ADVERTISEMENT

ಸೊಪ್ಪು ತರಕಾರಿ ಮೂಲಕ ದೇಹ ಸೇರುತ್ತಿದೆ ವಿಷ!

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 20:29 IST
Last Updated 15 ಜನವರಿ 2018, 20:29 IST

ಬೆಂಗಳೂರು: ಕೊಳಚೆ ನೀರು ಬಳಸಿ ಬೆಳೆಯುತ್ತಿರುವ ತರಕಾರಿ, ಸೊಪ್ಪು, ಹಣ್ಣುಹಂಪಲು ವಿಷಯುಕ್ತವಾಗಿವೆ. ಇವುಗಳನ್ನು ಜನರು ಅರಿವಿಲ್ಲದೆ ಸೇವಿಸುತ್ತಿದ್ದು, ಇದು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗುತ್ತಿದೆ. ಹುಟ್ಟುವ ಮಕ್ಕಳಲ್ಲಿ ಬುದ್ಧಿಮಾಂದ್ಯ ಸಮಸ್ಯೆಯೂ ಕಾಣಿಸಿಕೊಳ್ಳುತ್ತಿದೆ!

ನಿಮ್ಹಾನ್ಸ್‌ನ 50 ತಜ್ಞರು ಸೇರಿ 200 ಸಂಶೋಧಕರು ದೇಶದ 12 ರಾಜ್ಯಗಳಲ್ಲಿ ನಡೆಸಿರುವ ಮಾನಸಿಕ ಆರೋಗ್ಯ ಸಮೀಕ್ಷೆಯಲ್ಲಿ ಈ ಸಂಗತಿ ಸಾಬೀತಾಗಿದೆ.

ಅಪಾಯಕಾರಿ ತ್ಯಾಜ್ಯಗಳನ್ನು ಕೈಗಾರಿಕೆಗಳು ಕೆರೆ, ನಾಲೆ, ರಾಜಕಾಲುವೆ ಹಾಗೂ ನದಿಗಳಿಗೆ ಹರಿಬಿಡುತ್ತಿವೆ. ಕೈಗಾರಿಕೆಗಳು ಹೊರಹಾಕುತ್ತಿರುವ ಭಾರಲೋಹಗಳ ತ್ಯಾಜ್ಯ ರಾಜಕಾಲುವೆ ಮತ್ತು ನದಿಗಳಿಗೆ ನೇರವಾಗಿ ಸೇರುತ್ತಿದೆ. ಆ ಭಾಗದ ರೈತರು ಇದೇ ತ್ಯಾಜ್ಯ ನೀರು ಬಳಸಿ ಬೆಳೆದ ತರಕಾರಿ, ಸೊಪ್ಪು ಹಾಗೂ ಹಣ್ಣುಗಳಲ್ಲಿ ಕ್ಯಾಡ್ಮಿಯಂ, ಸತು, ಪಾದರಸ, ಕ್ರೋಮಿಯಂ, ನಿಕ್ಕೆಲ್‌ನಂತಹ ವಿಷಕಾರಿ ರಾಸಾಯನಿಕಗಳಿರುವುದು ದೃಢಪಟ್ಟಿದೆ.

ADVERTISEMENT

ಇಂತಹ ರಾಸಾಯನಿಕಯುಕ್ತ ಆಹಾರ ಪದಾರ್ಥಗಳನ್ನು ಸೇವಿಸಿದವರು ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಮೂತ್ರಪಿಂಡಕ್ಕೆ ಹಾನಿಯೂ ಉಂಟಾಗುತ್ತದೆ. ಗರ್ಭಿಣಿಯರು, ಬಾಣಂತಿಯರು, ನವಜಾತ ಶಿಶುಗಳು, ಸಣ್ಣ ಮಕ್ಕಳಲ್ಲಿ ತೀವ್ರ ಸ್ವರೂಪದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಗರ್ಭಿಣಿಯರು ಇಂತಹ ತರಕಾರಿ, ಸೊಪ್ಪು ಸೇವಿಸಿದರೆ, ಹುಟ್ಟುವ ಮಕ್ಕಳಿಗೆ ಬುದ್ಧಿಮಾಂದ್ಯತೆ ಇರುವ ಅಪಾಯ ಹೆಚ್ಚು ಎಂದು ಸಮೀಕ್ಷಾ ತಂಡದಲ್ಲಿದ್ದ ನಿಮ್ಹಾನ್ಸ್‌ನ ವೈದ್ಯರೊಬ್ಬರು ತಿಳಿಸಿದರು.

ನಿಮ್ಹಾನ್ಸ್‌ ವೈದ್ಯರ ತಂಡ ನೀಡಿರುವ ವರದಿಯ ಬಗ್ಗೆ ಹಾಗೂ ನಗರದಲ್ಲಿ ಹೆಚ್ಚುತ್ತಿರುವ ಪರಿಸರ ಮಾಲಿನ್ಯ ತಡೆಗಟ್ಟುವ ಸಂಬಂಧ ಬಿಬಿಎಂಪಿಯಲ್ಲಿ ಇತ್ತೀಚೆಗೆ ನಡೆದ ವಿಶೇಷ ಸಭೆಯಲ್ಲಿ ಗಹನವಾದ ಚರ್ಚೆ ನಡೆದಿತ್ತು.

ವಿಷಕಾರಿ ಪದಾರ್ಥಗಳನ್ನು ನಾಲೆಗಳಿಗೆ ಬಿಡುತ್ತಿರುವ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪರಿಸರವಾದಿ ಡಾ.ಅ.ನ.ಯಲ್ಲಪ್ಪರೆಡ್ಡಿ ನೇತೃತ್ವದ ನಿಯೋಗ ಬಿಬಿಎಂಪಿಗೆ ಮನವಿ ಸಲ್ಲಿಸಿತ್ತು.

ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಮತ್ತು ಮೇಯರ್‌ ಸಂಪತ್‌ ರಾಜ್‌ ಅವರೂ ‘ಅಪಾಯಕಾರಿ ತ್ಯಾಜ್ಯ ಹೊರಬಿಡುವ ಕಾರ್ಖಾನೆಗಳ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ’ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದರು. ವೃಷಭಾವತಿ ನಾಲೆ ಸೇರಿದಂತೆ ಪ್ರಮುಖ ರಾಜಕಾಲುವೆಗಳಿಗೆ ವಿಷಕಾರಿ ಪದಾರ್ಥ ಸೇರಿಸುತ್ತಿರುವ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು.

ಹುಲ್ಲಿನಲ್ಲೂ ವಿಷ:

ಕಾರ್ಖಾನೆಗಳು ಹೊರಬಿಡುವ ತ್ಯಾಜ್ಯ ನೀರು ಬಳಸಿ ಬೆಳೆದ ತರಕಾರಿ, ಸೊಪ್ಪುಗಳು ಮಾತ್ರ ವಿಷಕಾರಿಯಾಗಿಲ್ಲ. ಕೊಳಚೆ ನೀರು ಹರಿಯುವ ನಾಲೆಗಳ ಬದಿಯಲ್ಲಿ ಬೆಳೆಯುವ ಹುಲ್ಲಿನಲ್ಲೂ ವಿಷಕಾರಿ ರಾಸಾಯನಿಕಗಳಿರುವುದು ಕಂಡುಬಂದಿದೆ. ಈ ಹುಲ್ಲು ಸೇವಿಸುವ ಮತ್ತು ಇದೇ ನೀರು ಕುಡಿಯುವ ಹಸುಗಳ ಹಾಲೂ ವಿಷಯುಕ್ತವಾಗಿರುವುದು ವೈಜ್ಞಾನಿಕ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎನ್ನುತ್ತಾರೆ ಡಾ.ಅ.ನ.ಯಲ್ಲಪ್ಪರೆಡ್ಡಿ.

‘ಹಳೆ ಮೊಬೈಲ್‌ಗಳಲ್ಲಿರುವ ಚಿನ್ನ ಬೇರ್ಪಡಿಸುವ, ಎಲೆಕ್ಟ್ರಾನಿಕ್‌ ತ್ಯಾಜ್ಯಗಳಲ್ಲಿರುವ ಲೋಹ ವಿಂಗಡಿಸುವ ಘಟಕಗಳು, ಎಲೆಕ್ಟ್ರೋಪ್ಲೇಟಿಂಗ್‌ ಕಾರ್ಖಾನೆಗಳು ಹೊರ ಸೂಸುವ ಅಪಾಯಕಾರಿ ಹೊಗೆಯಿಂದ ವಾಯಮಾಲಿನ್ಯ ಉಂಟಾಗುತ್ತಿದೆ. ಇದರಿಂದಾಗಿ ಕ್ಷಯ, ಆಸ್ತಮಾ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ’ ಎಂದು ಅವರು ತಿಳಿಸಿದರು.

ಸದ್ದಿಲ್ಲದೆ ಜನರ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಉಂಟುಮಾತ್ತಿರುವ ಈ ಸಮಸ್ಯೆ ನಿವಾರಿಸಲು ಬಿಬಿಎಂಪಿ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದ್ದೇವೆ ಎಂದರು.

