ADVERTISEMENT

ಶಾಸಕ ಹ್ಯಾರಿಸ್ ಪುತ್ರ ಶರಣಾಗತಿ

ಉದ್ಯಮಿ ಪುತ್ರನ ಮೇಲೆ ಹಲ್ಲೆ ಪ್ರಕರಣ * ಆರೋಪಿಗಳು ಫೆ. 21ರವರೆಗೆ ಪೊಲೀಸರ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2018, 20:19 IST
Last Updated 19 ಫೆಬ್ರುವರಿ 2018, 20:19 IST
ನ್ಯಾಯಾಲಯಕ್ಕೆ ಕರೆತಂದ ವೇಳೆ ಕಂಡುಬಂದ ಮೊಹಮದ್ ನಲಪಾಡ್‌ – ಪ್ರಜಾವಾಣಿ ಚಿತ್ರ
ನ್ಯಾಯಾಲಯಕ್ಕೆ ಕರೆತಂದ ವೇಳೆ ಕಂಡುಬಂದ ಮೊಹಮದ್ ನಲಪಾಡ್‌ – ಪ್ರಜಾವಾಣಿ ಚಿತ್ರ   

ಬೆಂಗಳೂರು: ಉದ್ಯಮಿ ಲೋಕನಾಥ್ ಪುತ್ರ ವಿದ್ವತ್‌ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಕಾಂಗ್ರೆಸ್ ಶಾಸಕ ಎನ್‌.ಎ.ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್‌ (24) ಶರಣಾಗಿದ್ದು, ವಿಚಾರಣೆಗಾಗಿ ಇದೇ 21ರವರೆಗೆ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ.

ಯುಬಿ ಸಿಟಿಯ ‘ಫರ್ಜಿ ಕೆಫೆ’ಯಲ್ಲಿ ಫೆ. 17ರಂದು ರಾತ್ರಿ ನಡೆದಿದ್ದ ಘಟನೆ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಮೊಹಮದ್ ನಾಪತ್ತೆಯಾಗಿದ್ದರು. ಅವರ ಪತ್ತೆಗಾಗಿ ಶಾಸಕ ಹ್ಯಾರಿಸ್‌ ಮನೆಯಲ್ಲಿ ಸೋಮವಾರ ಬೆಳಿಗ್ಗೆ ಪೊಲೀಸರು ಶೋಧ ನಡೆಸಿದರು. ಈ ವೇಳೆ ಹ್ಯಾರಿಸ್, ‘ಮಗ ಮನೆಯಲ್ಲಿಲ್ಲ. ಕೆಲವೇ ಗಂಟೆಗಳಲ್ಲೇ ಠಾಣೆಗೆ ಬಂದು ಶರಣಾಗಲಿದ್ದಾನೆ’ ಎಂದು ಹೇಳಿ ಪೊಲೀಸರನ್ನು ವಾಪಸ್‌ ಕಳುಹಿಸಿದರು.

‘ಮೊಹಮದ್‌ ನಸುಕಿನಲ್ಲಿ ಮನೆಯ ಬಳಿ ಬಂದಿದ್ದರು. ಅಲ್ಲಿ ಮಾಧ್ಯಮದವರು ಹೆಚ್ಚು ಸೇರಿದ್ದರಿಂದ ತಾಯಿಗೆ ಕರೆ ಮಾಡಿ ತಾವು ಬಂದಿರುವ ವಿಷಯ ತಿಳಿಸಿದ್ದರು. ಅದಾದ ಬಳಿಕ ಸ್ವಲ್ಪ ಹೊತ್ತು ಅವರು ಮನೆಯಲ್ಲೇ ಇದ್ದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

ADVERTISEMENT

***

ಮೂಗಿನ ಶಸ್ತ್ರಚಿಕಿತ್ಸೆ

‘ವಿದ್ವತ್‌ ಮೂಗಿನ ಮೂಳೆ ಮುರಿದಿದ್ದು, ಶಸ್ತ್ರಚಿಕಿತ್ಸೆ ನಡೆಸಬೇಕು’ ಎಂದು ಮಲ್ಯ ಆಸ್ಪತ್ರೆಯ ವೈದ್ಯರು ತಿಳಿಸಿದರು.

‘ಮುಖದ ಬಾವು ಸ್ವಲ್ಪ ಕಡಿಮೆ ಆಗಿದೆ. ಮುಖದ ಮೇಲೂ ಗಾಯವಾಗಿದೆ. ಕೆಲ ಪರೀಕ್ಷೆ ವರದಿಗಳು ಬರಬೇಕಿದ್ದು, ಅದನ್ನು ಪರಿಶೀಲಿಸಿ ಶಸ್ತ್ರಚಿಕಿತ್ಸೆ ನಡೆಸಲಿದ್ದೇವೆ’ ಎಂದರು.

ಬಿಜೆಪಿ– ಕಾಂಗ್ರೆಸ್‌ ಜಟಾಪಟಿ

‘ಆರೋಪಿಯನ್ನು ಬಂಧಿಸಲು ಪೊಲೀಸರು ವಿಳಂಬ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರು ಕಬ್ಬನ್‌ಪಾರ್ಕ್‌ ಠಾಣೆಯ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಎರಡೂ ಪಕ್ಷದ ಕಾರ್ಯಕರ್ತರು, ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಅವರನ್ನು ನಿಯಂತ್ರಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಸ್ಥಳಕ್ಕೆ ಬಂದಿದ್ದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಬಿ.ಕೆ.ಸಿಂಗ್, ‘ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಪ್ರತಿಭಟನೆ ಹಿಂಪಡೆಯಿರಿ’ ಎಂದು ಮನವಿ ಮಾಡಿದರು. ಅದಕ್ಕೆ ಪ್ರತಿಭಟನಾಕಾರರು ಒಪ್ಪಲಿಲ್ಲ.

ಮೊಹಮದ್‌ ಠಾಣೆಗೆ ಶರಣಾಗಲು ಬಂದಾಗ, ಸ್ಥಳದಲ್ಲಿದ್ದ ಕಾಂಗ್ರೆಸ್‌ನ 40ಕ್ಕೂ ಹೆಚ್ಚು ಕಾರ್ಯಕರ್ತರು ಅವರ ಪರ ಘೋಷಣೆ ಕೂಗಿದರು. ಅದು ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು. ಅದೇ ವಿಷಯಕ್ಕೆ ಸಂಬಂಧಿಸಿದಂತೆ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು, ಲಘು ಲಾಠಿ ಪ್ರಹಾರ ನಡೆಸಿದರು. 10ಕ್ಕೂ ಹೆಚ್ಚು ಮಂದಿಯನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದು ಮಧ್ಯಾಹ್ನ ಬಿಡುಗಡೆ ಮಾಡಿದರು.

ಠಾಣೆ ಎದುರಿನ ಕಸ್ತೂರ್‌ ಬಾ ರಸ್ತೆಯಲ್ಲೇ ಕುಳಿತು ಪ್ರತಿಭಟನಾಕಾರರು ಪ್ರತಿಭಟನೆ ಮಾಡಿದ್ದರಿಂದ ಅನಿಲ್‍ ಕುಂಬ್ಳೆ ವೃತ್ತ, ಚಿನ್ನಸ್ವಾಮಿ ಕ್ರೀಡಾಂಗಣ, ಎಂ.ಜಿ.ರಸ್ತೆ ಸೇರಿ ಸುತ್ತಮುತ್ತ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಯಿತು.

ಆರೋಪಿಗೆ ರಾಜಾತಿಥ್ಯ; ಆರೋಪ

‘ಮೊಹಮದ್‌ ಅವರಿಗೆ ಪೊಲೀಸರು ಠಾಣೆಯಲ್ಲೇ ರಾಜಾತಿಥ್ಯ ನೀಡುತ್ತಿದ್ದಾರೆ’ ಎಂದು ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರು ದೂರಿದರು.

‘ಆರೋಪಿ ಇರುವ ಜಾಗ ಗೊತ್ತಿದ್ದರೂ ಪೊಲೀಸರು ಬಂಧಿಸಲಿಲ್ಲ. ಘಟನೆ ದಿನದಂದು ಮೊಹಮದ್, ಗಾಂಜಾ ಹಾಗೂ ಮದ್ಯದ ನಶೆಯಲ್ಲಿದ್ದರು. ಅದೆಲ್ಲ ಇಳಿದ ನಂತರವೇ ಶರಣಾಗತಿ ಹೆಸರಿನಲ್ಲಿ ಠಾಣೆಗೆ ಕರೆಸಲಾಗಿದೆ. ಪೊಲೀಸರು ಶಾಸಕರ ಪರ ಕೆಲಸ ಮಾಡುತ್ತಿದ್ದಾರೆ ಎನ್ನುವುದಕ್ಕೆ ಇದುವೇ ಪುರಾವೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿರುವ ಗೃಹ ಸಚಿವ ರಾಲಿಂಗಾರೆಡ್ಡಿ, ‘ಪೊಲೀಸರು ಆರೋಪಿಗೆ ಯಾವುದೇ ರಾಜಾತಿಥ್ಯ ನೀಡಿಲ್ಲ. ಬಿಜೆಪಿಯವರು ಸುಖಾಸುಮ್ಮನೇ ಆರೋಪ ಮಾಡುತ್ತಿದ್ದಾರೆ’ ಎಂದರು.

ಸಿಸಿಬಿ ಪೊಲೀಸರ ಭೇಟಿ

ಕಬ್ಬನ್‌ ಪಾರ್ಕ್‌ ಠಾಣೆಗೆ ಸಿಸಿಬಿ ಪೊಲೀಸರು ಸೋಮವಾರ ರಾತ್ರಿ ಭೇಟಿ ನೀಡಿದರು.

ನಗರ ಪೊಲೀಸ್‌ ಕಮಿಷನರ್‌ ಟಿ.ಸುನೀಲ್‌ ಕುಮಾರ್‌ ನಿರ್ದೇಶನದಂತೆ ಪ್ರಕರಣದ ತನಿಖೆ ಆರಂಭಿಸಿರುವ ಸಿಸಿಬಿ ಪೊಲೀಸರು, ಎಫ್‌ಐಆರ್‌ ಮಾಹಿತಿ ಪಡೆದುಕೊಂಡರು. ಘಟನಾ ಸ್ಥಳಕ್ಕೂ ಹೋಗಿ ಮಾಹಿತಿ ಕಲೆಹಾಕಿದರು.

‘ಆರೋಪಿಯನ್ನು ವಶಕ್ಕೆ ಪಡೆಯಬೇಕಾದರೆ ನ್ಯಾಯಾಲಯದ ಅನುಮತಿ ಬೇಕು. ಸದ್ಯದಲ್ಲೇ ಅರ್ಜಿ ಸಲ್ಲಿಸಿ ಅನುಮತಿ ಪಡೆಯುತ್ತೇವೆ’ ಎಂದು ಸಿಸಿಬಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.