ADVERTISEMENT

ಶಾಸಕ–ಪಾಲಿಕೆ ಸದಸ್ಯೆ ನಡುವೆ ಕಿತ್ತಾಟ

ರಾಮಕೃಷ್ಣ ಸೇವಾ ನಗರದ ಇಂದಿರಾ ಕ್ಯಾಂಟೀನ್‌ ಜಾಗ

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 20:09 IST
Last Updated 3 ಜನವರಿ 2018, 20:09 IST
ಶಾಸಕ ಎಸ್.ಸುರೇಶ್ ಕುಮಾರ್, ಕುಮಾರಿ ಪಳನಿಕಾಂತ್‌
ಶಾಸಕ ಎಸ್.ಸುರೇಶ್ ಕುಮಾರ್, ಕುಮಾರಿ ಪಳನಿಕಾಂತ್‌   

ಬೆಂಗಳೂರು: ನಗರದ ದಯಾನಂದನಗರ ವಾರ್ಡ್‌ನಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಿಸಲು ಆಯ್ಕೆ ಮಾಡಿದ್ದ ಬಿಬಿಎಂಪಿ ಒಡೆತನದ ಜಾಗ ಈಗ ಶಾಸಕ ಎಸ್‌. ಸುರೇಶ್‌ ಕುಮಾರ್‌ ಮತ್ತು ಪಾಲಿಕೆಯ ಬಿಜೆಪಿ ಸದಸ್ಯೆ ಕುಮಾರಿ ಪಳನಿಕಾಂತ್‌ ನಡುವೆ ಕಿತ್ತಾಟಕ್ಕೆ ಕಾರಣವಾಗಿದೆ.

ರಾಮಕೃಷ್ಣ ಸೇವಾನಗರದ ಶ್ರೀರಾಮಪುರ ಠಾಣೆಯ ರಸ್ತೆಯಲ್ಲಿರುವ ಹಳೆ ಮಾರುಕಟ್ಟೆ ಜಾಗದಲ್ಲಿ ಕ್ಯಾಂಟೀನ್‌ ನಿರ್ಮಿಸಲು ಸ್ಥಳೀಯರಿಂದಲೂ ಪರ–ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.

ಇದೇ ಜಾಗದಲ್ಲೇ ಕ್ಯಾಂಟೀನ್‌ ನಿರ್ಮಿಸಬೇಕೆಂದು ಕುಮಾರಿ ಪಳನಿಕಾಂತ್‌ ಪಟ್ಟುಹಿಡಿದಿದ್ದಾರೆ. ‘ಇಲ್ಲಿ ಕ್ಯಾಂಟೀನ್‌ ಬೇಡ, ಸಮುದಾಯ ಭವನ ಕಟ್ಟಿ’ ಎಂದು ಒತ್ತಾಯಿಸುತ್ತಿರುವ ಸ್ಥಳೀಯರ ಬೆನ್ನಿಗೆ ಶಾಸಕರು ನಿಂತಿದ್ದಾರೆ. ಶಾಸಕರಿಂದ ಹಸಿರು ನಿಶಾನೆ ಸಿಗದೆ, ಕ್ಯಾಂಟೀನ್‌ ಕಟ್ಟಲಾಗದು ಎಂದು ಪಾಲಿಕೆ ಅಧಿಕಾರಿಗಳು ಕೈಚೆಲ್ಲಿದ್ದಾರೆ. ಇದರಿಂದಾಗಿ ಕ್ಯಾಂಟೀನ್‌ ನಿರ್ಮಾಣ ನನೆಗುದಿಗೆ ಬೀಳುವಂತಾಗಿದೆ.

ADVERTISEMENT

ಮೊದಲು ಗಾಂಧಿ ಶಾಲೆಯ ಆಟದ ಮೈದಾನದಲ್ಲಿ ಕ್ಯಾಂಟೀನ್‌ ನಿರ್ಮಿಸಲು ಜಾಗ ಗುರುತಿಸಲಾಗಿತ್ತು. ಆಟದ ಮೈದಾನದಲ್ಲಿ ಕ್ಯಾಂಟೀನ್‌ ಬೇಡ. 35 ವರ್ಷಗಳಿಂದ ಪಾಳುಬಿದ್ದಿರುವ ಮಾಂಸ ಮಾರುಕಟ್ಟೆ ಜಾಗದಲ್ಲಿ ಕ್ಯಾಂಟೀನ್‌ ನಿರ್ಮಿಸಿ’ ಎಂದು ಶಾಸಕರು ಸೂಚಿಸಿದ್ದರು.

ಪಾಲಿಕೆ ಎಂಜಿನಿಯರ್‌ಗಳು ಸ್ಥಳ ಪರಿಶೀಲಿಸಿ, ಜಾಗ ಅಂತಿಮಗೊಳಿಸಿದ್ದರು. ಶಿಥಿಲ ಕಟ್ಟಡ ತೆರವುಗೊಳಿಸಿ, ಜಾಗ ಸಮತಟ್ಟು ಮಾಡಲಾಗಿತ್ತು. ಆದರೆ, ಶಾಸಕರು ದಿಢೀರ್‌ ನಿಲುವು ಬದಲಿಸಿದ್ದಾರೆ. ಸ್ಥಳೀಯರನ್ನು ಎತ್ತಿಕಟ್ಟಿದ್ದಾರೆ’ ಎಂದು ಕುಮಾರಿ ಪಳನಿಕಾಂತ್‌ ಮತ್ತು ಅವರ ಪತಿ ಪಳನಿಕಾಂತ್‌ ಆರೋಪಿಸುತ್ತಾರೆ.

