ADVERTISEMENT

5,046 ಮಾತ್ರ ತೆರವಿಗೆ ಬಾಕಿ: ಸಿದ್ದರಾಮಯ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2014, 20:12 IST
Last Updated 19 ಸೆಪ್ಟೆಂಬರ್ 2014, 20:12 IST

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯಲ್ಲಿ 5,046 ಎಕರೆ ಸರ್ಕಾರಿ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಆಗ್ರಹಿಸಿ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಮತ್ತಿತರರು ನಿರಂತರ ಧರಣಿ ನಡೆಸುತ್ತಿರುವ ಕುರಿತು ಶುಕ್ರವಾರ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು ಈ ವಿಷಯ ತಿಳಿಸಿದರು.

ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 1,22,918 ಎಕರೆ ಸರ್ಕಾರಿ ಜಮೀನು ಇದೆ. ಈ ಪೈಕಿ 34,110 ಎಕರೆ ಒತ್ತುವರಿ ಆಗಿದೆ ಎಂದು ಸರ್ಕಾರಿ ಜಮೀನುಗಳ ಒತ್ತುವರಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಜಂಟಿ ಸದನ ಸಮಿತಿ ಅಧ್ಯಕ್ಷರಾಗಿದ್ದ ರಾಮಸ್ವಾಮಿ ಅವರು ವರದಿ ನೀಡಿದ್ದರು. 14,393 ಎಕರೆ ಜಮೀನಿನ ಒತ್ತುವರಿಯನ್ನು ಈಗಾಗಲೇ ತೆರವು ಮಾಡಲಾಗಿದೆ ಎಂದರು.

7,879 ಎಕರೆ ಸರ್ಕಾರಿ ಜಮೀನು ಸಾರ್ವಜನಿಕ ಉದ್ದೇಶಕ್ಕೆ ಬಳಕೆಯಾಗಿದೆ. ಅಕ್ರಮ– ಸಕ್ರಮ (ಬಗರ್‌ ಹುಕುಂ) ಯೋಜನೆಯಡಿ 6,792 ಎಕರೆ ಜಮೀನು ಮಂಜೂರು ಮಾಡುವಂತೆ ಅನಧಿಕೃತ ಸಾಗುವಳಿದಾರರು ಸಲ್ಲಿಸಿರುವ ಅರ್ಜಿಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಕಿ ಇವೆ. ಈಗ ಒಟ್ಟು 5,046 ಎಕರೆ ಮಾತ್ರ ತೆರವಿಗೆ ಬಾಕಿ ಇದೆ. ಈ ಕಾರ್ಯಾಚರಣೆಗೆ ಕ್ರಿಯಾಯೋಜನೆ ಸಿದ್ಧಪಡಿಸಿದ್ದು, ಶೀಘ್ರದಲ್ಲೇ ಒತ್ತುವರಿ ತೆರವು ಮಾಡಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.