ADVERTISEMENT

10 ಮಂದಿ ಬಂಧನ: 4 ಗೋವು ರಕ್ಷಣೆ

ಕಸಾಯಿಖಾನೆ ಪರಿಶೀಲನೆಗೆ ಹೋಗಿದ್ದವರ ಮೇಲೆ ಹಲ್ಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2017, 19:30 IST
Last Updated 19 ಅಕ್ಟೋಬರ್ 2017, 19:30 IST

ಬೆಂಗಳೂರು:  ಬೆಟ್ಟಹಳ್ಳಿಯಲ್ಲಿ ಕಸಾಯಿಖಾನೆ ಪರಿಶೀಲನೆಗೆ ತೆರಳಿದ್ದ ಕೋರ್ಟ್‌ ಕಮಿಷನರ್ ತಂಡ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಆರೋಪದಡಿ 10 ಮಂದಿಯನ್ನು ಯಲಹಂಕ ಉಪನಗರ ಪೊಲೀಸರು ಬಂಧಿಸಿದ್ದಾರೆ.

ಅ.17ರಂದು ಪರಿಶೀಲನೆಗೆ ತೆರಳಿದ್ದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದ ದುಷ್ಕರ್ಮಿಗಳು, ಪೊಲೀಸ್ ವಾಹನ ಜಖಂಗೊಳಿಸಿದ್ದರು. ಅಲ್ಲದೆ, ಬಿಎಂಟಿಸಿ ಬಸ್‌ನ ಕಿಟಕಿ ಗಾಜುಗಳನ್ನು ಒಡೆದಿದ್ದರು.

ಕಮಿಷನರ್‌ಗಳಾದ ಎಚ್.ವಿ.ಹರೀಶ್, ಡಿ.ಪಿ.ಪ್ರಸನ್ನ, ಸರ್ಕಾರಿ ವಕೀಲ ಎಸ್.ರಾಚಯ್ಯ, ವಕೀಲ ಪವನ್, ಗೋ ಗ್ಯಾನ್ ಪ್ರತಿಷ್ಠಾನದ ಸದಸ್ಯರಾದ ಕವಿತಾ ಜೈನ್, ಜೋಶಿನ್ ಅಂಥೋಣಿ ಹಾಗೂ ಪೊಲೀಸರು ದುಷ್ಕರ್ಮಿಗಳ ದಾಳಿಯಿಂದ ಗಾಯಗೊಂಡಿದ್ದರು.

ADVERTISEMENT

ಬೆಟ್ಟಹಳ್ಳಿ ಸಮೀಪದ ಡಬಲ್ ರಸ್ತೆಯ ಎಸ್.ಬಿ.ಸರ್ವೀಸ್ ಸ್ಟೇಷನ್ ಬಳಿ ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿರುವ ಹಾಗೂ ಗೋವುಗಳನ್ನು ಕೂಡಿಹಾಕಿರುವ ಬಗ್ಗೆ ಸಿಕ್ಕ ಖಚಿತ ಮಾಹಿತಿಯಿಂದಾಗಿ ಪರಿಶೀಲನೆಗೆ ಹೋಗಿದ್ದೆವು. ಸರ್ವಿಸ್ ಸ್ಟೇಷನ್‌ನಲ್ಲಿ ಗೋವುಗಳನ್ನು ಕೂಡಿಹಾಕಿದ್ದ ಬಗ್ಗೆ ಅನುಮಾನ ವ್ಯಕ್ತವಾಗಿ ಷಟರ್ ತೆರೆಯಲು ಮುಂದಾದೆವು. ಈ ವೇಳೆ ಕೆಲವರು ವಿರೋಧ ವ್ಯಕ್ತಪಡಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಅಲ್ಲಿಂದ ಹಿಂದಿರುಗುವಾಗ ಹಲ್ಲೆ ಮಾಡಿದ ಆರೋಪಿಗಳು, ವಾಹನಗಳನ್ನು ಜಖಂಗೊಳಿಸಿದ್ದರು ಎಂದು ಯಲಹಂಕ ಉಪನಗರ ಪೊಲೀಸರು ತಿಳಿಸಿದರು.

ಆರೋಪಿಗಳಿಂದ ಕಾರು ಹಾಗೂ ಕ್ಯಾಂಟರ್ ವಶಪಡಿಸಿಕೊಂಡಿದ್ದು, ನಾಲ್ಕು ಗೋವುಗಳನ್ನು ರಕ್ಷಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.