‘ವಾರ್ಡ್‌ನಲ್ಲಿ ಪರಿಶಿಷ್ಟ ಜಾತಿಯವರು ಮತ್ತು ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಭಾಗಕ್ಕೆ ಕ್ಯಾಂಟೀನ್‌ ಅಗತ್ಯವಿದೆ. ಕ್ಯಾಂಟೀನ್‌ ನಿರ್ಮಾಣ ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಬಡವರು ಸವಲತ್ತುಗಳಿಂದ ವಂಚಿತರಾಗಿದ್ದಾರೆ’ ಎಂದು ಪಳನಿಕಾಂತ್‌ ಅವರು ಕಿಡಿಕಾರಿದ್ದಾರೆ.

‘ನಾನು ಇಂದಿರಾ ಕ್ಯಾಂಟೀನ್‌ ವಿರೋಧಿಯಲ್ಲ. ನನ್ನ ಒಂದೇ ವಾರ್ಡಿನಲ್ಲಿ ಮೂರು ಕ್ಯಾಂಟೀನ್‌ ನಿರ್ಮಿಸಲಾಗಿದೆ. ಪ್ರಕಾಶನಗರದಲ್ಲಿ ಎರಡು ಕ್ಯಾಂಟೀನ್‌ಗಳನ್ನು ಎದುರುಬದುರು ನಿರ್ಮಿಸಲಾಗಿದೆ. ಸುಸಜ್ಜಿತವಾಗಿದ್ದ ಉದ್ಯಾನದೊಳಗೆ ಕ್ಯಾಂಟೀನ್‌ ನಿರ್ಮಿಸಿ, ಈಗ ಮತ್ತೊಂದು ಕಡೆ ಹೊಸ ಉದ್ಯಾನ ನಿರ್ಮಿಸಲು ಜಾಗ ಹುಡುಕುತ್ತಿದ್ದಾರೆ. ಈ ಬಗ್ಗೆಯೂ ನಾನು ಚಕಾರ ಎತ್ತಿಲ್ಲ’ ಎನ್ನುತ್ತಾರೆ ಎಸ್‌. ಸುರೇಶ್‌ಕುಮಾರ್‌.

‘ಹಳೆ ಮಾರುಕಟ್ಟೆ ಜಾಗದಲ್ಲಿ ಸಮುದಾಯ ಭವನ ನಿರ್ಮಿಸುವಂತೆ ಸ್ಥಳೀಯರು ಬೇಡಿಕೆ ಇಟ್ಟಿದ್ದರು. ಕಟ್ಟಡ ತೆರವುಗೊಳಿಸುವಾಗಲೇ ಬಿಬಿಎಂಪಿಯಿಂದ ಇಲ್ಲಿ ಸಮುದಾಯ ಭವನ ನಿರ್ಮಿಸಿಕೊಡುವ ಭರವಸೆ ನೀಡಲಾಗಿತ್ತು. ಇಲ್ಲಿ ಕ್ಯಾಂಟೀನ್‌ ಕಟ್ಟಲು ಹೋದಾಗ ಜನರು ಪ್ರತಿಭಟಿಸಿದ್ದರು. ಇದರ ಪಕ್ಕದಲ್ಲೇ ಇರುವ ಶ್ರೀರಾಮಪುರ ಕೋ ಆಪರೇಟಿವ್‌ ಸಹಕಾರ ಸಂಘ ಬಾಗಿಲು ಮುಚ್ಚಿದ್ದು, ಇದು ಕೂಡ ಬಿಬಿಎಂಪಿ ಜಾಗವೇ ಆಗಿರುವುದರಿಂದ ಇಲ್ಲೇ ಕ್ಯಾಂಟೀನ್‌ ನಿರ್ಮಿಸುವಂತೆ ಮನವಿ ಕೊಟ್ಟಿದ್ದರು. ರಾಮಕೃಷ್ಣ ಸೇವಾನಗರ, ಅಂಬೇಡ್ಕರ್‌ ನಗರ ಹಾಗೂ ಗೌತಮನಗರ ನಿವಾಸಿಗಳ ಮನವಿ ಆಧರಿಸಿ ಪಾಲಿಕೆಗೆ ಶಿಫಾರಸು ಪತ್ರ ನೀಡಿದ್ದೇನೆ’ ಎಂದು ಅವರು ಸ್ಪಷ್ಟಪಡಿಸಿದರು.

*
ಪಳನಿಕಾಂತ್‌ಗೆ ನನ್ನ ವಿರುದ್ಧ ಸುಳ್ಳು ಆರೋಪ ಮಾಡದಿದ್ದರೆ ತಿಂದನ್ನ ಜೀರ್ಣವಾಗುವುದಿಲ್ಲ. ಹಾಗಾಗಿ ಪದೇ ಪದೇ ಆಧಾರರಹಿತ ಆರೋಪ ಮಾಡುತ್ತಿದ್ದಾರೆ.
–ಎಸ್‌. ಸುರೇಶ್‌ಕುಮಾರ್‌, ಶಾಸಕ

*
ಕ್ಷೇತ್ರಕ್ಕೆ ಇಂದಿರಾ ಗಾಂಧಿಯವರ ದೊಡ್ಡ ಭಾವಚಿತ್ರ ಬರುವುದು ಶಾಸಕರಿಗೆ ಇಷ್ಟವಿಲ್ಲ. ಆ ಕಾರಣಕ್ಕಾಗಿ ಇಂದಿರಾ ಕ್ಯಾಂಟೀನ್‌ ವಿರೋಧಿಸುತ್ತಿದ್ದಾರೆ.
– ಕುಮಾರಿ ಪಳನಿಕಾಂತ್‌, ಪಾಲಿಕೆ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.