ADVERTISEMENT

43 ಎಕರೆ ಒತ್ತುವರಿ ತೆರವು

ಬೆಂಗಳೂರು ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2015, 20:06 IST
Last Updated 28 ಮಾರ್ಚ್ 2015, 20:06 IST

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ವಿ.ಶಂಕರ್‌ ನೇತೃತ್ವದ ಅಧಿಕಾರಿಗಳ ತಂಡ ಶನಿವಾರ ಕಾರ್ಯಾಚರಣೆ ನಡೆಸಿ ₨126.25 ಕೋಟಿ ಮೌಲ್ಯದ 43.20 ಎಕರೆಯ ಒತ್ತುವರಿ ತೆರವು ಮಾಡಿದೆ.

ಯಲಹಂಕ ತಾಲ್ಲೂಕಿನ ಹೆಸರಘಟ್ಟ ಹೋಬಳಿಯ ಅಮಾನಿ ಮಾರಸಂದ್ರ ಗ್ರಾಮದ ಸರ್ವೆ ಸಂಖ್ಯೆ 45ರ ಸರ್ಕಾರಿ ಕೆರೆಕಟ್ಟೆಯ 30 ಎಕರೆಯನ್ನು ಮಲ್ಲಿಕಾರ್ಜುನ, ಶಿವರುದ್ರಪ್ಪ, ಮೋಹನ್‌  ಹಾಗೂ ಇತರರು ಒತ್ತುವರಿ ಮಾಡಿಕೊಂಡಿದ್ದರು.

ಉತ್ತರ ತಾಲ್ಲೂಕಿನ ಕಸಬಾ ಹೋಬಳಿಯ ಕಾಚರಕನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 153ರಲ್ಲಿ 14 ಗುಂಟೆ ಸರ್ಕಾರಿ ಕೆರೆ ಒತ್ತುವರಿಯಾಗಿತ್ತು. ದಕ್ಷಿಣ ತಾಲ್ಲೂಕಿನ ತಾವರೆಕೆರೆ ಹೋಬಳಿಯ ಚಿಕ್ಕನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 106ರಲ್ಲಿ 1 ಎಕರೆ 37 ಗುಂಟೆ ಸರ್ಕಾರಿ ಗೋಮಾಳ ಒತ್ತುವರಿಯಾಗಿತ್ತು. ಈ ಒತ್ತುವರಿಗಳನ್ನು ತೆರವುಗೊಳಿಸಲಾಯಿತು.

ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ಮೇಡಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 89ರಲ್ಲಿ 20 ಗುಂಟೆ ಸರ್ಕಾರಿ ಗೋಮಾಳ, ಹಿರಂಡಹಳ್ಳಿಯ ಸರ್ವೆ ಸಂಖ್ಯೆ 26ರ 2 ಎಕರೆ 7 ಗುಂಟೆ ಸರ್ಕಾರಿ ಧರ್ಮದ ತೋಪು, ಖಾಜಿ ಸೊಣ್ಣೇನಹಳ್ಳಿಯ ಸರ್ವೆ ಸಂಖ್ಯೆ 122ರ 34 ಗುಂಟೆ, ಹಂಚರಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 4ರ 34 ಗುಂಟೆ ಕೆರೆ ಅಂಗಳ ವನ್ನು ಒತ್ತುವರಿ ಮಾಡಲಾಗಿತ್ತು.

ವರ್ತೂರಿನ ಗುಂಜೂರು ಗ್ರಾಮದ ಸರ್ವೆ ಸಂಖ್ಯೆ 209ರ 34 ಗುಂಟೆ ಜಾಗವನ್ನು ಪ್ರೆಸ್ಟೀಜ್‌ ಗ್ರೂಪ್‌ ಹಾಗೂ ತ್ರಿಶೂಲ್‌ ಬಿಲ್‌ಟೆಕ್‌ನವರು ಒತ್ತುವರಿ ಒತ್ತುವರಿ ಮಾಡಿದ್ದರು. ರಾಮಗೊಂಡನಹಳ್ಳಿಯ ಸರ್ವೆ ಸಂಖ್ಯೆ 105, 106ರ 4 ಎಕರೆ ಗೋಮಾಳ, ವಿಭೂತಿಪುರದ ಸರ್ವೆ ಸಂಖ್ಯೆ 1175ರಲ್ಲಿ 20 ಗುಂಟೆ ಕೆರೆ ಜಾಗ, ಹೂಡಿಯ ಸರ್ವೆ ಸಂಖ್ಯೆ 30ರ 1 ಎಕರೆ 20 ಗುಂಟೆ ಜಾಗ ಒತ್ತುವರಿಯಾಗಿತ್ತು. ಈ ಎಲ್ಲ ಒತ್ತುವರಿಗಳನ್ನು ತೆರವು ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.