2030ರ ವೇಳೆಗೆ ನಗರದಲ್ಲಿ ಬುದ್ಧಿಮಾಂದ್ಯತೆ ಹಾಗೂ ಮಾನಸಿಕ ಕಾಯಿಲೆ ಪ್ರಮಾಣ ಶೇ 20ರಷ್ಟು ಹೆಚ್ಚಲಿದೆ ಎಂಬುದು ಅಧ್ಯಯನದಿಂದ ಕಂಡುಬಂದಿದೆ –ಅ.ನ.ಯಲ್ಲಪ್ಪರೆಡ್ಡಿ, ಪರಿಸರವಾದಿ

ಸ್ಥಳ ಪರಿಶೀಲಿಸಿ ವರದಿ ನೀಡಲು ಹಾಗೂ ವಿಷಯುಕ್ತ ನೀರನ್ನು ನಾಲೆಗೆ ಬಿಡುತ್ತಿರುವ ಕಾರ್ಖಾನೆಗಳನ್ನು ಮುಚ್ಚಿಸಲು ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿದ್ದೇನೆ. - ಆರ್‌.ಸಂಪತ್‌ ರಾಜ್‌, ಮೇಯರ್‌

2ನೇ ಹಂತದಲ್ಲಿ ಬೆಂಗಳೂರಿನಲ್ಲಿ ಸಮೀಕ್ಷೆ

12 ರಾಜ್ಯಗಳಲ್ಲಿ ನಡೆದ ಮೊದಲ ಹಂತದ ಸಮೀಕ್ಷೆಯಲ್ಲಿ ಕೋಲಾರ ಜಿಲ್ಲೆ ಒಳಗೊಂಡಿತ್ತು. ಎರಡನೇ ಹಂತದ ಸಮೀಕ್ಷೆಗೆ ಬೆಂಗಳೂರು ನಗರ ಆಯ್ಕೆ ಮಾಡಿಕೊಳ್ಳಲಾಗಿದೆ. ಮಾರ್ಚ್‌ ಅಥವಾ ಏಪ್ರಿಲ್‌ನಿಂದ ಸಮೀಕ್ಷೆ ಆರಂಭವಾಗಲಿದೆ ಎಂದು ಸಂಶೋಧನಾ ತಂಡದಲ್ಲಿದ್ದ ಬೆಂಗಳೂರು ನಿಮ್ಹಾನ್ಸ್‌ ವೈದ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮೊದಲ ಹಂತದ ಸಮೀಕ್ಷೆಯಲ್ಲಿ ಶೇ 7.4ರಿಂದ ಶೇ 7.6ರಷ್ಟು ಜನರು ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವುದು ಕಂಡುಬಂದಿದೆ. ಒತ್ತಡದ ಕೆಲಸ, ಜೀವನ ಶೈಲಿ, ಖಿನ್ನತೆ ಇತ್ಯಾದಿ ಕಾರಣಗಳು ಮಾನಸಿಕ ಕಾಯಿಲೆಗಳಿಗೆ ಕಾರಣವಾಗಿವೆ. ಇದರ ಜತೆಗೆ ಆಹಾರ, ಕುಡಿಯುವ ನೀರು, ಉಸಿರಾಡುವ ಗಾಳಿ ಮೂಲಕವೂ ಭಾರಲೋಹಗಳು ಮನುಷ್ಯನ ದೇಹ ಸೇರಿರುತ್ತವೆ. ಇವುಗಳಿಂದಲೂ ಮಾನಸಿಕ ಕಾಯಿಲೆ ಬರುವ  ಸಾಧ್ಯತೆ ಇದೆ ಎಂಬುದು ಅಧ್ಯಯನಗಳಲ್ಲಿ ಸಾಬೀತಾಗಿದೆ ಎಂದು ಹೆಸರು ಹೇಳಲು ಬಯಸದ ಆ ವೈದ್ಯರು ತಿಳಿಸಿದರು.

ಭಾರಲೋಹ ಮನುಷ್ಯನ ದೇಹ ಸೇರಿದರೆ ಮಿದುಳಿಗೆ ಹಾನಿಯಾಗುತ್ತದೆ. ಬುದ್ಧಿಮಾಂದ್ಯತೆ, ಮಾನಸಿಕ ಕಾಯಿಲೆಗಳೂ ಕಾಣಿಸಿಕೊಳ್ಳುತ್ತವೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆಹಾರ, ಕುಡಿಯುವ ನೀರು, ಉಸಿರಾಡುವ ಗಾಳಿಯಲ್ಲಿ ಇಂತಹ ಭಾರಲೋಹಗಳು, ರಾಸಾಯನಿಕ ವಿಷ ಪದಾರ್ಥಗಳು ಬೆರೆಯದಂತೆ ಎಚ್ಚರ ವಹಿಸಬೇಕು ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.