ADVERTISEMENT

58 ಸಾವಿರ ಹೊಸ ಮತದಾರರು

ಚುನಾವಣೆ ಅಧಿಸೂಚನೆ ಪ್ರಕಟ: ಮೊದಲ ದಿನ ಕೇವಲ ಎರಡು ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2015, 20:25 IST
Last Updated 3 ಆಗಸ್ಟ್ 2015, 20:25 IST

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಸೋಮವಾರ ಅಧಿಸೂಚನೆ ಹೊರಡಿಸಲಾಗಿದ್ದು, ಮೊದಲ ದಿನ ಕೇವಲ ಎರಡು ನಾಮಪತ್ರ ಸಲ್ಲಿಕೆಯಾಗಿವೆ. ನಾಮಪತ್ರಗಳ ಸ್ವೀಕಾರಕ್ಕಾಗಿ 53 ಕೇಂದ್ರ ತೆರೆಯಲಾಗಿದ್ದು, ಜಯನಗರ ಪೂರ್ವ ಹಾಗೂ ಉತ್ತರಹಳ್ಳಿ ವಾರ್ಡ್‌ಗಳಲ್ಲಿ ತಲಾ ಒಬ್ಬ ಪಕ್ಷೇತರ ಅಭ್ಯರ್ಥಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಉಳಿದ ಕೇಂದ್ರಗಳು ಖಾಲಿ, ಖಾಲಿಯಾಗಿದ್ದವು.

ಅಧಿಸೂಚನೆ ಹೊರಡಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಿಲ್ಲಾ ಚುನಾವಣಾಧಿಕಾರಿ ಸಹ ಆಗಿರುವ ಬಿಬಿಎಂಪಿ ಆಯುಕ್ತ ಜಿ.ಕುಮಾರ್‌ ನಾಯಕ್‌, ‘ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದ್ದು, ಹೊಸದಾಗಿ 58 ಸಾವಿರ ಹೆಸರುಗಳು ಸೇರ್ಪಡೆ ಆಗಿವೆ’ ಎಂದು ತಿಳಿಸಿದರು.

‘ಪ್ರತಿ 1,500 ಮತದಾರರಿಗೆ ಒಂದರಂತೆ ಮತಗಟ್ಟೆ ತೆರೆಯಲಾಗಿದೆ’ ಎಂದು ಮಾಹಿತಿ ನೀಡಿದರು.

‘ಅನುಮತಿ ಪಡೆಯದೆ ಫ್ಲೆಕ್ಸ್‌, ಬಂಟಿಂಗ್‌ ಇಲ್ಲವೆ ಹೋರ್ಡಿಂಗ್‌ ಹಾಕಿದರೆ ಅಂಥವರ ವಿರುದ್ಧ ಮಾತ್ರವಲ್ಲದೆ ಅವುಗಳನ್ನು ಮುದ್ರಿಸಿಕೊಟ್ಟ ಮುದ್ರಣಾಲಯಗಳ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.

‘ನಾಮಪತ್ರದಲ್ಲಿ ಮೇಲ್ನೋಟಕ್ಕೆ ಏನಾದರೂ ದೋಷಗಳು (ಸಹಿ ಹಾಕದಿರುವುದು, ಶುಲ್ಕ ಭರಿಸದೆ ಇರುವುದು ಇತ್ಯಾದಿ) ಕಂಡುಬಂದರೆ ಅದನ್ನು ಸ್ವೀಕರಿಸುವಾಗಲೇ ಸರಿಪಡಿಸಲು ಅವಕಾಶ ನೀಡಲಾಗುತ್ತದೆ. ತಿರಸ್ಕೃತ ನಾಮಪತ್ರಗಳ ಸಂಖ್ಯೆಯನ್ನು ಕಡಿತಗೊಳಿಸಲು ಇದರಿಂದ ಅನುಕೂಲ ಆಗುತ್ತದೆ’ ಎಂದು ವಿವರಿಸಿದರು.

‘ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡಲು ತಂಡಗಳನ್ನು ರಚಿಸಲಾಗಿದೆ’ ಎಂದು ತಿಳಿಸಿದರು. ‘ಚುನಾವಣಾ ಕಾರ್ಯಕ್ಕೆ ಬೇಕಾದ 800 ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ವಾರ್ತಾ ಮತ್ತು ಜನಸಂಪರ್ಕ ಇಲಾಖೆ ಮಾಧ್ಯಮ ಕೇಂದ್ರ ತೆರೆಯಲಿದೆ’ ಎಂದು ಮಾಹಿತಿ ನೀಡಿದರು.

ಸಭೆ: ಬಿಬಿಎಂಪಿ ಚುನಾವಣೆಗೆ ಮಾಡಿಕೊಳ್ಳಲಾದ ಸಿದ್ಧತೆಗಳ ಕುರಿತು ಅವಲೋಕನ ಮಾಡಲು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಪಿ.ಎನ್‌. ಶ್ರೀನಿವಾಸಾಚಾರಿ ಸೋಮವಾರ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು.

ಬಿಬಿಎಂಪಿ ಆಯುಕ್ತ ಕುಮಾರ್‌ ನಾಯಕ್‌, ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್‌, ಪೊಲೀಸ್‌ ಕಮಿಷನರ್‌ ಎನ್‌.ಎಸ್‌. ಮೇಘರಿಕ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ನ್ಯಾಯಸಮ್ಮತ ಹಾಗೂ ಶಾಂತ ರೀತಿಯಲ್ಲಿ ಚುನಾವಣೆ ನಡೆಸುವ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಅತಿ ಸೂಕ್ಷ್ಮ ಹಾಗೂ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸುವ ಸಂಬಂಧ ಮೇಘರಿಕ್‌ ಅವರು ಕೆಲವು ವಿವರಗಳನ್ನು ಸಭೆಯಲ್ಲಿ ಹಂಚಿಕೊಂಡರು. ಗ್ರಾಮ ಪಂಚಾಯ್ತಿ ಚುನಾವಣೆಗೆ ಭದ್ರತೆ ಒದಗಿಸಿದ ರೀತಿಯಲ್ಲೇ ಪಾಲಿಕೆ ಚುನಾವಣೆಗೂ ಕಾರ್ಯತಂತ್ರ ಹೆಣೆಯಲಾಗುವುದು ಎಂಬ ಭರವಸೆ ನೀಡಿದರು ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.