ADVERTISEMENT

ಕುಟುಂಬಸ್ಥರು, ಆಪ್ತರ ವಿಚಾರಣೆಗೆ ಒಳಪಡಿಸಿದ ಪೊಲೀಸರು

ಬಿಬಿಎಂಪಿ ಕಚೇರಿಯಲ್ಲಿ ದಾಂದಲೆ ನಡೆಸಿದ ನಾರಾಯಣಸ್ವಾಮಿಗಾಗಿ ಶೋಧ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2018, 19:59 IST
Last Updated 22 ಫೆಬ್ರುವರಿ 2018, 19:59 IST

ಬೆಂಗಳೂರು: ಹೊರಮಾವು ಬಿಬಿಎಂಪಿ ಕಚೇರಿಗೆ ನುಗ್ಗಿ ದಾಂದಲೆ ನಡೆಸಿದ ಪ್ರಕರಣ ಸಂಬಂಧ ಕಾಂಗ್ರೆಸ್‌ ಮುಖಂಡ ನಾರಾಯಣಸ್ವಾಮಿ ಅವರಿಗಾಗಿ ಶೋಧ ಕಾರ್ಯ ಮುಂದುವರೆದಿದ್ದು, ರಾಮಮೂರ್ತಿನಗರ ಪೊಲೀಸರು ಗುರುವಾರ ಆರೋಪಿಯ ಕುಟುಂಬಸ್ಥರನ್ನು ವಿಚಾರಣೆ ನಡೆಸಿದ್ದಾರೆ.

‘ಎರಡು ದಿನಗಳ ಹಿಂದೆ ಹೊರಗೆ ಹೋಗಿದ್ದ ಪತಿ ಇದುವರೆಗೆ ವಾಪಸ್ ಬಂದಿಲ್ಲ. ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಎರಡು ಮೊಬೈಲ್‌ಗಳನ್ನೂ ಮನೆಯಲ್ಲೇ ಬಿಟ್ಟು ಕಾರಿನಲ್ಲಿ ಹೋಗಿದ್ದಾರೆ’ ಎಂದು ನಾರಾಯಣಸ್ವಾಮಿ ಪತ್ನಿ ಪಾರಿಜಾತ ಹೇಳಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರೋಪಿಯ ಪತ್ತೆಗೆ ಪ್ರತ್ಯೇಕವಾಗಿ ನಾಲ್ಕು ತಂಡಗಳನ್ನು ರಚಿಸಿದ್ದೇವೆ. ಮೈಸೂರು, ಹಾಸನ, ಸಕಲೇಶಪುರ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಹೊರವಲಯದಲ್ಲಿ ಹುಡುಕಾಟ ನಡೆಸಿದ್ದೇವೆ. ದೂರದ ಸಂಬಂಧಿಗಳ ಮನೆಗಳಲ್ಲೂ ತನಿಖೆ ನಡೆಸಿದ್ದು, ಅಲ್ಲಿಗೂ ಹೋಗಿಲ್ಲ ಎಂಬುದು ಖಾತರಿಯಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ನಾರಾಯಣಸ್ವಾಮಿ ಅವರ ಮಗಳು, ಅಳಿಯ, ತಮ್ಮ ಹಾಗೂ ಅವರ ಆಪ್ತರನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ಅವರೆಲ್ಲರ ಮೊಬೈಲ್‌ ಸಂಖ್ಯೆಗಳ ಒಳ ಹಾಗೂ ಹೊರ ಕರೆಗಳ ಬಗ್ಗೆಯೂ ಪರಿಶೀಲಿಸಿದ್ದೇವೆ. ಆದರೂ, ಯಾವುದೇ ಸುಳಿವು ಸಿಕ್ಕಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.