ADVERTISEMENT

‘‘ಹಳ್ಳಿಗಿಂತ ನಗರದಲ್ಲಿ ಜಾತಿಪ್ರಜ್ಞೆ ಹೆಚ್ಚು’

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2015, 20:44 IST
Last Updated 17 ಮಾರ್ಚ್ 2015, 20:44 IST

ಬೆಂಗಳೂರು: ‘ಹಳ್ಳಿಗಳಿಗಿಂತ ನಗರದಲ್ಲಿ ಜಾತಿಪ್ರಜ್ಞೆ ತುಂಬಾ ಇದೆ. ಆದರೆ ನಮಗದು ಕಾಣಿಸುವುದಿಲ್ಲವಷ್ಟೇ’ ಎಂದು ವಿಮರ್ಶಕ ಸಿ.ಎನ್‌. ರಾಮಚಂದ್ರನ್‌ ಅವರು ಅಭಿಪ್ರಾಯಪಟ್ಟರು. ಪು.ತಿ. ನರಸಿಂಹಾಚಾರ್‌ (ಪುತಿನ) ಟ್ರಸ್ಟ್‌ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಪುತಿನ ಜನ್ಮದಿನೋತ್ಸವ ಮತ್ತು ‘ಕಾವ್ಯ– ನಾಟಕ ಪುರಸ್ಕಾರ’ ಸಮಾರಂಭದಲ್ಲಿ ಅವರು ಮಾತನಾಡಿದರು.

‘21ನೇ ಶತಮಾನದಲ್ಲಿಯೂ 18ನೇ ಶತಮಾನದಲ್ಲಿ ಇದ್ದಂತಹ ಶೋಷಕರು ಮತ್ತು ಶೋಷಿತರು ಇದ್ದಾರೆ. ಆದ್ದರಿಂದ ಶೋಷಿತರ ಧ್ವನಿಯನ್ನು ನಾವು ಕೇಳಲೇ ಬೇಕಿದೆ. ಒಂದೊಮ್ಮೆ ಅದನ್ನು ನಾವು ಕೇಳದೆ ಹೋದರೆ ಅದು ಅವರಿಗಲ್ಲ ನಮಗಾಗುವ ನಷ್ಟ’ ಎಂದು ಹೇಳಿದರು.

‘ಒಂದು ನೆಲೆಯಲ್ಲಿ ಅತ್ಯಂತ ಕಟ್ಟುನಿಟ್ಟಿನ ಬ್ರಾಹ್ಮಣ್ಯವನ್ನು ಪಾಲಿಸುತ್ತಿದ್ದ ಪುತಿನ ಅವರು ಇನ್ನೊಂದು ನೆಲೆಯಲ್ಲಿ ಆಧುನಿಕ ಚಿಂತನೆಯ ವ್ಯಕ್ತಿಯಾಗಿದ್ದರು’ ಎಂದು ರಾಮಚಂದ್ರನ್‌ ಅನಿಸಿಕೆ ವ್ಯಕ್ತಪಡಿಸಿದರು. ಟ್ರಸ್ಟ್‌ ಅಧ್ಯಕ್ಷ ಎಚ್‌.ಎಸ್‌. ವೆಂಕಟೇಶಮೂರ್ತಿ ಮಾತನಾಡಿ, ‘ಕವಿತೆ ಎನ್ನುವುದು ಕೇವಲ ಬರೆಯುವುದಲ್ಲ ಅದು ಬದುಕುವ ಸಂಗತಿಯಾಗಿದೆ. ಆದರೆ ನಾವದನ್ನು ಬದುಕುತ್ತಿಲ್ಲ. ಬರೀ ಬರೆಯುತ್ತಿದ್ದೇವೆ’ ಎಂದು ಪ್ರತಿಪಾದಿಸಿದರು. ‘ಪುತಿನ ಕಾವ್ಯ – ನಾಟಕ ಪುರಸ್ಕಾರ’ವು ತಲಾ ₨ 25 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ­ವನ್ನು ಒಳಗೊಂಡಿದೆ.
***
ಮೇಲುಕೋಟೆಯ ಮಹೋನ್ನತ ಕಾವ್ಯ ಪ್ರಶಸ್ತಿಯು ಹೊಲಗೇರಿ ಹುಡುಗನಿಗೆ ಅರಸಿ ಬಂದಿದ್ದು, ಪ್ರಕೃತಿ ಸಹಜ ನೀರು ಮೇಲಿಂದ ಕೆಳಗೆ ಹರಿದ ಚಲನೆಯ ಚಿಹ್ನೆಯಾಗಿ ಕಾಣಿಸುತ್ತಿದೆ
-ಸುಬ್ಬು ಹೊಲೆ­ಯಾರ್‌ ಪ್ರಶಸ್ತಿ ಪುರಸ್ಕೃತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.