ADVERTISEMENT

₹ 80 ಕೋಟಿ ವಂಚಿಸಿದ ವ್ಯವಸ್ಥಾಪಕ ಸಿಐಡಿ ಬಲೆಗೆ

ವಿಜಯಪುರದ ಐಸಿಐಸಿಐ ಬ್ಯಾಂಕ್ ಹಗರಣ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2016, 19:55 IST
Last Updated 10 ಫೆಬ್ರುವರಿ 2016, 19:55 IST

ಬೆಂಗಳೂರು: ಕೋಟ್ಯಂತರ ರೂಪಾಯಿ ವಂಚಿಸಿ ತಲೆಮರೆಸಿಕೊಂಡಿದ್ದ  ವಿಜಯಪುರದ ಐಸಿಐಸಿಐ ಬ್ಯಾಂಕಿನ ಶಾಖಾ ವ್ಯವಸ್ಥಾಪಕ ವಿಜಯಸಾರಥಿ ಎಂಬಾತನನ್ನು ಸಿಐಡಿ ಪೊಲೀಸರು ಸೋಮವಾರ ನೇಪಾಳದಲ್ಲಿ ಬಂಧಿಸಿದ್ದಾರೆ.

ಆರೋಪಿಯಿಂದ ₹ 1.5 ಕೋಟಿ, 6 ಐಷರಾಮಿ ಕಾರು ಜಪ್ತಿ ಮಾಡಲಾಗಿದ್ದು, ಪ್ರಕರಣದ ಮತ್ತಿಬ್ಬರು ಆರೋಪಿಗಳಾದ ಅದೇ ಬ್ಯಾಂಕ್‌ನ ಗ್ರಾಹಕ ಸೇವಾ ಅಧಿಕಾರಿ ಸಚಿನ್ ಅಣ್ಣಪ್ಪ ಪಾಟೀಲ್ ಹಾಗೂ ವಿಜಯಸಾರಥಿ ಪ್ರೇಯಸಿ ರೇಣುಕಾ ಶೆಟ್ಟಿ ತಲೆಮರೆಸಿಕೊಂಡಿದ್ದಾರೆ.

ಬ್ಯಾಂಕ್‌ನಲ್ಲಿ ಶಾಖಾ ವ್ಯವಸ್ಥಾಪಕನಾಗಿದ್ದ ವಿಜಯಸಾರಥಿ,  ಬ್ಯಾಂಕಿನಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುವ ಗ್ರಾಹಕರು ರದ್ದುಪಡಿಸಿದ ಚೆಕ್‌ಗಳನ್ನು ಅಕ್ರಮವಾಗಿ ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುವ ಮೂಲಕ ಹಣ ಲಪಟಾಯಿಸಿದ್ದ.

ಬಳಿಕ ಗ್ರಾಹಕರು ನಗದು ಮಾಡಲಾಗದೆ ರದ್ದುಪಡಿಸಿದ ಚೆಕ್‌ಗಳು ಎಂದು ದಾಖಲೆಯಲ್ಲಿ ತೋರಿಸುತ್ತಿದ್ದ. ಇದಕ್ಕೆ ಸಚಿನ್ ಮತ್ತು ರೇಣುಕಾ ಸಹಾಯ ಮಾಡುತ್ತಿದ್ದರು.
ಎಂಟು ತಿಂಗಳ ಅವಧಿಯಲ್ಲಿ ಮೂವರೂ ಸೇರಿ, ಸರ್ಕಾರದ ಸ್ಥಳೀಯ ಸಂಸ್ಥೆಗಳು, ಸಹಕಾರಿ ಬ್ಯಾಂಕ್‌ಗಳು ಹಾಗೂ  ಹಲವು ಗ್ರಾಹಕರ ಖಾತೆಗಳಿಂದ ಸುಮಾರು ₹ 80 ಕೋಟಿಯಷ್ಟು ಹಣವನ್ನು ಅಕ್ರಮವಾಗಿ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದರು.

ಬ್ಯಾಂಕಿನ ಲೆಕ್ಕ ಪರಿಶೋಧನೆ ವೇಳೆ ₹ 1.5 ಕೋಟಿ ಹಣ ಅವ್ಯವಹಾರ  ನಡೆದಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕಿ ರಂಜಿತಾ ಅವರು, ವಿಜಯನಗರ ನಗರ  ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು.

ಗಿಫ್ಟ್: ಅಕ್ರಮವಾಗಿ ಸಂಪಾದಿಸಿದ ಹಣದಿಂದ ಆರೋಪಿ ವಿಜಯಸಾರಥಿ ವಿಜಯಪುರದಲ್ಲಿ ಮನೆ, ದಕ್ಷಿಣ ಕನ್ನಡ ಜಿಲ್ಲೆಯ ನಿಟ್ಟೆಯಲ್ಲಿ 6 ಎಕರೆ ಕೃಷಿ ಖರೀದಿಸಿದ್ದನಲ್ಲದೆ, ತನ್ನ ಪ್ರೇಯಸಿ ರೇಣುಕಾ ಶೆಟ್ಟಿ ಹೆಸರಿನಲ್ಲಿ ಬೆಂಗಳೂರಿನ ಜೆ.ಪಿ. ನಗರದಲ್ಲಿ ₹2 ಕೋಟಿಯ ಮನೆ ಕಟ್ಟಿಸಿದ್ದ ಎಂದು ಅಧಿಕಾರಿಗಳು ತಿಳಿಸಿದರು.

ಭೂಮಿ ಖರೀದಿ: ರೇಣುಕಾಳ ಅಣ್ಣ ಸುದೀಪ್‌ ಶೆಟ್ಟಿ ಹೆಸರಿನಲ್ಲಿ ವಿಜಯ ಸಾರಥಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಕೃಷಿ ಭೂಮಿ ಖರೀದಿಸಿದ್ದಾನೆ. ಮತ್ತೊಬ್ಬ ಆರೋಪಿ ಸಚಿನ್ ಅಣ್ಣಪ್ಪ ಪಾಟೀಲ್ ಸಂಕೇಶ್ವರದಲ್ಲಿ 3.5 ಎಕರೆ, ವಿಜಯಪುರದಲ್ಲಿ 1.25 ಎಕರೆ ಜಮೀನು ಖರೀದಿ ಮಾಡಿದ್ದಾನೆ. ರೇಣುಕಾ ಶೆಟ್ಟಿಯ ಬ್ಯಾಂಕ್ ಖಾತೆಯಲ್ಲಿದ್ದ ₹ 51 ಲಕ್ಷ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.