ADVERTISEMENT

4 ಕೆ.ಜಿ ಚಿನ್ನದ ಗಟ್ಟಿ ದೋಚಿದ್ದ ಐವರ ಬಂಧನ

ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಕೃತ್ಯ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2014, 19:50 IST
Last Updated 28 ನವೆಂಬರ್ 2014, 19:50 IST

ಬೆಂಗಳೂರು: ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಚಿನ್ನಾಭರಣ ಮಳಿಗೆ ನೌಕರರಿಂದ ₨ 1.76 ಕೋಟಿ ಮೌಲ್ಯದ 4 ಕೆ.ಜಿ. ಚಿನ್ನದ ಗಟ್ಟಿಗಳನ್ನು ದೋಚಿದ್ದ ಐದು ಮಂದಿಯನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರ ಮೂಲದ ಸರ್ಫಾಸ್ ಖಾನ್, ಶಲಾಲ್ ಮಹಮದ್, ಜಾವಿದ್ ಹರುಣ್, ರಾಮ್‌ ಜೀ ಚೌಸ್‌ ಹಾಗೂ ಪ್ರವೀಣ್ ಎಂಬುವರನ್ನು ಬಂಧಿಸಲಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ಸಂತೋಷ್ ತಲೆಮರೆಸಿಕೊಂಡಿದ್ದಾನೆ. ಕೆಲ ದಿನಗಳ ಹಿಂದೆ ಕೇರಳ ಮೂಲದ ಆನಂದ್ ಮತ್ತು ಮಹೇಶ್ ಎಂಬುವರು ಬಂಗಾರದ ಗಟ್ಟಿಗಳನ್ನು ಸಾಗಿಸುತ್ತಿದ್ದಾಗ ಆರೋಪಿಗಳು ಈ ಕೃತ್ಯ ಎಸಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಮಾಣಿಕ್ ಕದಂ ಎಂಬುವರು ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಚಿನ್ನಾಭರಣ ಮಳಿಗೆ ಇಟ್ಟುಕೊಂಡಿದ್ದಾರೆ. ಆನಂದ್ ಮತ್ತು ಮಹೇಶ್, ಆ ಮಳಿಗೆಯಲ್ಲೆ ಕೆಲಸ ಮಾಡುತ್ತಾರೆ. ಬಂಧಿತ ಪ್ರವೀಣ್‌ ಕೂಡ ತ್ರಿಶೂರ್ ಜಿಲ್ಲೆಯವನೇ ಆಗಿದ್ದರಿಂದ, ಆತನಿಗೆ ಮಹೇಶ್ ಮತ್ತು ಆನಂದ್ ಜತೆ ಸ್ನೇಹ ಬೆಳೆದಿತ್ತು.

ಕದಂ, ಬೆಂಗಳೂರಿನ ನಗರ್ತಪೇಟೆಯ ಚಿನ್ನಾಭರಣ ವರ್ತಕ­ರಿಂದ ಬಂಗಾರದ ಗಟ್ಟಿಗಳನ್ನು ತರಿಸಿಕೊಳ್ಳುತ್ತಿದ್ದರು. ಆ ಗಟ್ಟಿಗಳನ್ನು ಕರಗಿಸಿ, ವಿವಿಧ ವಿನ್ಯಾಸದಲ್ಲಿ ಒಡವೆ ತಯಾರಿಸಿ ಮಾರಾಟ ಮಾಡುತ್ತಿದ್ದರು. ಆನಂದ್ ಮತ್ತು ಮಹೇಶ್ ಅವರ ಮೇಲೆ ಹೆಚ್ಚು ವಿಶ್ವಾಸ ಇಟ್ಟುಕೊಂಡಿರುವ ಕದಂ, ಚಿನ್ನದ ಗಟ್ಟಿ­ಗಳನ್ನು ತರಲು ಅವರನ್ನೇ ಬೆಂಗಳೂರಿಗೆ ಕಳುಹಿಸುತ್ತಿದ್ದರು.

ಅದೇ ರೀತಿ ನ.6ರಂದು ಅವರು ಚಿನ್ನದ ಗಟ್ಟಿಗಳನ್ನು ತೆಗೆದುಕೊಂಡು ಹೋಗಲು ನಗರಕ್ಕೆ ಬಂದಿದ್ದರು. ಈ ಬಗ್ಗೆ ಮಾಹಿತಿ ಪಡೆದುಕೊಂಡ ಪ್ರವೀಣ್, ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಆ ಗಟ್ಟಿಗಳನ್ನು ದೋಚಲು ಸಂಚು ರೂಪಿಸಿದ್ದ.
ನಗರ್ತಪೇಟೆಯ ವರ್ತಕರಿಂದ ನಾಲ್ಕು ಕೆ.ಜಿ. ಚಿನ್ನದ ಗಟ್ಟಿಗಳನ್ನು ಖರೀದಿಸಿದ  ಆನಂದ್‌ ಮತ್ತು ಮಹೇಶ್, ಕೇರಳಕ್ಕೆ ಮರಳಲು ಕಲಾಸಿಪಾಳ್ಯದಲ್ಲಿ ಬಸ್‌ ಹತ್ತಿದರು. ಆಗ ಸರ್ಫಾಸ್ ಖಾನ್ ಮತ್ತು ಶಲಾಲ್ ಮಹಮದ್ ಕೂಡ ಪ್ರಯಾಣಿಕರ ಸೋಗಿನಲ್ಲಿ ಅದೇ ಬಸ್‌ ಹತ್ತಿ ಕುಳಿತರು.

