ADVERTISEMENT

60 ಕೆರೆಗಳ ಹೊಣೆಯಿಂದ ನುಣುಚಿಕೊಂಡ ಬಿಡಿಎ

ಅಭಿವೃದ್ಧಿ ಮಾಡದೆ ಬಿಬಿಎಂಪಿ ಮರು ಸುಪರ್ದಿಗೆ ಕೆರೆಗಳು * ಆರ್ಥಿಕ ಸಂಕಷ್ಟದಿಂದ ಹಸ್ತಾಂತರ: ಪ್ರಾಧಿಕಾರ ನೀಡಿದ ಕಾರಣ

ಪ್ರವೀಣ ಕುಲಕರ್ಣಿ
Published 26 ಸೆಪ್ಟೆಂಬರ್ 2016, 20:16 IST
Last Updated 26 ಸೆಪ್ಟೆಂಬರ್ 2016, 20:16 IST
ನೊರೆ ಸಮಸ್ಯೆಯಿಂದ ನಲುಗಿದ ಬೆಳ್ಳಂದೂರು ಕೆರೆ.  ಬಿಡಿಎ ಈ ಕೆರೆಯನ್ನು ಬಿಬಿಎಂಪಿಗೆ ಮರು ಹಸ್ತಾಂತರ ಮಾಡಿದೆ-      ಪ್ರಜಾವಾಣಿ ಚಿತ್ರ: ಎಸ್‌.ಕೆ. ದಿನೇಶ್‌
ನೊರೆ ಸಮಸ್ಯೆಯಿಂದ ನಲುಗಿದ ಬೆಳ್ಳಂದೂರು ಕೆರೆ. ಬಿಡಿಎ ಈ ಕೆರೆಯನ್ನು ಬಿಬಿಎಂಪಿಗೆ ಮರು ಹಸ್ತಾಂತರ ಮಾಡಿದೆ- ಪ್ರಜಾವಾಣಿ ಚಿತ್ರ: ಎಸ್‌.ಕೆ. ದಿನೇಶ್‌   

ಬೆಂಗಳೂರು: ಒಡಲ ತುಂಬಾ ರಾಸಾಯನಿಕ ತುಂಬಿಕೊಂಡು ನೊರೆ ಕಕ್ಕುತ್ತಿರುವ ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳು ಸೇರಿದಂತೆ ನಗರದ ಒಟ್ಟಾರೆ 60 ಕೆರೆಗಳನ್ನು ನಿರ್ವಹಣೆ ಮಾಡಲಾಗದೆ ಬಿಡಿಎ ಅವುಗಳನ್ನೀಗ ಬಿಬಿಎಂಪಿಗೆ ಮರು ಹಸ್ತಾಂತರ ಮಾಡಿ ಕೈತೊಳೆದುಕೊಂಡಿದೆ.

ನೊರೆ ಹಾಗೂ ಮಹಾಪೂರದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗದೆ ಬಿಡಿಎ ತನ್ನ ಹೊಣೆಯನ್ನು ಈಗ ಬಿಬಿಎಂಪಿಗೆ ವರ್ಗಾಯಿಸಿದೆ. ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳಲ್ಲಿ ನೊರೆ ಹಾವಳಿ ಹೆಚ್ಚಾಗಿದ್ದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಜಲ ಶುದ್ಧೀಕರಣ ಘಟಕ ಹಾಕುವುದು, ರಾಸಾಯನಿಕ ಸೇರದಂತೆ ನಿಗಾ ವಹಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲು ಪರಿಸರ ತಜ್ಞರ ಸಮಿತಿ ಶಿಫಾರಸು ಮಾಡಿತ್ತು.
ನೊರೆ ಹಾವಳಿ ತಡೆಗಟ್ಟಲು ಬಿಡಿಎ ಏನೇನೂ ಕ್ರಮ ಕೈಗೊಂಡಿಲ್ಲ ಎಂಬ ವ್ಯಾಪಕ ಟೀಕೆ ಸಹ ಕೇಳಿಬಂದಿತ್ತು. ಕೆರೆಯನ್ನು ಮಾಲಿನ್ಯಗೊಳಿಸಿದ ವಿಷಯವಾಗಿ ಬಿಡಿಎ ಹಾಗೂ ಜಲಮಂಡಳಿಯ ಅಧಿಕಾರಿಗಳ ಮಧ್ಯೆ ವಾಕ್ಸಮರವೂ ನಡೆದಿತ್ತು. ಈಗ ಕೆರೆಗಳ ಹೊಣೆಯಿಂದಲೇ ಬಿಡಿಎ ನುಣುಚಿಕೊಂಡಿದೆ.

