ADVERTISEMENT

593 ವಿದ್ಯಾರ್ಥಿಗಳಿಗೆ ಪದವಿ

ಇಂಡಿಯನ್‌ ಇನ್‌ಸ್ಟಿಟ್ಯೂ­ಟ್ ಆಫ್‌ ಮ್ಯಾನೇಜ್‌ಮೆಂಟ್‌ನ 43ನೇ ಘಟಿಕೋತ್ಸವ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 19:30 IST
Last Updated 17 ಮಾರ್ಚ್ 2018, 19:30 IST
593 ವಿದ್ಯಾರ್ಥಿಗಳಿಗೆ ಪದವಿ
593 ವಿದ್ಯಾರ್ಥಿಗಳಿಗೆ ಪದವಿ   

ಬೆಂಗಳೂರು: ಇಂಡಿಯನ್‌ ಇನ್‌ಸ್ಟಿಟ್ಯೂ­ಟ್ ಆಫ್‌ ಮ್ಯಾನೇಜ್‌ಮೆಂಟ್‌ನ (ಐಐಎಂಬಿ) 43ನೇ ಘಟಿಕೋತ್ಸವದಲ್ಲಿ ಶನಿವಾರ 593 ವಿದ್ಯಾರ್ಥಿಗಳು ಪದವಿ ಪಡೆದರು. ಎಂಟು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಿರಮಲ್‌ ಸಮೂಹದ ಅಧ್ಯಕ್ಷ ಅಜಯ್‌ ಪಿರಮಲ್‌ ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು.

ನಿರ್ವಹಣೆ ವಿಭಾಗದಲ್ಲಿ ಚಿನ್ನದ ಪದಕ ಪಡೆದ 25 ವರ್ಷದ ಪ್ಯಾಟ್ರಿಕ್‌ ಆನಂದ್‌, ‘ಐಐಎಂಬಿಯಲ್ಲಿ ವ್ಯಾಸಂಗ ಕಷ್ಟಕರ ಪಯಣವಾಗಿತ್ತು. ಶ್ರೇಷ್ಠ ಶಿಕ್ಷಣ ಇಲ್ಲಿ ದೊರೆಯುವುದೇ ಅದಕ್ಕೆ ಕಾರಣ. ಎಲ್ಲವನ್ನೂ ಉದ್ಯಮದ ದೃಷ್ಟಿಕೋನದಿಂದ ನೋಡಲು ಇಲ್ಲಿ ಕಲಿತಿದ್ದೇನೆ. ಕೋರ್ಸ್‌ ಆಯ್ಕೆಯಲ್ಲಿ ಸ್ವತಂತ್ರ್ಯ ಇದ್ದಿದ್ದರಿಂದ ಹಣಕಾಸು, ಮಾರ್ಕೆಟಿಂಗ್‌, ವಿಶ್ಲೇಷಣೆ... ಹೀಗೆ ವಿವಿಧ ವಿಷಯಗಳನ್ನು ಕಲಿಯಲು ಸಾಧ್ಯವಾಯಿತು’ ಎಂದು ಓದಿನ ಅನುಭವವನ್ನು ಹಂಚಿಕೊಂಡರು.

‘ಮಾಧ್ಯಮ ಮತ್ತು ಜಾಹೀರಾತು ಕಂಪನಿಯಲ್ಲಿ ಉದ್ಯಮ ವಿಶ್ಲೇಷಕನಾಗಿ ಕೆಲಸ ಮಾಡುವ ಆಸಕ್ತಿ ಇದೆ. ಭವಿಷ್ಯದಲ್ಲಿ ನನ್ನದೇ ಸ್ವಂತ ಉದ್ಯಮ ಪ್ರಾರಂಭಿಸುವೆ’ ಎಂದರು.

ADVERTISEMENT

ಸಾರ್ವಜನಿಕ ನೀತಿ ಮತ್ತು ನಿರ್ವಹಣೆ ವಿಭಾಗದಲ್ಲಿ ಚಿನ್ನದ ಪದಕ ಪಡೆದ ರಿಚಾ ವಾಲೆಚ್ಚ, ‘ಒಂದು ವರ್ಷದ ಇಲ್ಲಿನ ವಿದ್ಯಾಭ್ಯಾಸ ನನ್ನ ಬೌದ್ಧಿಕಮಟ್ಟವನ್ನು ಸಾಕಷ್ಟು ಹೆಚ್ಚಿಸಿದೆ. ಶಿಕ್ಷಣ, ಆರೋಗ್ಯ, ಉದ್ಯಮ, ಐಟಿ... ಹೀಗೆ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರು ನನ್ನ ಸಹಪಾಠಿಗಳಾಗಿದ್ದರು. ಅವರೊಂದಿಗಿನ ಒಡನಾಟದಿಂದಲೇ ಜಗತ್ತನ್ನು ನೋಡುವ ವಿವಿಧ ದೃಷ್ಟಿಕೋನಗಳ ಪರಿಚಯವಾಗಿದೆ. ಇದೇ ಇಲ್ಲಿನ ಕಲಿಕೆಯ ವಿಶೇಷವೂ ಹೌದು’ ಎಂದರು.

‘ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಹಣಕಾಸು ಸುಸ್ಥಿರತೆ ಸಾಧಿಸುವ ಬಗ್ಗೆ ಕೆಲಸ ಮಾಡುವ ಆಲೋಚನೆ ಇದೆ. ವಿವಿಧ ಹಗರಣಗಳ ನಡುವೆಯೂ ನಾಲ್ಕೈದು ವರ್ಷಗಳಿಂದ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸಕಾರಾತ್ಮಕ ಬದಲಾವಣೆ ಕಾಣುತ್ತಿದ್ದೇವೆ. ಡಿಜಿಟಲಿಕರಣದ ಪರಿಣಾಮ ಹಳ್ಳಿ ಜನರಿಗೆ ಪೇಟಿಎಂ ಎಂದರೇನೆಂದು ತಿಳಿಯುವಂತಾಗಿದೆ. ನೋಟು ರದ್ದತಿಯನ್ನು ಎಲ್ಲರೂ ಟೀಕಿಸುತ್ತಾರೆ. ಆದರೆ, ಅದರಿಂದ ಆನ್‌ಲೈನ್‌ ಬ್ಯಾಂಕಿಂಗ್‌ ಹೆಚ್ಚು ಜನಪ್ರಿಯಗೊಂಡಿತು. ಇದೊಂದು ಉತ್ತಮ ಬೆಳವಣಿಗೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಚಿನ್ನದ ಪದಕ ಪಡೆದವರಲ್ಲೇ ಅತ್ಯಂತ ಕಿರಿಯರಾದ ನಿರ್ವಹಣೆ ವಿಭಾಗದ ವಿ.ವಾಗೀಶ್‌, ‘ನಿರ್ವಹಣೆ ವಿಭಾಗದಲ್ಲಿ ತಂತ್ರಜ್ಞಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅಂತರ್ಗತಗೊಳಿಸುವ ಬಗ್ಗೆ ಕೆಲಸ ಮಾಡುವ ಕನಸಿದೆ. ಐಐಎಂಬಿ ಶಿಕ್ಷಣ ನಮ್ಮ ಆಲೋಚನಾ ಪ್ರಕ್ರಿಯೆಯನ್ನು ರೂಪಿಸುತ್ತದೆ. ಯಾವುದೇ ಸಂದರ್ಭವನ್ನು ನಿಭಾಯಿಸುವ ಕ್ಷಮತೆಯನ್ನು ಕಲಿಸುತ್ತದೆ’ ಎಂದು ಓದಿನ ಅನುಭವ ಹಂಚಿಕೊಂಡರು.

ಉದ್ಯಮ ನಿರ್ವಹಣೆಯಲ್ಲಿ ಚಿನ್ನದ ಪದಕ ಪಡೆದ ಸುನೀಲ್‌ ಕುಮಾರ್, ‘45ನೇ ವಯಸ್ಸಿನಲ್ಲಿ ಚಿನ್ನದ ಪದಕ ಪಡೆದಿದ್ದು, ಜೀವನದ ಅವಿಸ್ಮರಣಿಯ ಕ್ಷಣ. ಪ್ರಸ್ತುತ ಬಾಷ್‌ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಈ ವಯಸ್ಸಿನಲ್ಲಿ ಮೂಡಿದ ಕಲಿಕೆಯ ಕನಸಿಗೆ, ಐಐಎಂಬಿ ನೀರೆರೆದಿದೆ. ವಾರಾಂತ್ಯದ ತರಗತಿಗಳಿದ್ದರಿಂದ ಕೆಲಸದ ಜೊತೆಯೂ ಓದು ಸಾಧ್ಯವಾಯಿತು. ಕೇವಲ 4 ತಾಸು ನಿದ್ದೆಗೆ ಸಮಯ ಸಿಗುತ್ತಿತ್ತು. ಕುಟುಂಬದ ಸಹಕಾರದಿಂದ ಚಿನ್ನದ ಪದಕ ಕೊರಳಿಗೇರಿದೆ. ಸ್ವ–ಉದ್ಯಮ ಪ್ರಾರಂಭಿಸುವ ಬಗ್ಗೆ ಯುವಜನತೆಗೆ ಮಾರ್ಗದರ್ಶನ ಮಾಡುವ ಆಲೋಚನೆ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.