ಬಸ್ ಮಡಿವಾಳ ತಲುಪುತ್ತಿದ್ದಂತೆಯೇ ಆ ಇಬ್ಬರು ಆರೋಪಿ­ಗಳು, ಆನಂದ್ ಮತ್ತು ಮಹೇಶ್‌ ಅವರ ಬಳಿ ಹೋದರು. ತಾವು ಆದಾಯ ತೆರಿಗೆ ಅಧಿಕಾರಿಗಳು ಎಂದು ಪರಿಚಯಿ­ಸಿ­ಕೊಂಡ ಅವರು, ‘ನೀವು ಅಕ್ರಮವಾಗಿ ಬಂಗಾರ ಸಾಗಿಸು­ತ್ತಿ­ರುವ ಬಗ್ಗೆ ಮಾಹಿತಿ ಬಂದಿದೆ. ಈ ಬಗ್ಗೆ ವಿಚಾರಣೆ ನಡೆಸ­ಬೇಕಿದೆ’ ಎಂದು ನಕಲಿ ಗುರುತಿನ ಚೀಟಿ ತೋರಿಸಿದರು.

ನಂತರ ಅವರನ್ನು ಬಸ್‌ನಿಂದ ಕೆಳಗಿಳಿಸಿಕೊಂಡ ಆರೋಪಿ­ಗಳು, ಉಳಿದ ಆರೋಪಿಗಳಿಗೆ ಕರೆ ಮಾಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಅವರು ಸಹ ಆಟೊದಲ್ಲಿ ಸ್ಥಳಕ್ಕೆ ಬಂದಿದ್ದಾರೆ. ನಂತರ ಮಹೇಶ್ ಮತ್ತು ಆನಂದ್ ಅವರನ್ನು ಜೆ.ಪಿ.ನಗರಕ್ಕೆ ಕರೆದುಕೊಂಡು ಹೋದ ಆರೋಪಿಗಳು, ಚಿನ್ನದ ಗಟ್ಟಿಗಳನ್ನು ಕಸಿದುಕೊಂಡು ಅದೇ ರಾತ್ರಿಯೇ  ಮಹಾರಾಷ್ಟ್ರಕ್ಕೆ ತೆರಳಿದ್ದರು.

ಪ್ರಕರಣ ಸಿಸಿಬಿಗೆ ವರ್ಗ: ಘಟನೆ ಸಂಬಂಧ ಆನಂದ್ ಮತ್ತು ಮಹೇಶ್‌ ಅವರು ಮಡಿವಾಳ ಠಾಣೆಗೆ ದೂರು ಕೊಟ್ಟಿ­ದ್ದರು. ನಂತರ ಪ್ರಕರಣ ಸಿಸಿಬಿಗೆ ವರ್ಗಾವಣೆ­ಯಾ­ಯಿತು. ಕಲಾಸಿಪಾಳ್ಯದಿಂದ ಮಡಿವಾಳದವರೆಗೆ ಮಾರ್ಗ­ದು­ದ್ದಕ್ಕೂ ಸಿ.ಸಿ.ಕ್ಯಾಮೆರಾ ಪರಿಶೀಲಿಸಿದ ಪೊಲೀಸರು, ಆರೋಪಿಗಳ ಚಹರೆ ಪಡೆಯುವಲ್ಲಿ ಯಶಸ್ವಿಯಾದರು. ಆ ಚಹರೆಯನ್ನು ಮಹೇಶ್ ಮತ್ತು ಆನಂದ್‌ಗೆ ತೋರಿಸಿದಾಗ ಅವರು ಸಂತೋಷ್‌ನ ಗುರುತು ಹಿಡಿದರು. ಆತ ಕೂಡ ಮೊದಲು ಕದಂ ಅವರ ಬಳಿಯೇ ಕೆಲಸ ಮಾಡುತ್ತಿದ್ದ.

‘ಕೃತ್ಯ ನಡೆದ ನಂತರ ಪ್ರವೀಣ್ ಸಹ ಕೆಲಸ ಬಿಟ್ಟಿದ್ದ. ಹೀಗಾಗಿ ಸಂತೋಷ್ ಜತೆ ಸೇರಿಕೊಂಡು ಆತನೇ ದರೋಡೆ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಯಿತು. ಕೂಡಲೇ ಸಿಬ್ಬಂದಿಯ ಒಂದು ತಂಡ ಮಹಾರಾಷ್ಟ್ರಕ್ಕೆ ತೆರಳಿ, ಸ್ಥಳೀಯ ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆ ಆರಂಭಿಸಿತು. ಹಂತ ಹಂತವಾಗಿ ಒಬ್ಬೊಬ್ಬರನ್ನೇ ಬಂಧಿಸಲಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.

ಚಿನ್ನ ಮಾರಿ ಮಣ್ಣೆತ್ತುವ ಯಂತ್ರ
‘ಕಳವು ಮಾಡಿದ್ದ 4 ಕೆ.ಜಿ ಚಿನ್ನದ ಗಟ್ಟಿಗಳಲ್ಲಿ ಆರೋಪಿಗಳು ಎರಡು ಕೆ.ಜಿ ಗಟ್ಟಿಗಳನ್ನು ಮಾರಾಟ ಮಾಡಿದ್ದರು. ಆ ಹಣದಲ್ಲಿ ಸರ್ಫಾಸ್‌ ಖಾನ್, ₨ 30 ಲಕ್ಷದ ಮಣ್ಣೆತ್ತುವ ಯಂತ್ರ (ಎಸ್ಕವೇಟರ್) ಖರೀದಿಸಿದ್ದ. ಬಂಧಿತರಿಂದ ₨ 42 ಲಕ್ಷ ನಗದು, ಎಸ್ಕವೇಟರ್, ಎರಡು ಕೆ.ಜಿ.ಚಿನ್ನದ ಗಟ್ಟಿಯನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT