ADVERTISEMENT

21ರಿಂದ ರಾಷ್ಟ್ರಮಟ್ಟದ ಪಾರಂಪರಿಕ ವೈದ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2013, 19:30 IST
Last Updated 6 ಅಕ್ಟೋಬರ್ 2013, 19:30 IST

ಬೆಂಗಳೂರು: ರಾಷ್ಟ್ರಮಟ್ಟದ ಮೊದಲ ಪಾರಂಪರಿಕ ವೈದ್ಯ ಸಮ್ಮೇಳನ ಅ.21 ರಿಂದ 23ರವರೆಗೆ ಮಂಡ್ಯ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಆದಿಚುಂಚನ ಗಿರಿ ಮಠದಲ್ಲಿ ನಡೆಯಲಿದೆ.

ಜ್ಞಾನ ಭಂಡಾರ ಹೊಂದಿರುವ ಪಾರಂಪರಿಕ ವೈದ್ಯ ಪದ್ಧತಿ ಇಂದು ನಶಿಸುತ್ತಿದೆ. ಭಾರತೀಯ ಸಂಸ್ಕೃತಿಯ ಪರಂಪರೆಯ ಪ್ರತೀಕವಾದ ಈ ವೈದ್ಯ ಪದ್ಧತಿಯನ್ನು ಪುನಶ್ಚೇತನ­ಗೊಳಿಸ ಬೇಕಾಗಿದೆ. ಈ ನಿಟ್ಟಿನಲ್ಲಿ  ಪಾರಂಪರಿಕ ವೈದ್ಯರ ಜ್ಞಾನ ವಿಕಾಸಕ್ಕೆ ಮತ್ತು ಅವರಲ್ಲಿನ ಜ್ಞಾನವನ್ನು ಪರಸ್ಪರ ವಿನಿ ಯಮ ಮಾಡಿಕೊಳ್ಳುವ ದೃಷ್ಟಿಯಿಂದ ವಿವಿಧೆಡೆ ನೆಲೆಸಿರುವ ವೈದ್ಯರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಉದ್ದೇಶದಿಂದ ಸಮ್ಮೇಳನ ಆಯೋಜಿ ಸಲಾಗಿದೆ ಎಂದು ಸಮ್ಮೇಳನದ ಕಾರ್ಯ ನಿರ್ವಾಹಕ ಅಧ್ಯಕ್ಷ ಹಾಗೂ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಿ.ಎನ್‌. ಶ್ರೀಕಂಠಯ್ಯ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.

ಪಾರಂಪರಿಕ ವೈದ್ಯ ಪರಿಷತ್‌, ಆದಿ ಚುಂಚನಗಿರಿ ಮಹಾಸಂಸ್ಥಾನ ಮಠ, ಆಯುಷ್‌ ಇಲಾಖೆ, ಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ಗಿಡಮೂಲಿಕೆಗಳ ಅಭಿವೃದ್ಧಿ ಪ್ರಾಧಿಕಾರ ಮತ್ತು ಸ್ಥಳೀಯ ವಿವಿಧ ವೈದ್ಯ ಸಂಪ್ರದಾಯಗಳ ಪುನರು ಜ್ಜೀವನಕ್ಕಾಗಿ ಇರುವ ‘ಫೌಂಡೇಷನ್ ಆಫ್ರಿವೈಟಲೈಸೇಷನ್ ಆಫ್ ಲೋಕಲ್ ಹೆಲ್ತ್ ಟ್ರೆಡಿಷನ್ಸ್ (ಎಫ್‌ ಆರ್‌ಎಲ್‌ ಎಚ್‌ಟಿ) ಆಶ್ರಯದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ ಎಂದರು.

