ADVERTISEMENT

ಜನಪ್ರತಿನಿಧಿಗಳ ಗೈರು: ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 21 ಜನವರಿ 2018, 20:03 IST
Last Updated 21 ಜನವರಿ 2018, 20:03 IST
ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಹಾವೇರಿ ಜಿಲ್ಲೆಯ ನರಸಿಪುರದ ನಿಜಶರಣ ಅಂಬಿಗರ ಚೌಡಯ್ಯ ಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮಿಜಿ ಪುಷ್ಪ ನಮನ ಸಲ್ಲಿಸಿದರು. ಬೆಂಗಳೂರು ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷ ಜಿ.ಟಿ. ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ ಹಾಗೂ ನಿರ್ದೇಶಕ ಎನ್.ಆರ್.ವಿಶುಕುಮಾರ್  ಇದ್ದಾರೆ  –ಪ್ರಜಾವಾಣಿ ಚಿತ್ರ
ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಹಾವೇರಿ ಜಿಲ್ಲೆಯ ನರಸಿಪುರದ ನಿಜಶರಣ ಅಂಬಿಗರ ಚೌಡಯ್ಯ ಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮಿಜಿ ಪುಷ್ಪ ನಮನ ಸಲ್ಲಿಸಿದರು. ಬೆಂಗಳೂರು ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷ ಜಿ.ಟಿ. ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ ಹಾಗೂ ನಿರ್ದೇಶಕ ಎನ್.ಆರ್.ವಿಶುಕುಮಾರ್ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳ ಗೈರು ಹಾಜರಿಗೆ ಸಮುದಾಯದ ಮುಖಂಡರಿಂದ ತೀವ್ರ ಅಸಮಾಧಾನ ವ್ಯಕ್ತವಾಯಿತು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆಹ್ವಾನ ಪತ್ರಿಕೆಯಲ್ಲಿ ಹೆಸರಿದ್ದ ಕೇಂದ್ರ ಸಚಿವ ಅನಂತಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೇಯರ್ ಆರ್. ಸಂಪತ್‌ರಾಜ್, ಶಾಸಕರಾದ ಆರ್‌.ವಿ. ದೇವರಾಜ್, ಮಾಂಕಾಳ ವೈದ್ಯ ಪೈಕಿ ಯಾರೊಬ್ಬರು ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ.

‘ಗಂಗಾಮತಸ್ಥರ ಸಮುದಾಯವನ್ನು ಪ್ರತಿನಿಧಿಸುವ ಯಾವೊಬ್ಬ ಜನಪ್ರತಿನಿಧಿಯೂ ಸರ್ಕಾರದಲ್ಲಿ ಇಲ್ಲ. ಹೀಗಾಗಿ, ಯಾರೊಬ್ಬರೂ ಬಂದಿಲ್ಲ. ಇದು ಅತ್ಯಂತ ನೋವಿನ ಸಂಗತಿ. ಯಾರ ಬಳಿ ನಮ್ಮ ನೋವು ಹೇಳಿಕೊಳ್ಳಬೇಕು ಎಂಬುದೇ ಗೊತ್ತಾಗುತ್ತಿಲ್ಲ’ ಎಂದು ಲೇಖಕ ಎಸ್‌.ಕೆ. ಮೇಲಕಾರ್ ತಮ್ಮ ವಿಶೇಷ ಉಪನ್ಯಾಸದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್‌.ಆರ್. ವಿಶುಕುಮಾರ್, ಸಾಮಾಜಿಕ ನ್ಯಾಯ ಮತ್ತು ತಳಸಮುದಾಯಗಳ ಪರವಾಗಿ ಸರ್ಕಾರ ಇದೆ. ಹೀಗಾಗಿಯೇ ‌ಎಲ್ಲಾ ಜಿಲ್ಲೆಯಲ್ಲಿ ಜಯಂತಿ ಆಚರಣೆ ಮಾಡಲಾಗುತ್ತಿದೆ. ಎರಡು ಗಂಟೆ ತಡವಾಗಿ ಕಾರ್ಯಕ್ರಮ ಆರಂಭವಾಗಿದ್ದರಿಂದ ಸಚಿವೆ ಉಮಾಶ್ರೀ ಭಾಗವಹಿಸಿಲ್ಲ. ಬಿಬಿಎಂಪಿ ಮೇಯರ್ ಕೂಡ ಬಂದು ವಾಪಸ್ ಹೋದರು ಎಂದು ಸಮಜಾಯಿಷಿ ನೀಡಿದರು.

ಗಂಗಾಮಸ್ಥರರ ಸಂಘದ ಪದಾಧಿಕಾರಿಗಳು ವಿಶುಕುಮಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಬೇಡಿಕೆಗಳು:

* ಗಂಗಾಮತಸ್ಥ ಸಮುದಾಯವನ್ನು ಪರಿಶಿಷ್ಟ ಜಾತಿ ಅಥವಾ ಪಂಗಡದ ಪಟ್ಟಿಗೆ ಸೇರಿಸಲು ಸುಗ್ರೀವಾಜ್ಞೆ ಹೊರಡಿಸಬೇಕು.

* ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ಕೂಡಲೇ ಅಧ್ಯಕ್ಷರ ನೇಮಕ ಮಾಡಿ ₹ 1,000 ಕೋಟಿ ಅನುದಾನ ನೀಡಬೇಕು.

*  ಹಾವೇರಿ ಜಿಲ್ಲೆಯ ಜಾನಪದ ವಿಶ್ವವಿದ್ಯಾಲಯಕ್ಕೆ ಅಂಬಿಗರ ಚೌಡಯ್ಯ ಹೆಸರಿಡಬೇಕು.

* ಅಂಬಿಗರ ಚೌಡಯ್ಯ ಗುರುಪೀಠವನ್ನು ಕಾಗಿನೆಲೆ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು.

ವಚನಗಳ ಸಂಪುಟ ಪ್ರಕಟಿಸಲು ತೀರ್ಮಾನ
‘ಅಂಬಿಗರ ಚೌಡಯ್ಯನ 350 ವಚನಗಳು ಲಭ್ಯವಿದ್ದು, ಕನಿಷ್ಠ 500 ವಚನಗಳನ್ನು ಸಂಗ್ರಹಿಸಿ ಸಮಗ್ರ ಸಂಪುಟ ಪ್ರಕಟಿಸಲು ಉದ್ದೇಶಿಸಲಾಗಿದೆ’ ಎಂದು ವಿಶುಕುಮಾರ್ ಹೇಳಿದರು.

‘ವಚನಗಳನ್ನು ಒಂದೆಡೆ ದಾಖಲಿಸಿ ಮುಂದಿನ ಪೀಳಿಗೆಗೆ ಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಸದ್ಯದಲ್ಲೆ ವಿದ್ವಾಂಸರ ಸಭೆ ನಡೆಸಿ ವಚನಗಳನ್ನು ಸಂಗ್ರಹಿಸಲಾಗುವುದು. ಮುಂದಿನ ಜಯಂತಿ ವೇಳೆಗೆ ಸಂಪುಟ ಬಿಡುಗಡೆ ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.