ತನ್ನ ಸುಪರ್ದಿಯಲ್ಲಿರುವ 109 ಕೆರೆಗಳ ಹೊಣೆಯಿಂದ ಮೊದಲೇ ಬಳಲಿದ ಬಿಬಿಎಂಪಿಯ ಕೆರೆಗಳ ನಿರ್ವಹಣೆ ವಿಭಾಗ ಅಧಿಕ ಭಾರದಿಂದ ಮತ್ತಷ್ಟು ಆತಂಕಕ್ಕೀಡಾಗಿದೆ. ಹೊಸ ಸೇರ್ಪಡೆಯೂ ಸೇರಿದಂತೆ ಒಟ್ಟಾರೆ 169 ಕೆರೆಗಳು ಈಗ ಬಿಬಿಎಂಪಿ ಕೆರೆಗಳ ನಿರ್ವಹಣಾ ವಿಭಾಗದ ಸುಪರ್ದಿಗೆ ಒಳಪಟ್ಟಿವೆ. ವಾರ್ಷಿಕ ಕೇವಲ ₹ 15 ಕೋಟಿ ಅನುದಾನದಲ್ಲಿ ಅವುಗಳನ್ನೆಲ್ಲ ನಿರ್ವಹಣೆ ಮಾಡಬೇಕಿದೆ.

‘ನಗರೋತ್ಥಾನ ಯೋಜನೆಯಡಿ ₹ 100 ಕೋಟಿ ನೀಡಲಾಗುವುದು ಎಂಬ ಭರವಸೆಯನ್ನು ರಾಜ್ಯ ಸರ್ಕಾರ ನೀಡಿದೆ. ಆದರೆ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆ ಹಣ ಸಿಗುವ ಭರವಸೆ ಇಲ್ಲ. ಸಿಕ್ಕರೂ ಅಷ್ಟು ಹಣ ಕೆರೆಗಳ ಅಭಿವೃದ್ಧಿಗೆ ಸಾಕಾಗುವುದಿಲ್ಲ’ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.

ತಲಾ ಒಬ್ಬ ಸೂಪರಿಂಟೆಂಡಿಂಗ್‌ ಎಂಜಿನಿಯರ್‌, ಕಾರ್ಯನಿರ್ವಾಹಕ ಎಂಜಿನಿಯರ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಸಹಾಯಕ ಎಂಜಿನಿಯರ್‌ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ – ಕೆರೆಗಳ ವಿಭಾಗದಲ್ಲಿ ಸದ್ಯ ಇಷ್ಟೇ ಜನ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಅವರ ಮೇಲೆ ಎಲ್ಲ ಕೆರೆಗಳ ಹೊರೆ ಬಿದ್ದಿದೆ.

ಬಿಬಿಎಂಪಿ ಸುಪರ್ದಿಯಲ್ಲಿದ್ದ ಎಲ್ಲ ಕೆರೆಗಳಿಗೆ ಇಲ್ಲಿಯತನಕ ಸಮರ್ಪಕವಾಗಿ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿಲ್ಲ. ಈಗ ಹೊಸದಾಗಿ ಸೇರ್ಪಡೆಯಾದ ಕೆರೆಗಳಿಗೆ ಸಹ ಭದ್ರತೆಗಾಗಿ ಹೋಂ ಗಾರ್ಡ್‌ಗಳ ವ್ಯವಸ್ಥೆ ಮಾಡಬೇಕಿದೆ.

