ADVERTISEMENT

30ರೊಳಗೆ ಕೌನ್ಸೆಲಿಂಗ್ ನಡೆಸುವಂತೆ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 19:45 IST
Last Updated 26 ಸೆಪ್ಟೆಂಬರ್ 2016, 19:45 IST

ಬೆಂಗಳೂರು: ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದಂತೆ ಅಲ್ಪಸಂಖ್ಯಾತ ವೃತ್ತಿಪರ ಕಾಲೇಜುಗಳ ಸಂಘ (ಎಎಂಪಿಸಿ) ಇದೇ 30ರೊಳಗೆ ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಕೌನ್ಸೆಲಿಂಗ್‌ ನಡೆಸುವಂತೆ  ಹೈಕೋರ್ಟ್‌ ಸೂಚಿಸಿದೆ.

ಈ ಕುರಿತಂತೆ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಜಯಂತ ಪಟೇಲ್‌ ಹಾಗೂ ನ್ಯಾಯಮೂರ್ತಿ ಅರವಿಂದ ಅವರಿದ್ದ ವಿಭಾಗೀಯ ಪೀಠವು ಸೋಮವಾರ ವಿಚಾರಣೆ ನಡೆಸಿತು.

ಈ ವೇಳೆ ಪ್ರತಿವಾದಿ ಎಎಂಪಿಸಿಗೆ ನಿರ್ದೇಶನ ನೀಡಿದ ನ್ಯಾಯಪೀಠವು, ‘ಇದೇ 30ರೊಳಗೆ ಸಾಮಾನ್ಯ ಸುತ್ತಿಗಿಂತ ಮೊದಲು ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಕೌನ್ಸೆಲಿಂಗ್‌ ನಡೆಸಬೇಕು. ವಿದ್ಯಾರ್ಥಿಗಳು ಪ್ರವೇಶ ಬಯಸುವ ಆಯ್ಕೆಗೆ ಆದ್ಯತೆ ನೀಡಬೇಕು. ಒಂದು ವೇಳೆ ಈ ಕುರಿತಂತೆ ಯಾವುದೇ ತಕರಾರು ಇದ್ದರೆ ಅದನ್ನು ವಿದ್ಯಾರ್ಥಿಗಳು ಕೋರ್ಟ್‌ನಲ್ಲಿ ಪ್ರಶ್ನಿಸಬಹುದು’ ಎಂದು ಹೇಳಿತು.

ಅರ್ಜಿದಾರರ ಪರ   ಅಜಯಕುಮಾರ್ ಪಾಟೀಲ್ ಹಾಜರಿದ್ದರು.

ಎಎಂಪಿಸಿ ಅಧೀನದ ಕಾಲೇಜುಗಳಲ್ಲಿ ಪ್ರವೇಶ ವಂಚಿತರಾಗಿರುವ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು  ಈ ರಿಟ್‌ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಇವರೆಲ್ಲಾ ರಾಜ್ಯದ ವೈದೇಹಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ನವೋದಯ ವೈದ್ಯಕೀಯ ಕಾಲೇಜು, ರಾಜಾರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಎಂ.ವಿ.ಜೆ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆ ಹಾಗೂ ಎ.ಜೆ. ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕಾಲೇಜುಗಳಲ್ಲಿ ಪ್ರಥಮ ವರ್ಷದ ಎಂಬಿಬಿಎಸ್‌ ಕೋರ್ಸ್‌ಗೆ ಪ್ರವೇಶ  ಬಯಸಿರುವ ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.