ ನೀಡಿರುವ ಜಾಮೀನನ್ನು ಪ್ರಶ್ನಿಸಲು ಸರ್ಕಾರದ ವಕೀಲರಿಗೆ ಒಂದು ವರ್ಷ ಬೇಕಾಯಿತು. ಪ್ರೇಮಲತಾ ಪ್ರತಿ ದಿನ  ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾಳೆ’ ಎಂದರು.

ರಕ್ಷಣೆಯ ಅಗತ್ಯವಿದೆಯೇ ಎಂದು ಉಗ್ರಪ್ಪ ಕೇಳಿದ್ದಕ್ಕೆ, ‘ರಕ್ಷಣೆ ಬೇಕಾಗಿಲ್ಲ. ಶಾಶ್ವತ ಪರಿಹಾರ ಬೇಕು’ ಎಂದು ಮನವಿ ಮಾಡಿದರು. ದೂರು ಸ್ವೀಕರಿಸಿದ ಉಗ್ರಪ್ಪ, ಸಂಬಂಧಿಸಿದ ಪೊಲೀಸ್‌ ಅಧಿಕಾರಿಗಳೊಂದಿಗೆ ಮಾತನಾಡಿ ನ್ಯಾಯ ಕೊಡಿಸುವ ಭರವಸೆ ನೀಡಿದರು.

ರಾಘವೇಶ್ವರರ ಜಾಮೀನು ರದ್ದು ಕೋರಿ ಸಿಐಡಿ ಅರ್ಜಿ
ರಾಮಕಥಾ ಗಾಯಕಿ ಪ್ರೇಮಲತಾ ಅವರ ಮೇಲಿನ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗೆ ಮಂಜೂರು ಮಾಡಿರುವ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಬೇಕು ಎಂದು  ಸೆಷನ್ಸ್ ಕೋರ್ಟ್‌ಗೆ ಸಿಐಡಿ ಮಂಗಳವಾರ ಅರ್ಜಿ ಸಲ್ಲಿಸಿದೆ.

‘ಪ್ರಕರಣ ಸಂಬಂಧ ಸ್ವಾಮೀಜಿ ವೈದ್ಯಕೀಯ ಪರೀಕ್ಷೆಗೆ ಹಾಜರಾಗಿಲ್ಲ. ಇದು ಜಾಮೀನು ಷರತ್ತಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಹಾಗಾಗಿ ಸ್ವಾಮೀಜಿ ಅವರಿಗೆ ನೀಡಿರುವ ಜಾಮೀನು ರದ್ದುಪಡಿಸುವಂತೆ ಅರ್ಜಿ ಸಲ್ಲಿಸಲಾಗಿದೆ’ ಎಂದು ಸಿಐಡಿ ಪರ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎ. ಬೆಳ್ಳಿಯಪ್ಪ ನ್ಯಾಯಾಲಯಕ್ಕೆ ತಿಳಿಸಿದರು.

ಪುರುಷತ್ವ ಪರೀಕ್ಷೆ ಸೇರಿದಂತೆ ಮೂರು ಬಗೆಯ ವೈದ್ಯಕೀಯ ಪರೀಕ್ಷೆಗೆ ಹಾಜರಾಗುವಂತೆ ಸಿಐಡಿ ಪೊಲೀಸರು ಸೆಪ್ಟೆಂಬರ್ 30ರಂದು ಸ್ವಾಮೀಜಿಗೆ ನೋಟಿಸ್ ಜಾರಿ ಮಾಡಿದ್ದರು. ಅಲ್ಲದೆ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ  ಪರೀಕ್ಷೆಯನ್ನು ನಿಗದಿಪಡಿಸಿದ್ದರು.
ಆದರೆ,  ಪರೀಕ್ಷೆಗೆ ಗೈರಾಗಿದ್ದ ಸ್ವಾಮೀಜಿ, ‘ನಾನು ಈಗಾಗಲೇ ಡಿಎನ್‌ಎ ಪರೀಕ್ಷೆಗೆ ಹಾಜರಾಗಿದ್ದೇನೆ. ಹಾಗಾಗಿ ಉಳಿದ ಮೂರು ಪರೀಕ್ಷೆ ಅಗತ್ಯವಿಲ್ಲ’ ಎಂದು ಸಿಐಡಿಗೆ ಪತ್ರ ಬರೆದಿದ್ದರು.

ಮುಖ್ಯಾಂಶಗಳು
* ಸಾಕ್ಷಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರೇಮಲತಾ ಆರೋಪ

* ಬೆದರಿಕೆ ಸಂಬಂಧ ಎಫ್‌ಐಆರ್ ದಾಖಲಿಸದ ಪೊಲೀಸರು: ದಿವಾಕರ್

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.