‘ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರ ನಿರ್ದೇಶನದಂತೆ ಕೆರೆಗಳನ್ನು ಬಿಬಿಎಂಪಿಗೆ ಹಸ್ತಾಂತರ ಮಾಡಲಾಗುತ್ತಿದೆ. ಇನ್ನುಮುಂದೆ ಅವುಗಳ ನಿರ್ವಹಣೆಯನ್ನು ನೀವೇ ಮಾಡಬೇಕು’ ಎಂದು ಬಿಡಿಎ ಆಯುಕ್ತರು, ಸೆಪ್ಟೆಂಬರ್‌ 14ರಂದು ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಹಸ್ತಾಂತರ ಮಾಡುತ್ತಿರುವ ಕೆರೆಗಳ ಪಟ್ಟಿಯನ್ನೂ ಕೊಟ್ಟಿದ್ದಾರೆ.

ಅಭಿವೃದ್ಧಿಪಡಿಸುವ ಸಲುವಾಗಿ 2008ರಿಂದ 2012ರ ಅವಧಿಯಲ್ಲಿ 122 ಕೆರೆಗಳನ್ನು ಬಿಡಿಎಗೆ ಹಸ್ತಾಂತರ ಮಾಡಲಾಗಿತ್ತು. ಕೆಲವು ಕೆರೆಗಳನ್ನು ಈ ಹಿಂದೆಯೇ ಮರು ಹಸ್ತಾಂತರ ಮಾಡಲಾಗಿತ್ತು. ‘ನಮ್ಮ ಸುಪರ್ದಿಯಲ್ಲಿ ಸದ್ಯ ಇರುವ 91 ಕೆರೆಗಳ ನಿರ್ವಹಣೆ ಹಾಗೂ ಅಭಿವೃದ್ಧಿಗಾಗಿ ₹ 2 ಸಾವಿರ ಕೋಟಿಗಿಂತ ಅಧಿಕ ಮೊತ್ತ ಬೇಕಿದೆ. ಮೊದಲೇ ನಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಹೀಗಾಗಿ ಕೆರೆಗಳ ನಿರ್ವಹಣೆ ಸಾಧ್ಯವಿಲ್ಲ’ ಎಂದು ಬಿಡಿಎ ಆಯುಕ್ತರು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು. ಆ ಪತ್ರ ಆಧರಿಸಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಕೆರೆಗಳನ್ನು ಬಿಬಿಎಂಪಿಗೆ ಹಸ್ತಾಂತರ ಮಾಡುವಂತೆ ಸೂಚನೆ ನೀಡಿದ್ದರು.

ನಗರಾಭಿವೃದ್ಧಿ ಇಲಾಖೆಯಿಂದ ಬಿಬಿಎಂಪಿಗೆ ಕೆಲವು ಷರತ್ತುಗಳನ್ನೂ ವಿಧಿಸಲಾಗಿದೆ. ಹೂಳು ತೆಗೆದು ಕೆರೆಗಳ ಪುನರುಜ್ಜೀವನ ಮಾಡಬೇಕು, ಯಾವುದೇ ಅಭಿವೃದ್ಧಿ ಚಟುವಟಿಕೆ ನಡೆಸುವ ಮುನ್ನ ಕಂದಾಯ ಇಲಾಖೆಯಿಂದ ಅನುಮತಿ ಪಡೆಯಬೇಕು, ನ್ಯಾಯಾಲಯದ ಪ್ರಕರಣಗಳ ಇತ್ಯರ್ಥಕ್ಕೆ ವಿಶೇಷ ವ್ಯವಸ್ಥೆ ಮಾಡಬೇಕು, ಕೆರೆಗಳು ಒತ್ತುವರಿ ಆಗದಂತೆ ಎಚ್ಚರ ವಹಿಸಬೇಕು, ಕೊಳಚೆ ನೀರು ಕೆರೆಗೆ ಹೋಗದಂತೆ ನೋಡಿಕೊಳ್ಳಬೇಕು ಎಂಬ ನಿರ್ದೇಶನ ನೀಡಲಾಗಿದೆ.

