ADVERTISEMENT

ಶೀಘ್ರವೇ ರಾರಾಜಿಸಲಿವೆ ಎಲ್‌ಇಡಿ ಬಲ್ಬ್‌ಗಳು

ಬಿಬಿಎಂಪಿ ವ್ಯಾಪ್ತಿಯ ಬೀದಿ ದೀಪಗಳ ಬದಲಿಗೆ ಜಾಗತಿಕ ಟೆಂಡರ್‌

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 19:38 IST
Last Updated 20 ಫೆಬ್ರುವರಿ 2018, 19:38 IST

ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಈಗಿರುವ ಸಾಂಪ್ರದಾಯಿಕ ದೀಪಗಳ ಸ್ಥಾನದಲ್ಲಿ ಶೀಘ್ರವೇ ಎಲ್‌ಇಡಿ ಬಲ್ಬ್‌ಗಳು ಬೆಳಗಲಿವೆ. ಇದಕ್ಕಾಗಿ ಜಾಗತಿಕ ಟೆಂಡರ್‌ ಕರೆಯಲಾಗಿದ್ದು ಪ್ರಾಯಶಃ ಇದು ದೇಶದಲ್ಲಿಯೇ ಅತಿದೊಡ್ಡ ಯೋಜನೆ ಆಗಿದೆ’ ಎಂದು ಬಿಬಿಎಂಪಿ ಹೈಕೋರ್ಟ್‌ಗೆ ತಿಳಿಸಿದೆ.

ಬಿಬಿಎಂಪಿ ವ್ಯಾಪ್ತಿಯ 198 ವಾರ್ಡುಗಳಲ್ಲಿರುವ 4.85 ಲಕ್ಷ ಸಾಂಪ್ರದಾಯಿಕ ಬೀದಿ ದೀಪಗಳನ್ನು ಎಲ್‌ಇಡಿ ಬಲ್ಬ್‌ಗಳಿಗೆ ಬದಲಾಯಿಸುವ ಟೆಂಡರ್‌ ಪ್ರಕ್ರಿಯೆ ಪ್ರಶ್ನಿಸಿ ‘ಬಿಬಿಎಂಪಿ ವಿದ್ಯುತ್‌ ಗುತ್ತಿಗೆದಾರರ ಸಂಘ‘ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಸ್‌.ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ಹಾಜರಿದ್ದ ಕೆ.ಎನ್‌.ಪುಟ್ಟೇಗೌಡ ಲಿಖಿತ ಆಕ್ಷೇಪಣೆ ಸಲ್ಲಿಸಿದರು.

ADVERTISEMENT

ಆಕ್ಷೇಪಣೆಯಲ್ಲಿರುವ ಪ್ರಮುಖ ಅಂಶಗಳೆಂದರೆ:

* ನಾಗರಿಕರಿಗೆ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಈ ಜಾಗತಿಕ ಟೆಂಡರ್ ಕರೆಯಲಾಗಿದೆ.

* ತಜ್ಞರ ಸಮಿತಿ ಶಿಫಾರಸಿಗೆ ಅನುಗುಣವಾಗಿಯೇ ಈಗಿನ ಸಾಂಪ್ರದಾಯಿಕ ವಿದ್ಯುತ್‌ ದೀಪಗಳನ್ನು ಎಲ್ಇಡಿ ಬಲ್ಬ್‌ಗಳಿಗೆ ಬದಲಿಸಲು ನಿರ್ಧರಿಸಲಾಗಿದೆ. ಇದರಿಂದ ವಿದ್ಯುತ್ ಬಳಕೆಯ ಪ್ರಮಾಣ ಹಾಗೂ ನಿರ್ವಹಣೆಯ ವೆಚ್ಚ ಶೇ 60ರಿಂದ 70ರಷ್ಟು ಕಡಿಮೆಯಾಗಲಿದೆ. ಇದು ಸಾರ್ವಜನಿಕ ಖಾಸಗಿ ಸಹಭಾಗಿತ್ವ ಹೊಂದಿದ ವೈಜ್ಞಾನಿಕ ತಳಹದಿಯ ಮಾದರಿ ಯೋಜನೆಯಾಗಿದೆ.

* ಸದ್ಯ ಪ್ರತಿ ತಿಂಗಳೂ ಬಿಬಿಎಂಪಿ ಸಾರ್ವಜನಿಕರಿಗೆ ವಿತರಿಸುತ್ತಿರುವ ವಿದ್ಯುತ್‌ ಬಳಕೆಯ ಶುಲ್ಕ ₹ 12ರಿಂದ ₹ 14 ಕೋಟಿ ಇದೆ.

* ಪ್ರತಿ ವರ್ಷ ಇದರ ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚಕ್ಕೆ ₹ 60 ಕೋಟಿ ವೆಚ್ಚ ಮಾಡಲಾಗುತ್ತಿದೆ.

