ADVERTISEMENT

400 ಕೆ.ವಿ ವಿದ್ಯುತ್‌ ಮಾರ್ಗ ಬದಲಾವಣೆ ಬೇಡ: ವರದಿ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2014, 20:08 IST
Last Updated 28 ಆಗಸ್ಟ್ 2014, 20:08 IST

ಬೆಂಗಳೂರು: ಮೈಸೂರು – ಕೊಯಿಕ್ಕೋಡ್‌ ನಡುವಿನ 400 ಕೆ.ವಿ ಸಾಮರ್ಥ್ಯದ ವಿದ್ಯುತ್‌ ತಂತಿ ಮಾರ್ಗ ಈ ಹಿಂದೆ ತೀರ್ಮಾನಿಸಿದ ಪ್ರಕಾರವೇ ಹಾದು ಹೋಗು­ವುದು ಉತ್ತಮ ಎಂದು  ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿ ಅಭಿಪ್ರಾಯಪಟ್ಟಿದೆ.

ಭಾರತೀಯ ವಿಜ್ಞಾನ ಸಂಸ್ಥೆಯ ಡಾ.ಆರ್‌.ಎಸ್‌.ಶಿವಕುಮಾರ ಆರಾಧ್ಯ ನೇತೃತ್ವದ ಸಮಿತಿಯಲ್ಲಿ ಪರಿಸರವಾದಿ ಪ್ರೊ ರಾಮನ್‌ ಸುಕುಮಾರ್‌ ಮತ್ತು ಅಜಯ್‌ ಮಿಶ್ರ (ಐಎಫ್‌ಎಸ್‌ ಅಧಿಕಾರಿ) ಸದಸ್ಯರಾಗಿದ್ದರು. ‘ಸಮಿತಿ ವರದಿ ನನ್ನ ಕೈಸೇರಿದೆ. ಅದಕ್ಕೆ ಒಪ್ಪಿಗೆ ಕೊಟ್ಟು ವಿದ್ಯುತ್‌ ಮಾರ್ಗ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದು’ ಎಂದು ಇಂಧನ ಸಚಿವ ಡಿ.ಕೆ.ಶಿವ­ಕುಮಾರ್‌ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ಮೈಸೂರು ಜಿಲ್ಲೆಗೆ ಹೊಂದಿಕೊಂಡಿರುವ ಕೊಡಗಿನ ಮಾಲ್ದಾರೆ­ಯಿಂದ ಕೇರಳಕ್ಕೆ ಸಂಪರ್ಕಿ­ಸುವ ಕುಟ್ಟದವರೆಗೆ 55 ಕಿ.ಮೀ. ಉದ್ದದ ವಿದ್ಯುತ್‌ ತಂತಿ ಮಾರ್ಗ ಅರಣ್ಯ ಪ್ರದೇಶದಲ್ಲಿ ಹಾದು ಹೋಗುವುದು ಬೇಡ ಎಂದು ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದರು. ಇದೊಂದು ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಖುದ್ದು ಪರಿಶೀಲಿಸಿ, ವರದಿ ನೀಡಲು ರಾಜ್ಯ ಸರ್ಕಾರ ತಜ್ಞರ ಸಮಿತಿಯನ್ನು ನೇಮಿಸಿತ್ತು.

‘ಮಾರ್ಗ ಹಾದು ಹೋಗುವ ಜಮೀನಿನ ಮಾಲೀಕರಿಗೆ ಹೆಚ್ಚಿನ ಪರಿಹಾರ ನೀಡಬೇಕು. ಬುಡಕಟ್ಟು ಜನರ ಕಾಲೋನಿಗಳ ಸ್ಥಳಾಂತರದ ಆತಂಕ ಇದ್ದು, ಬುಡಕಟ್ಟು ಕಾಯ್ದೆ ಪ್ರಕಾರ ಅವರಿಗೆ ರಕ್ಷಣೆ  ನೀಡಬೇಕು. ಪ್ರಾಣಿ ಮತ್ತು ಮಾನವ ಸಂಘರ್ಷ ಕಡಿಮೆ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸಮಿತಿ ತನ್ನ ಶಿಫಾರಸುಗಳಲ್ಲಿ ತಿಳಿಸಿದೆ ಎಂದು ಶಿವಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.