ADVERTISEMENT

1,280 ಸಿಬ್ಬಂದಿ ವರ್ಗಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST
1,280 ಸಿಬ್ಬಂದಿ ವರ್ಗಕ್ಕೆ ನಿರ್ಧಾರ
1,280 ಸಿಬ್ಬಂದಿ ವರ್ಗಕ್ಕೆ ನಿರ್ಧಾರ   

ಬೆಂಗಳೂರು: ಮೂರು ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ಅವಧಿಗೆ ಒಂದೇ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಸಾಮೂಹಿಕವಾಗಿ ಆಂತರಿಕ ವರ್ಗಾವಣೆ ಮಾಡಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ಧರಿಸಿದೆ. ಈ ತೀರ್ಮಾನದಿಂದಾಗಿ 1,280 ನೌಕರರು ಒಂದು ವಲಯದಿಂದ ಮತ್ತೊಂದು ವಲಯಕ್ಕೆ ವರ್ಗಗೊಳ್ಳಲಿದ್ದಾರೆ.

ವರ್ಗಾವಣೆ ಪ್ರಕ್ರಿಯೆಗೆ ತಡೆಯಾಜ್ಞೆ ತರದಂತೆ ನೋಡಿಕೊಳ್ಳಲು ಹೈಕೋರ್ಟ್‌ಗೆ ಕೇವಿಯಟ್ ಸಹ ಸಲ್ಲಿಸಲಾಗಿದೆ.

ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ, ಒಂದೇ ವಲಯದಲ್ಲಿ ಮೂರು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಸೇವೆ ಸಲ್ಲಿಸಿರುವ ಸಿಬ್ಬಂದಿಯನ್ನು ಆಂತರಿಕ ವರ್ಗಾವಣೆ ಮಾಡಬೇಕು. ಜತೆಗೆ, ಎರವಲು ಸೇವೆ ಆಧಾರದ ಮೇಲೆ ಬಿಬಿಎಂಪಿಗೆ ಬಂದಿರುವ ಸಿಬ್ಬಂದಿಯನ್ನು ಮೂರು ವರ್ಷ ಪೂರೈಸಿದ ತಕ್ಷಣ ಮಾತೃ ಇಲಾಖೆಗೆ ವಾಪಸು ಕಳುಹಿಸಬೇಕು. ಆದರೆ, ಈ ಎರಡೂ ನಿಯಮಗಳನ್ನು ಇದುವರೆಗೆ ಪಾಲನೆ ಮಾಡಿಲ್ಲ.

ಒಂದೆಡೆ ಬೇರೂರಿದ ಸಿಬ್ಬಂದಿಯೇ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಒಂದೇ ಸ್ಥಳದಲ್ಲಿ ಯಾವ ನೌಕರನನ್ನೂ ಮೂರು ವರ್ಷಕ್ಕಿಂತ ಅಧಿಕ ಸಮಯ ಬಿಡಬಾರದು ಎಂದು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದ್ದರು. ವಿಶೇಷ ಆಯುಕ್ತೆ ವಿ.ರಶ್ಮಿ ಅವರು ವರ್ಗಾವಣೆಗೆ ಅರ್ಹರಾಗಿರುವ ಸಿಬ್ಬಂದಿ ಪಟ್ಟಿಯನ್ನು ಸಿದ್ಧಪಡಿಸಿ, ಆಯುಕ್ತರಿಗೆ ಹಸ್ತಾಂತರಿಸಿದ್ದಾರೆ.

‘ಯಾವ ಸಿಬ್ಬಂದಿ ಯಾವ ವಾರ್ಡ್ ಅಥವಾ ವಲಯಕ್ಕೆ ವರ್ಗಾವಣೆಯಾಗಬೇಕು ಎಂಬ ಪಟ್ಟಿ ಮಾಡಲಾಗಿದೆ. ಸದ್ಯ ಕಡತ ಪಾಲಿಕೆ ಆಯುಕ್ತರ ಬಳಿಯಿದ್ದು, ಗುರುವಾರ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿ ಅನುಮೋದನೆ ಪಡೆಯಲಾಗುತ್ತದೆ’ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ಹೊರ ವಲಯಗಳಿಗೂ ಅಲ್ಲಿನ ಸಿಬ್ಬಂದಿಯನ್ನು ಕೇಂದ್ರ ವಾಣಿಜ್ಯ ಪ್ರದೇಶಕ್ಕೂ ವರ್ಗ ಮಾಡಲು ಉದ್ದೇಶಿಸಲಾಗಿದೆ. ಕೇಂದ್ರ ಕಚೇರಿ ಸಿಬ್ಬಂದಿಯನ್ನೂ ವರ್ಗ ಮಾಡಲು ಪ್ರಸ್ತಾವ ಸಿದ್ಧಪಡಿಸಲಾಗಿದೆ.

23 ವರ್ಷದ ಬಳಿಕ ಸಾಮೂಹಿಕ ವರ್ಗಾವಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT