ADVERTISEMENT

107 ಜೀತ ಕಾರ್ಮಿಕರ ರಕ್ಷಣೆ

ಅಗರಬತ್ತಿ ಕಾರ್ಖಾನೆ ಮೇಲೆ ಸಿಐಡಿ, ಇಲಾಖಾ ಅಧಿಕಾರಿಗಳ ದಿಢೀರ್‌ ದಾಳಿ

​ಪ್ರಜಾವಾಣಿ ವಾರ್ತೆ
Published 28 ಮೇ 2015, 19:58 IST
Last Updated 28 ಮೇ 2015, 19:58 IST

ಬೆಂಗಳೂರು: ಕನಕಪುರ ರಸ್ತೆಯ ಕಗ್ಗಲಿಪುರದಲ್ಲಿರುವ ಅಗರ್‌ಬತ್ತಿ ಕಾರ್ಖಾನೆ ಮೇಲೆ ಗುರುವಾರ ಬೆಳಿಗ್ಗೆ ದಿಢೀರ್ ದಾಳಿ ನಡೆಸಿದ ಸಿಐಡಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಬಾಲಕರು ಸೇರಿದಂತೆ 107 ಜೀತದಾಳುಗಳನ್ನು ರಕ್ಷಿಸಿದ್ದಾರೆ.

‘ಕಾರ್ಖಾನೆಯ ಮಾಲೀಕ ಬಾಲಾಜಿ, ಹಲವು ವರ್ಷ­ಗಳಿಂದ ಕಾರ್ಮಿಕರನ್ನು ಜೀತಕ್ಕೆ ಇಟ್ಟುಕೊಂಡಿರುವ ಬಗ್ಗೆ ಸ್ವಯಂ ಸೇವಾ ಸಂಸ್ಥೆ­ಯೊಂದು (ಎನ್‌ಜಿಒ) ಮಾಹಿತಿ ನೀಡಿತು. ಆ ಮಾಹಿತಿ ಆಧರಿಸಿ ಬೆಳಿಗ್ಗೆ 6.30ಕ್ಕೆ ಆರೋಗ್ಯ ಇಲಾಖೆ, ಸಿಐಡಿಯ ಮಾನವ ಸಾಗಣೆ ತಡೆ ಘಟಕ, ಕಾರ್ಮಿಕ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರ ಜತೆ ಕಾರ್ಯಾಚರಣೆ ನಡೆಸಿ ಕಾರ್ಮಿಕರನ್ನು ರಕ್ಷಿಸಲಾಯಿತು’ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದರು.

‘ಪಶ್ಚಿಮ ಬಂಗಾಳ ಮೂಲದ 43, ಅಸ್ಸಾಂನ 40, ಜಾರ್ಖಂಡ್‌ನ 23 ಹಾಗೂ ನೇಪಾಳ ಮೂಲದ ಇಬ್ಬರು ಕಾರ್ಮಿಕರನ್ನು ರಕ್ಷಿಸಲಾಗಿದೆ. ಅವರನ್ನು ಇಂಟರ್‌­ನ್ಯಾಷನಲ್ ಜಸ್ಟಿಸ್‌ ಮಿಷನ್‌ (ಐಜೆಎಂ) ಸ್ವಯಂಸೇವಾ ಸಂಸ್ಥೆಯ ನೆರವಿನಿಂದ ತವರಿಗೆ ಕಳುಹಿಸಲಾಗು­ವುದು. ಕಾರ್ಖಾನೆ ಮಾಲೀಕ ಬಾಲಾಜಿ ವಿರುದ್ಧ ಜೀತಕ್ಕಾಗಿ ವ್ಯಕ್ತಿಯನ್ನು ಖರೀದಿಸು­ವುದು (ಐಪಿಸಿ 370), ಕಾನೂನು ಬಾಹಿರ­ವಾಗಿ ದುಡಿಸಿ­ಕೊಳ್ಳು­ವುದು (ಐಪಿಸಿ 374) ಹಾಗೂ ಮಾನವ ಸಾಗಣೆ ಆರೋಪದಡಿ ಕಗ್ಗಲಿಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ದಲ್ಲಾಳಿಗಳ ಮೂಲಕ ಈ ಕಾರ್ಮಿಕ­ರನ್ನು ಸಂಪರ್ಕಿಸಿದ್ದ ಬಾಲಾಜಿ, ಮಾಸಿಕ ₨ 7 ಸಾವಿರ ಕೂಲಿ, ಊಟ–ವಸತಿ ಕಲ್ಪಿಸುವುದಾಗಿ ನಂಬಿಸಿ ಕರೆದು­ಕೊಂಡು ಬಂದಿದ್ದ. ನಿತ್ಯ 15 ತಾಸು ದುಡಿಸಿ­ಕೊಳ್ಳು­ತ್ತಿದ್ದ ಅವರು, ಮೂರು ಮಂದಿಯುಳ್ಳ ಕುಟುಂಬವೊಂದಕ್ಕೆ ಮಾಸಿಕ ₹ ₨ 300 ಮಾತ್ರ ನೀಡುತ್ತಿದ್ದರು. ಎಲ್ಲಾ 107 ಮಂದಿ ದೊಡ್ಡ ಗೋದಾಮಿ­ನಲ್ಲಿ ಮಲಗ­ಬೇಕಿತ್ತು. ಇಷ್ಟು ಕಾರ್ಮಿಕರಿಗೆ ಕೇವಲ ಎರಡು ಶೌಚಾಲಯಗಳಿದ್ದವು’ ಎಂದು ಐಜೆಎಂ ಸದಸ್ಯ ಜೋಸೆಫ್ ತಿಳಿಸಿದರು.

‘ನಿಯಮ ಪ್ರಕಾರ ದಿನಕ್ಕೆ ₹ ₨ 252 ಕನಿಷ್ಠ ಕೂಲಿ ಸಿಗಬೇಕು. ಆದರೆ, ಇವರಿಗೆ ದಿನಕ್ಕೆ ₹ ₨ 9 ರಿಂದ ₹ ₨ 15 ಮಾತ್ರ ನೀಡ­­­ಲಾ­ಗುತ್ತಿತ್ತು ಎಂಬುದು ಕಾರ್ಮಿಕರ ವಿಚಾರಣೆಯಿಂದ ಗೊತ್ತಾಗಿದೆ’ ಎಂದರು. ‘ರಕ್ಷಿಸಲಾದ ಜೀತದಾಳುಗಳಲ್ಲಿ 5 ರಿಂದ 10 ವರ್ಷದ ಆರು ಮಕ್ಕಳೂ ಇದ್ದಾರೆ. ಮಾಲೀಕರು,  ಆ ಮಕ್ಕಳನ್ನೂ ಕೆಲಸದಲ್ಲಿ ತೊಡಗಿಸುವಂತೆ ಪೋಷ­ಕ­­­ರಿಗೆ ಒತ್ತಾಯಿಸುತ್ತಿದ್ದರು. ಇದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗು­ತ್ತದೆ. ಜತೆಗೆ ಶಾಲೆಗೆ ಹೋಗ­ಬೇಕಾದ ಮಕ್ಕಳನ್ನು ಅಕ್ರಮ ಬಂಧನದಲ್ಲಿಟ್ಟಿರುವುದು ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆ. ಹೀಗಾಗಿ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಮೊಬೈಲ್ ಕಿತ್ತುಕೊಂಡರು
‘ಜೀವನ ಸಾಗಿಸುವಷ್ಟು ಕೂಲಿ ಸಿಗುತ್ತದೆ ಎಂಬ ಆಸೆಯಿಂದ ನಗ­ರಕ್ಕೆ ಬಂದೆವು. ಆದರೆ, ಕಾರ್ಖಾನೆ ಪ್ರವೇಶಿಸುತ್ತಿದ್ದಂತೆಯೇ ಮೊಬೈಲ್–ಪರ್ಸ್‌ಗಳನ್ನು ಕಸಿದುಕೊಂಡ ಮಾಲೀಕರು, ತಮ್ಮ ಆಳುಗಳಿಂದ ಬೆದರಿಸಿ  ಬಲವಂತವಾಗಿ ಕೆಲಸ ಮಾಡಿಸಿ­ಕೊಳ್ಳಲು ಆರಂಭಿಸಿದರು. ಅಗರ್‌­ಬತ್ತಿ ತಯಾರಿಕೆ ವೇಳೆ ರಾಸಾಯ­ನಿಕ ವಸ್ತುಗಳ ವಾಸನೆಯಿಂದ ಆರೋಗ್ಯ ಹದಗಟ್ಟಿದ್ದರೂ ಆಸ್ಪ­ತ್ರೆಗೆ ಹೋಗಲೂ ಅವ­ಕಾಶ ಕೊಟ್ಟಿ­ರಲಿಲ್ಲ’ ಎಂದು ಅಸ್ಸಾಂ ಮೂಲದ ಕಾರ್ಮಿಕರೊಬ್ಬರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT