ADVERTISEMENT

47.90 ಕೋಟಿ ತೆರಿಗೆ ಸಂಗ್ರಹ

ಮಹಾನಗರ ಪಾಲಿಕೆ ವತಿಯಿಂದ ವಿಶೇಷ ಅಭಿಯಾನ

​ಪ್ರಜಾವಾಣಿ ವಾರ್ತೆ
Published 28 ಮೇ 2015, 5:54 IST
Last Updated 28 ಮೇ 2015, 5:54 IST

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ಬುಧವಾರ ನಡೆಸಿದ ವಿಶೇಷ ಅಭಿಯಾನದಲ್ಲಿ ₨ 47.90 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ.

ಬಿಬಿಎಂಪಿ ಆಡಳಿತಾಧಿಕಾರಿ ಟಿ.ಎಂ.ವಿಜಯಭಾಸ್ಕರ್‌ ಮತ್ತು ಆಯುಕ್ತ ಜಿ. ಕುಮಾರ್‌ ನಾಯಕ್‌ ಅಭಿಯಾನದ ನೇತೃತ್ವ ವಹಿಸಿದ್ದರು. ಫೀನಿಕ್ಸ್‌ ಮಾಲ್‌ನಿಂದ ₨ 3.4 ಕೋಟಿ ತೆರಿಗೆ ಬಾಕಿ ಉಳಿಸಿಕೊಳ್ಳಲಾಗಿತ್ತು. ಆಯುಕ್ತರು ಬಂದು ಮಾಲ್‌ನ ವ್ಯವಸ್ಥಾಪಕರ ಜತೆ ಚರ್ಚೆ ನಡೆಸಿದ ಬಳಿಕ ಸ್ಥಳದಲ್ಲೇ ₨ 1.7 ಕೋಟಿ ಪಾವತಿ ಮಾಡಲಾಯಿತು. ಮಿಕ್ಕ ಹಣವನ್ನು ಪಾವತಿಸಲು ಆಯುಕ್ತರು ಸಮಯಾವಕಾಶ ನೀಡಿದರು.

ಎಲ್ಲ ವಲಯಗಳಲ್ಲೂ ವಿಶೇಷ ತೆರಿಗೆ ಸಂಗ್ರಹ ಅಭಿಯಾನ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.
ಗುತ್ತಿಗೆದಾರರಿಗೆ ದಂಡ: ಶಿವಾಜಿನಗರದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಅಗತ್ಯ ವಾಹನ ಮತ್ತು ಸಿಬ್ಬಂದಿ ನಿಯೋಜನೆ ಮಾಡದ ಗುತ್ತಿಗೆದಾರರಿಗೆ ಆಯುಕ್ತರು ₨ 1 ಲಕ್ಷ ದಂಡ ವಿಧಿಸಿದರು.

ವಾರ್ಡ್‌ನ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಬೆಳಿಗ್ಗೆ ಹಾಜರಾತಿ ಕೇಂದ್ರಕ್ಕೆ ಭೇಟಿ ನೀಡಿದಾಗ ಅಗತ್ಯ ಸಂಖ್ಯೆಯಲ್ಲಿ ವಾಹನ ಮತ್ತು ಸಿಬ್ಬಂದಿ ಇಲ್ಲದಿರುವುದನ್ನು ಗಮನಿಸಿದರು. ಈ ಸಂಬಂಧ ಆಯುಕ್ತರ ಮೊಬೈಲ್‌ಗೆ ವಾಟ್ಸ್‌ ಆ್ಯಪ್‌ ಸಂದೇಶ ರವಾನಿಸಿದರು.
ನಿಗದಿಗಿಂತ 10 ಟಿಪ್ಪರ್‌ ಹಾಗೂ 13 ಪೌರ ಕಾರ್ಮಿಕರು ಕಡಿಮೆ ಇರುವುದನ್ನು ಖಚಿತಪಡಿಸಿಕೊಂಡ ಆಯುಕ್ತರು ದಂಡ ವಿಧಿಸಿ ಆದೇಶ ಹೊರಡಿಸಿದರು. ಪ್ರತಿದಿನ ಹಾಜರಾತಿ ಕೇಂದ್ರಗಳಿಗೆ ತೆರಳಿ ನಿಗದಿಯಂತೆ ವಾಹನ ಮತ್ತು ಸಿಬ್ಬಂದಿ ಇರುವುದನ್ನು ಖಚಿತಪಡಿಸಿಕೊಂಡು ವಾಟ್ಸ್‌ ಆ್ಯಪ್‌ ಸಂದೇಶ ರವಾನಿಸಲು ಕುಮಾರ್‌ ನಾಯಕ್‌ ಸೂಚಿಸಿದ್ದರು.

ದಿಢೀರ್‌ ಭೇಟಿ: ಪಾಲಿಕೆ ಕೇಂದ್ರ ಕಚೇರಿಯಲ್ಲಿರುವ ವಿವಿಧ ವಿಭಾಗಗಳಿಗೆ ಆಯುಕ್ತರು ಬುಧವಾರ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಲವು ವಿಭಾಗಗಳಲ್ಲಿ ಹಳೆಯ ಕಡತ, ಮುರಿದುಹೋದ ಕುರ್ಚಿ ಮತ್ತು ಎಲೆಕ್ಟ್ರಾನಿಕ್‌ ಉಪಕರಣ ಇಟ್ಟಿರುವುದನ್ನು ಗಮನಿಸಿದ ಅವರು, ತಕ್ಷಣ ಎಲ್ಲ ಅನುಪಯುಕ್ತ ವಸ್ತುಗಳ ಪಟ್ಟಿ ಮಾಡಿ ಹರಾಜಿಗೆ ಹಾಕಬೇಕು. ಕಚೇರಿ ಆವರಣದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ಕಚೇರಿಗೆ ಬರುವ ಸಾರ್ವಜನಿಕರ ಜತೆ ಸೌಜನ್ಯದಿಂದ ವರ್ತಿಸಬೇಕು ಎಂದು ಸಿಬ್ಬಂದಿಗೆ ಕಿವಿಮಾತು ಹೇಳಿದರು. ಕಚೇರಿಗೆ ತಡವಾಗಿ ಹಾಜರಾದವರ ವಿವರವನ್ನು ಬಯೊಮೆಟ್ರಿಕ್ಸ್‌ ವ್ಯವಸ್ಥೆ ಮೂಲಕ ತಿಳಿದುಕೊಂಡು ಅಂಥವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಆಡಳಿತ ವಿಭಾಗದ ಸಹಾಯಕ ಆಯುಕ್ತರಿಗೆ ಸೂಚನೆ ನೀಡಿದರು.

ಇನ್ನು 3 ದಿನ ರಿಯಾಯ್ತಿ ಸೌಲಭ್ಯ: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ಬುಧವಾರ ನಡೆಸಿದ ವಿಶೇಷ ಅಭಿಯಾನದಲ್ಲಿ ₨ 47.90 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT