ADVERTISEMENT

4 ಎಕರೆ ಕೆರೆ ಒತ್ತುವರಿ ತೆರವು

‘ಅಂತರರಾಷ್ಟ್ರೀಯ ಶಾಲೆ’ ವಿರುದ್ಧ ಜಿಲ್ಲಾಡಳಿತ ಚಾಟಿ: ₨75 ಕೋಟಿ ಮೌಲ್ಯದ ಆಸ್ತಿ ವಶ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2014, 19:30 IST
Last Updated 26 ನವೆಂಬರ್ 2014, 19:30 IST

ಬೆಂಗಳೂರು: ಬಲಾಢ್ಯರ ಮೇಲೆ ಮತ್ತೆ ಚಾಟಿ ಬೀಸಿರುವ ನಗರ ಜಿಲ್ಲಾಡಳಿತ,  ಬೆಂಗಳೂರು ಪೂರ್ವ ತಾಲ್ಲೂಕಿನ ಕೆ.ಆರ್‌.ಪುರ ಸಮೀಪದ ಚೇಳಕೆರೆ ಗ್ರಾಮದಲ್ಲಿ ‘ರಾಯಲ್‌ ಕಾನ್‌ಕಾರ್ಡ್‌ ಅಂತರರಾಷ್ಟ್ರೀಯ ಶಾಲೆ’ ಮಾಡಿದ್ದ ಸರ್ಕಾರಿ ಕೆರೆಯ ಒತ್ತುವರಿಯನ್ನು ಬುಧವಾರ ತೆರವುಗೊಳಿಸಿತು.

ಚೇಳಕೆರೆ ಗ್ರಾಮದ ಸರ್ವೆ ಸಂಖ್ಯೆ 85ರಲ್ಲಿ 37 ಎಕರೆ ವಿಸ್ತೀರ್ಣದಲ್ಲಿ ಸರ್ಕಾರಿ ಕೆರೆ ಇದೆ. ಈ ಕೆರೆ ಅರಣ್ಯ ಇಲಾಖೆಗೆ ಸೇರಿದ್ದು. ಇದರಲ್ಲಿ 14 ಎಕರೆ ಒತ್ತುವರಿಯಾಗಿತ್ತು. ಏಳು ಎಕರೆ ಪ್ರದೇಶದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬಡಾವಣೆ ನಿರ್ಮಿಸಿತ್ತು. 10 ವರ್ಷಗಳ ಹಿಂದೆ ರಾಯಲ್‌ ಕಾನ್‌ಕಾರ್ಡ್‌ ಶಾಲಾ ಆಡಳಿತ ಮಂಡಳಿ ಕೆರೆಯ ನಾಲ್ಕು ಎಕರೆ ಜಾಗ­ವನ್ನು ಲೀಸ್‌ಗೆ ಪಡೆದಿತ್ತು.

ಪ್ರತಿಯಾಗಿ ಕೆರೆಯನ್ನು ಅಭಿವೃದ್ಧಿ­ಪಡಿಸು­ವುದಾಗಿ ಭರವಸೆ ನೀಡಿತ್ತು. ಆದರೆ, ಕೆರೆಯನ್ನು ಅಭಿವೃದ್ಧಿಪಡಿಸಿ­ರಲಿಲ್ಲ. ಈ ಶಾಲೆ ಮಾಜಿ ಶಾಸಕ ಎಲ್‌.­ಆರ್‌.­ಶಿವರಾಮೇ­ಗೌಡ ಅವರಿಗೆ ಸೇರಿದ್ದು ಎಂದು ಜಿಲ್ಲಾಡಳಿತದ ಮೂಲ­ಗಳು ತಿಳಿಸಿವೆ.

ನಾಲ್ಕು ಎಕರೆ ಜಾಗವನ್ನು ಶಾಲೆಯು ಆಟದ ಮೈದಾನ ಹಾಗೂ ಇತರ ಕಾರ್ಯಕ್ರಮಗಳಿಗೆ ಬಳಸುತ್ತಿತ್ತು. ಲೀಸ್‌ ಅವಧಿ ಕೆಲವು ತಿಂಗಳ ಹಿಂದೆಯೇ ಮುಕ್ತಾಯಗೊಂಡಿತ್ತು. ಈ ಜಾಗವನ್ನು ತೆರವು ಮಾಡುವಂತೆ ತಹಶೀಲ್ದಾರ್‌ ಡಾ.ಬಿ.ಆರ್‌.ಹರೀಶ್‌ ನಾಯ್ಕ್‌ ಅವರು ಆಡಳಿತ ಮಂಡಳಿಗೆ ನೋಟಿಸ್‌ ನೀಡಿದ್ದರು.

ಆಡಳಿತ ಮಂಡಳಿ ತೆರವು ಮಾಡುವುದಾಗಿ ಭರ­ವಸೆ ನೀಡಿತ್ತು. ಆದರೆ, ಈವರೆಗೂ ತೆರವು ಮಾಡಿ­ರಲಿಲ್ಲ. ಈ ಕಾರಣದಿಂದ ಜಿಲ್ಲಾಡಳಿತ ಕಾರ್ಯಾಚರಣೆ ನಡೆಸಿತು.

ಕಾರ್ಯಾಚರಣೆ ಸಂದರ್ಭದಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಆದರೂ ಇದಕ್ಕೆ ಅವ­ಕಾಶ ನೀಡದ ಅಧಿಕಾರಿಗಳು ಆಟದ ಮೈದಾ­ನದ ಕಾಂಪೌಂಡ್‌ ಹಾಗೂ ಶೆಡ್‌ಗಳನ್ನು ತೆರವು ಮಾಡಿಸುವಲ್ಲಿ ಯಶಸ್ವಿ­ಯಾದರು. ವಶಪಡಿಸಿಕೊಂಡ ಜಾಗದ ಮೌಲ್ಯ ₨75  ಕೋಟಿ. ಈ ಜಾಗವನ್ನು ಬಿಬಿಎಂಪಿ ವಶಕ್ಕೆ ಒಪ್ಪಿಸಲಾಯಿತು.

‘ಬಿಡಿಎ ಮಾಡಿರುವ ಒತ್ತುವರಿ ತೆರವಿಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುವುದು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದೆ: ‘ನಾನು ಸರ್ಕಾರಿ ಕೆರೆಯನ್ನು ಒತ್ತುವರಿ ಮಾಡಿಲ್ಲ. ಈ ಜಾಗವನ್ನು 10 ವರ್ಷ­ಗಳ ಅವಧಿಗೆ ಲೀಸ್‌ ಪಡೆಯ­ಲಾಗಿತ್ತು. ಪ್ರತಿಯಾಗಿ ಕೆರೆಯನ್ನು ಅಭಿವೃದ್ಧಿ­ಪಡಿಸಿದ್ದೆ. ಲೀಸ್‌ ಅವಧಿ ಮುಗಿದು ಆರು ತಿಂಗಳು ಕಳೆದಿದೆ. ಈ ಜಾಗವನ್ನು ವಾಪಸ್‌ ಪಡೆಯುವಂತೆ ಮೂರು ತಿಂಗಳ ಹಿಂದೆಯೇ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದೆ’ ಎಂದು ಶಾಲೆಯ ಅಧ್ಯಕ್ಷ ಎಲ್‌.­ಆರ್‌.­ಶಿವರಾಮೇಗೌಡ ಅವರು ಸ್ಪಷ್ಟ­ಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT