ADVERTISEMENT

31ರಂದು ಅಹಲ್ಯಾಬಾಯಿ ಹೋಳ್ಕರ್‌ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 26 ಮೇ 2015, 20:15 IST
Last Updated 26 ಮೇ 2015, 20:15 IST

ಬೆಂಗಳೂರು: ‘ಶ್ರೀ ಕಾಗಿನೆಲೆ ಕನಕ ಗುರುಪೀಠದ ಕಲಬುರ್ಗಿ ವಿಭಾಗದಿಂದ ಮೇ 31ರಂದು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಅಹಲ್ಯಾಬಾಯಿ ಹೋಳ್ಕರ್‌ ಜಯಂತಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿ ಕೊಳ್ಳಲಾಗಿದೆ’ ಎಂದು ಕಾಂಗ್ರೆಸ್‌ ಮುಖಂಡ ಎಚ್‌. ವಿಶ್ವನಾಥ್‌ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಭಾರತೀಯ ಧಾರ್ಮಿಕ– ಸಾಮಾಜಿಕ ಇತಿಹಾಸದಲ್ಲಿ ಅಪ್ರತಿಮ ಸಾಧನೆ ಹಾಗೂ ಆಡಳಿತದಿಂದ ರಾಷ್ಟ್ರಮಾತೆ ಎಂದು ಪ್ರಸಿದ್ಧಿ  ಪಡೆದಿರುವ ಅಹಲ್ಯಾಬಾಯಿ ಹೋಳ್ಕರ್‌ ಅವರ ಸಾಧನೆಗಳನ್ನು ಜನತೆಗೆ ತಿಳಿಸಲು ಅಂದು ಮಹಿಳಾ ಸಮಾವೇಶವನ್ನು ಆಯೋಜಿಸಲಾಗಿದೆ’ ಎಂದರು.

‘ಕನಕ ಪೀಠದಿಂದ ಕಳೆದ 6 ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ‘ಹಾಲುಮತ ಭಾಸ್ಕರ’, ‘ಕನಕ ರತ್ನ’, ‘ಸಿದ್ದಶ್ರೀ’ ಪ್ರಶಸ್ತಿಯನ್ನು ನೀಡುತ್ತಾ ಬರುತ್ತಿದ್ದು, ಈ ಸಾಲಿನಿಂದ ‘ಅಹಲ್ಯಾ’ ಪ್ರಶಸ್ತಿಯನ್ನು ನೀಡಲಾಗುವುದು’ ಎಂದರು.

‘ಪ್ರಶಸ್ತಿ ತಲಾ 50ಸಾವಿರ ನಗದು ಹಾಗೂ ಫಲಕವನ್ನು ಹೊಂದಿದ್ದು, ಈ ಸಾಲಿನ ಹಾಲುಮತ ಭಾಸ್ಕರ ಪ್ರಶಸ್ತಿಗೆ ಡಾ.ಹುಲಿನಾಯ್ಕರ್‌ (ಶಿಕ್ಷಣ ಕ್ಷೇತ್ರ), ಕನಕ ರತ್ನ ಪ್ರಶಸ್ತಿಗೆ ಎಸ್‌.ಜಿ.ಸಿದ್ಧರಾಮಯ್ಯ (ಸಾಹಿತ್ಯ ಕ್ಷೇತ್ರ), ಸಿದ್ದಶ್ರೀ ಪ್ರಶಸ್ತಿಗೆ ಹಂಸಲೇಖ (ಕಲಾಕ್ಷೇತ್ರ) ಹಾಗೂ ಅಹಲ್ಯಾ ಪ್ರಶಸ್ತಿಗೆ ಡಾ.ಮಲ್ಲಿಕಾಘಂಟಿ ಅವರನ್ನು  ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಮಹಿಳಾ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದು, ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತಕುಮಾರ್‌, ವಿಧಾನ ಸಭೆಯ ವಿರೋಧಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ಗುರುಪೀಠದ ಸಿದ್ದರಾಮಾನಂದ ಸ್ವಾಮೀಜಿ ಮಾತನಾಡಿ, ‘ಅಂದಿನ ಕಾರ್ಯಕ್ರಮದಲ್ಲಿ 5ಸಾವಿರ ಶಿವ ಲಿಂಗಗಳಿಗೆ 5 ಸಾವಿರ ಮಹಿಳೆಯರು ಅಷ್ಟಶತ ಶಿವ ನಾಮಾವಳಿಗಳನ್ನು ಪಠಿಸುವುದರೊಂದಿಗೆ ಪೂಜೆ ಮಾಡಲಾಗುವುದು ಹಾಗೂ ಅಹಲ್ಯಾ ಬಾಯಿ ಅವರ ಭಾವಚಿತ್ರಕ್ಕೆ ಸಾಮೂಹಿಕ ಆರತಿ ಮೂಲಕ ಪೂಜೆ ಸಲ್ಲಿಸಲಿದ್ದಾರೆ’ ಎಂದರು. ಗೋಷ್ಠಿಯಲ್ಲಿ ಅಹಲ್ಯಾಬಾಯಿ ಹೋಳ್ಕರ್‌ ಮಹಿಳಾ ಸಂಘದ ಅಧ್ಯಕ್ಷೆ ವನಜಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.