ಕೆರೆಗಳು ಬಿಬಿಎಂಪಿ ಸುಪರ್ದಿಯಲ್ಲಿದ್ದರೂ ಅವುಗಳ ಒಡೆತನ ಕಂದಾಯ ಇಲಾಖೆಗೆ ಸೇರಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
‘ಅಭಿವೃದ್ಧಿಪಡಿಸಲು ಈ ಕೆರೆಗಳನ್ನು ಬಿಡಿಎಗೆ ಹಸ್ತಾಂತರ ಮಾಡಲಾಗಿತ್ತು. ಅವುಗಳನ್ನು ಅಭಿವೃದ್ಧಿ ಮಾಡುವುದು ಒಂದೆಡೆ ಇರಲಿ, ಮೊದಲಿದ್ದ ಸ್ಥಿತಿಯಲ್ಲೂ ಉಳಿಸಿಲ್ಲ. ಅವುಗಳ ಸ್ಥಿತಿ ಮೊದಲಿಗಿಂತ ಚಿಂತಾಜನಕವಾಗಿದೆ’ ಎಂದು ಬಿಬಿಎಂಪಿ ಕೆರೆಗಳ ನಿರ್ವಹಣಾ ವಿಭಾಗದ ಅಧಿಕಾರಿಯೊಬ್ಬರು ಹೇಳುತ್ತಾರೆ.

‘ನಗರಾಭಿವೃದ್ಧಿ ಇಲಾಖೆಯು ಕೆರೆಗಳ ಹಸ್ತಾಂತರಕ್ಕೆ ಮಾತ್ರ ಆದೇಶ ನೀಡಿದೆ. ಅನುದಾನದ ಕುರಿತು ಯಾವುದೇ ಸೂಚನೆ ನೀಡಿಲ್ಲ. ಕೆರೆಗೆ ಹೂಳು ಬಾರದಂತೆ ತಡೆಗಟ್ಟಬೇಕು, ಸಂಗ್ರಹವಾದ ಹೂಳು ತೆಗೆಯಬೇಕು, ಜಲ ಶುದ್ಧೀಕರಣ ಘಟಕ ಹಾಕಬೇಕು, ಕೆರೆಗಳ ಸುತ್ತ ಬೇಲಿ ಅಳವಡಿಸಬೇಕು, ಭದ್ರತೆಗೆ ಸಿಬ್ಬಂದಿ ನಿಯೋಜನೆ ಮಾಡಬೇಕು –ಈ ಕಾರ್ಯಗಳಿಗೆಲ್ಲ ಹಣ ಎಲ್ಲಿಂದ ತರುವುದು’ ಎಂದು ಅವರು ಪ್ರಶ್ನಿಸುತ್ತಾರೆ.

ಬೆಳ್ಳಂದೂರು ಕೆರೆ ದೊಡ್ಡದು
ಬಿಡಿಎಯಿಂದ ಬಿಬಿಎಂಪಿಗೆ ಹಸ್ತಾಂತರ ಮಾಡಲಾದ ಕೆರೆಗಳಲ್ಲಿ ಬೆಂಗಳೂರು ಪೂರ್ವ ತಾಲ್ಲೂಕಿನ ಬೆಳ್ಳಂದೂರು ಕೆರೆ (919 ಎಕರೆ, 17 ಗುಂಟೆ) ಅತ್ಯಂತ ದೊಡ್ಡದಾಗಿದ್ದರೆ, ಬೆಂಗಳೂರು ಉತ್ತರ ತಾಲ್ಲೂಕಿನ ಚಿಕ್ಕಬೆಟ್ಟಿಹಳ್ಳಿ ಕೆರೆ (1 ಎಕರೆ, 32 ಗುಂಟೆ) ಅತ್ಯಂತ ಚಿಕ್ಕದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.