ಸಮ್ಮೇಳನದಲ್ಲಿ 20 ರಾಜ್ಯಗಳ ಪಾರಂಪರಿಕ ವೈದ್ಯರು ಭಾಗವಹಿಸ ಲಿದ್ದಾರೆ.  ‘ತಾಯಿ ಮತ್ತು ಮಕ್ಕಳ ರಕ್ಷಣೆ’ ಸಮ್ಮೇಳನದ ಪ್ರಮುಖ ವಿಷಯ ವಾಗಿದೆ. ಈ ಸಮ್ಮೇಳನದಲ್ಲಿ ಇದುವ ರೆಗೆ ಗುರುತಿಸದೇ ಇರುವ ಹಲವಾರು ಗಿಡಮೂಲಿಕೆಗಳ ವಿವರಗಳನ್ನು ದಾಖಲೀಕರಣ­ಗೊಳಿಸಲಾಗುವುದು. ಜತೆಗೆ ಪಾರಂಪರಿಕ ವೈದ್ಯರು ಹಲವು ದಶಕಗಳ ಕಾಲ ರಹಸ್ಯವಾಗಿಟ್ಟಿರುವ ತಮ್ಮ ಜ್ಞಾನವನ್ನು ಯುವ ವೈದ್ಯರಿಗೆ ಧಾರೆ ಎರೆಯುವ ವೇದಿಕೆಯೂ ಇದಾ ಗಲಿದೆ ಎಂದು ನುಡಿದರು.

ವೈದ್ಯರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಸಮಾಜ ದಲ್ಲಿ ಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸಿರುವ ಮೂವರು ಹಿರಿಯ ವೈದ್ಯರಿಗೆ ವೈದ್ಯರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ಎಫ್‌ಆರ್‌ಎಲ್‌ಎಚ್‌ಟಿ ಸಹಾಯಕ ನಿರ್ದೇಶಕ ಜಿ. ಹರಿರಾಮಮೂರ್ತಿ ಮಾತನಾಡಿ, ದೇಶದಲ್ಲಿ 6 ಲಕ್ಷ ಹಾಗೂ ರಾಜ್ಯದಲ್ಲಿ 47 ಸಾವಿರ ಪಾರಂಪರಿಕ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಪಾರಂಪರಿಕ ವೈದ್ಯರಿಗೆ ಮಾನ್ಯತೆ ನೀಡುವ ನಿಟ್ಟಿನಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ, ಭಾರತೀಯ ಗುಣಮಟ್ಟ ಪರಿಷತ್‌ (ಕ್ವೂಸಿಐ) ಮತ್ತು ಆಯುರ್ವೇದ ಔಷಧಿಗಳ ಭಾರತೀಯ ಸಂಸ್ಥೆ ಜಂಟಿ ಯಾಗಿ ಪ್ರಮಾಣಪತ್ರ ನೀಡಲು ಉದ್ದೇಶಿಸಿವೆ. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಈ ಕಾರ್ಯ ಆರಂಭವಾಗಿದೆ. ಮೌಖಿಕ ಮತ್ತು ಪ್ರಾಯೋಗಿಕ ಪರೀಕ್ಷೆಗಳ ನಂತರ ಮಾನ್ಯತಾ ಪತ್ರ ನೀಡಲಾಗು ವುದು ಎಂದು ವಿವರಿಸಿದರು.

ಪಾರಂಪರಿಕ ವೈದ್ಯ ಪರಿಷತ್‌ ಅಧ್ಯಕ್ಷ ಜಿ. ಮಲ್ಲಪ್ಪ ಮಾತನಾಡಿ,  ರಾಜಾ ಶ್ರಯದಲ್ಲಿ ಬೆಳೆದ ವೈದ್ಯ ಪದ್ಧತಿ ಇಂದು ಮಠಗಳ ಆಶ್ರಯದಲ್ಲಿ ವಿಕಾಸಗೊಳ್ಳು ತ್ತಿದೆ. ಈ ಹಿಂದೆ ಎಂಟು ರಾಜ್ಯ ಸಮ್ಮೇಳ ನಗಳನ್ನು ರಾಜ್ಯದ ವಿವಿಧ ಮಠಗಳ ಆಶ್ರಯದಲ್ಲಿ ನಡೆಸಲಾಗಿದೆ. ಸರ್ಕಾರ ಈ ಪ್ರಾಚೀನ ಆರೋಗ್ಯ ಪರಂಪರೆಗೆ ಪ್ರೋತ್ಸಾಹ ನೀಡುವುದು ಅಗತ್ಯವಿದೆ ಎಂದರು.

ಪಾರಂಪರಿಕ ವೈದ್ಯ ಪರಿಷತ್‌ ಪ್ರಧಾನ ಕಾರ್ಯದರ್ಶಿ ಗುರುಸಿದ್ಧಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.