* ಹೊಸ ಯೋಜನೆ ಅಡಿ 65, 90 ಹಾಗೂ 150 ವ್ಯಾಟ್‌ಗಳ ಬಲ್ಬ್‌ಗಳನ್ನು ಬಳಸಲಾಗುವುದು. ಈ ಯೋಜನೆ ಜಾರಿಗೆ ಬಂದರೆ ಬಿಬಿಎಂಪಿಗೆ ಪ್ರತಿ ವರ್ಷ ₹ 100 ಕೋಟಿ ಉಳಿತಾಯವಾಗುತ್ತದೆ. ಇದರ ಪ್ರತಿ ತಿಂಗಳೂ ₹ 8.4 ಕೋಟಿ ಉಳಿತಾಯವಾಗಿರುತ್ತದೆ.

* ಅರ್ಜಿದಾರರು ಟೆಂಡರ್‌ನಿಂದ ತೊಂದರೆಯಾಗುತ್ತಿದೆ ಎಂದು ಹೇಳಲು ಯಾವುದೇ ರೀತಿಯಲ್ಲೂ ಬಾಧಿತರಲ್ಲ. ಅವರು ಪಾಲಿಕೆಯ ಕಾಮಗಾರಿ ನಡೆಸುತ್ತಿರುವವರಲ್ಲ. ಅಷ್ಟೇಕೆ ಬಿಬಿಎಂಪಿ ವಿದ್ಯುತ್‌ ಗುತ್ತಿಗೆದಾರರ ಸಂಘದ ಸದಸ್ಯರೂ ಅಲ್ಲ.

* ಯೋಜನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಬಳಸುವುದಕ್ಕೆ ಹಾಗೂ ಮಾಲಿನ್ಯ ತಡೆಯುವುದಕ್ಕೂ ಅವಕಾಶ ಕಲ್ಪಿಸಲಾಗಿದೆ.

* ಉದ್ದೇಶಿತ ಯೋಜನೆಯ ಒಪ್ಪಂದ 10 ವರ್ಷಗಳ ಕಾಲ ಜಾರಿಯಲ್ಲಿರುತ್ತದೆ.

‘ಕಾನೂನು ಉಲ್ಲಂಘನೆ ಪ್ರಶ್ನೆಯೇ ಇಲ್ಲ’

‘ಅರ್ಜಿದಾರರು ಆರೋಪಿಸಿರುವಂತೆ ಯೋಜನೆಯಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಪಾಲುದಾರಿಕೆ ವಹಿಸುವುದರಿಂದ ಸಣ್ಣ ಸಣ್ಣ ಗುತ್ತಿಗೆದಾರರಿಗೆ ಅನಾನುಕೂಲ ಆಗುತ್ತದೆ ಎಂಬುದು ತಪ್ಪು' ಎಂದು ಬಿಬಿಎಂಪಿ ಆಕ್ಷೇಪಣೆಯಲ್ಲಿ ವಿವರಿಸಿದೆ.

‘ಈಗ ಕರೆಯಲಾಗಿರುವ ಟೆಂಡರ್‌ ಪ್ರಕ್ರಿಯೆಯನ್ನು ಪಾರದರ್ಶಕತೆ ಹಾಗೂ ಸಾರ್ವಜನಿಕ ಸಂಗ್ರಹಣೆ ಕಾಯ್ದೆ ಅಡಿಯಲ್ಲಿಯೇ ನಡೆಸಲಾಗುತ್ತಿದೆ. ಇದರಲ್ಲಿ ಸಹಜ ನ್ಯಾಯದ ಉಲ್ಲಂಘನೆಯ ಪ್ರಶ್ನೆಯೇ ಇಲ್ಲ. ಬೇಕಿದ್ದರೆ ಗುತ್ತಿಗೆದಾರರು ಟೆಂಡರ್‌ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಮುಕ್ತವಾದ ಅವಕಾಶಗಳಿವೆ’ ಎಂದೂ ಹೇಳಿದೆ.

ವಿಚಾರಣೆಯನ್ನು ಇದೇ 27ಕ್ಕೆ ಮುಂದೂಡಲಾಗಿದೆ.

***

ಹೊಸ ಯೋಜನೆಯಿಂದ ಬಿಬಿಎಂಪಿಯ ಬೊಕ್ಕಸಕ್ಕೆ ಭಾರಿ ಉಳಿತಾಯವಾಗಲಿದೆ. ಅರ್ಜಿದಾರರು ನಗರದ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ.
–ಕೆ.ಎನ್‌.ಪುಟ್ಟೇಗೌಡ, ಬಿಬಿಎಂಪಿ ಪರ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.