ADVERTISEMENT

‘ಹೀಗೆ ಬಂದು, ಹಾಗೆ ಹೋದಳು...’

ಅರ್ಪಿತಾ ಸಹಪಾಠಿಗಳು–ಶಿಕ್ಷಕರ ನೋವಿನ ನುಡಿಗಳು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2015, 20:09 IST
Last Updated 27 ಫೆಬ್ರುವರಿ 2015, 20:09 IST

ಬೆಂಗಳೂರು: ಜ್ವರದಿಂದ ಬಳಲುತ್ತಿದ್ದ ಅರ್ಪಿತಾ, 15 ದಿನಗಳ ಕಾಲ ಚಿಕಿತ್ಸೆ ಪಡೆದು ಬುಧವಾರವಷ್ಟೇ ತರಗತಿಗೆ ಬಂದಿದ್ದಳು. ಆದರೆ, ಕಾಲೇಜಿಗೆ ಬಂದ ಮರುದಿನವೇ ಟ್ಯಾಂಕರ್‌ನಲ್ಲಿದ್ದ ಜವರಾಯ ಆಕೆಯ ಪ್ರಾಣ ತೆಗೆದು­ಕೊಂಡು ಹೋದ...

ಹೆಬ್ಬಾಳದ ವಿದ್ಯುತ್‌ ಚಿತಾಗಾರಕ್ಕೆ ಅರ್ಪಿತಾಳ ಶವವನ್ನು ತಂದಾಗ ಸಿಂಧಿ ಕಾಲೇಜಿನ ಪ್ರಾಂಶುಪಾಲ ಪ್ರಶಾಂತ್ ಬಿ. ನಾಯಕ್ ಅವರು ತಮ್ಮ ದುಃಖ ತೋಡಿಕೊಂಡ ಪರಿ ಇದು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಅರ್ಪಿತಾ ಸೂಕ್ಷ್ಮ ಹುಡುಗಿ. ಕೆಲವೇ ವಿದ್ಯಾರ್ಥಿನಿಯರ ಜತೆ ಸ್ನೇಹ ಬೆಳೆಸಿಕೊಂಡಿದ್ದಳು. ತಿಂಗಳ ಹಿಂದೆ ಆಕೆಯ ಆಪ್ತ ಗೆಳತಿ ಗಿರಿಜಾಳ ವಿವಾಹ­ವಾಯಿತು. ಮದುವೆ ನಂತರ ಗಿರಿಜಾ ಕಾಲೇಜು ತೊರೆದಿದ್ದರಿಂದ ಈಕೆಗೆ ಒಂಟಿ­ತನ ಕಾಡಲಾರಂಭಿಸಿತು. ಸಹಪಾಠಿ­ಯನ್ನು ನೆನೆದು ನನ್ನೆದುರೇ ಮೂರ್ನಾಲ್ಕು ಬಾರಿ ಅತ್ತಿದ್ದಳು’ ಎಂದು ದುಃಖತಪ್ತರಾಗಿ ನುಡಿದರು.

‘ಈ ನಡುವೆ ಅರ್ಪಿತಾಳಿಗೆ ಜ್ವರ ಕಾಣಿಸಿಕೊಂಡಿತು. ಹೀಗಾಗಿ 15 ದಿನಗಳ ರಜೆ ಪಡೆದಿದ್ದ ಆಕೆ, ಗುಣಮುಖಳಾಗಿ ಬುಧವಾರವಷ್ಟೇ (ಫೆ.25) ಕಾಲೇಜಿಗೆ ಬಂದಿದ್ದಳು. ಮರುದಿನ ಕಾಲೇಜಿನಲ್ಲಿ ‘2020ಕ್ಕೆ ಉದ್ಯೋಗ ಅವಕಾಶಗಳು’ ವಿಷಯ ಕುರಿತು ವಿಚಾರ ಸಂಕೀರಣ ಏರ್ಪಡಿಸಲಾಗಿತ್ತು. ಅದರಲ್ಲಿ ಪಾಲ್ಗೊಂಡಿದ್ದ ಅರ್ಪಿತಾ, ಮಧ್ಯಾಹ್ನ 12.30ಕ್ಕೆ ಬಿಡುವು ನೀಡಿದಾಗ ಮನೆಗೆ ಹೊರಟು ಬಿಟ್ಟಳು’ ಎಂದರು.

ಇನ್ನು ಚಿತಾಗಾರದ ಬಳಿ ಜಮಾಯಿ­ಸಿದ್ದ ಅರ್ಪಿತಾಳ ಕುಟುಂಬ ಸದಸ್ಯರು ಹಾಗೂ ಸಹಪಾಠಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಅರ್ಪಿತಾ ತಂದೆ ಜನಾರ್ದನ್, ಚಿತಾಗಾರದ ಮುಂದೆ ಕುಸಿದು ಬಿದ್ದರು. ಸೋದರ ಸಂಬಂಧಿ ದಿವ್ಯಾ, ‘ಅರ್ಪಿತಾಳನ್ನು ನೋಡಲು ಬಿಡಿ’ ಎಂದು ರೋದಿಸುತ್ತಿದ್ದ ದೃಶ್ಯ ಮನ­ಕಲಕುವಂತಿತ್ತು.

ಇದಕ್ಕೂ ಮೊದಲು ಸಿಂಧಿ ಕಾಲೇಜಿ­ನಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಈ ವೇಳೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮೋಂಬತ್ತಿ ಬೆಳಗಿಸಿ ಅರ್ಪಿತಾಳ ಆತ್ಮಕ್ಕೆ ಶಾಂತಿ ಕೋರಿದರು.

ಗಾಯಾಳುಗಳ ಚೇತರಿಕೆ
ಅಪಘಾತದಲ್ಲಿ ಗಾಯಗೊಂಡಿದ್ದ ಸಿಂಧಿ ಕಾಲೇಜಿನ ಅಕ್ಷತಾ ಹಾಗೂ ಕುಸುಮಾಶ್ರೀ ಅವರು ಚೇತರಿಸಿ­ಕೊಂಡಿ­ದ್ದಾರೆ. ಸುಮಂತ್‌ ರೆಡ್ಡಿ ಅವರ ಕಾಲಿನ ಮೇಲೆ ಟ್ಯಾಂಕರ್‌ ಹರಿದಿದ್ದರಿಂದ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಎಲ್ಲರೂ ಪ್ರಾಣಾ­ಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.