ADVERTISEMENT

ನರಸಿಂಹರಾಜು ಹಾಸ್ಯ ಕಿರುಚಿತ್ರೋತ್ಸವ

ನವೆಂಬರ್‌ನಲ್ಲಿ ಕಾರ್ಯಕ್ರಮ l ಹಾಸ್ಯಚಿತ್ರ, ಸಂಭಾಷಣೆಕಾರರಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2018, 19:26 IST
Last Updated 24 ಜುಲೈ 2018, 19:26 IST
ಬೆಂಗಳೂರಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಚೇರಿಯಲ್ಲಿ ಮಂಗಳವಾರ ನಡೆದ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ 95ನೇ ಜನ್ಮ ದಿನಾಚರಣೆಯಲ್ಲಿ ನರಸಿಂಹರಾಜು ಅವರ ಪತ್ನಿ ಶಾರದಮ್ಮ ಅವರನ್ನು ಸನ್ಮಾನಿಸಲಾಯಿತು
ಬೆಂಗಳೂರಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಚೇರಿಯಲ್ಲಿ ಮಂಗಳವಾರ ನಡೆದ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ 95ನೇ ಜನ್ಮ ದಿನಾಚರಣೆಯಲ್ಲಿ ನರಸಿಂಹರಾಜು ಅವರ ಪತ್ನಿ ಶಾರದಮ್ಮ ಅವರನ್ನು ಸನ್ಮಾನಿಸಲಾಯಿತು   

ಬೆಂಗಳೂರು:ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಸ್ಮರಣಾರ್ಥ ಅವರ ಮೊಮ್ಮಗ, ನಿರ್ದೇಶಕ ಎಸ್‌.ಡಿ. ಅರವಿಂದ್‌ ಅಂತರರಾಷ್ಟ್ರೀಯ ಹಾಸ್ಯ ಕಿರುಚಿತ್ರೋತ್ಸವ ಹಮ್ಮಿಕೊಳ್ಳಲುನಿರ್ಧರಿಸಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಹಕಾರದಡಿ ನವೆಂಬರ್‌ನಲ್ಲಿ ಈ ಚಿತ್ರೋತ್ಸವ ನಡೆಯಲಿದೆ. ಇಪ್ಪತ್ತು ನಿಮಿಷಗಳ ಅವಧಿಯ ಹಾಸ್ಯ ಕಿರುಚಿತ್ರಗಳನ್ನು ಪ್ರದರ್ಶನಕ್ಕೆ ಆಹ್ವಾನಿಸಲಾಗಿದೆ. ಕನ್ನಡದ ಅತ್ಯುತ್ತಮ ಹಾಸ್ಯ ಚಿತ್ರ, ಹಾಸ್ಯ ನಟ, ಸಂಭಾಷಣೆಕಾರ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಚೇರಿಯಲ್ಲಿ ಮಂಗಳವಾರ ನಡೆದ ಹಾಸ್ಯ ನಟ ದಿವಂಗತ ನರಸಿಂಹರಾಜು ಅವರ 95ನೇ ಜನ್ಮ ದಿನಾಚರಣೆಯಲ್ಲಿ ಅರವಿಂದ್‌ ಈ ನಿರ್ಧಾರ ಪ್ರಕಟಿಸಿದರು.

ADVERTISEMENT

‘ಕಿರುಚಿತ್ರಗಳ ಸಂಖ್ಯೆ ಆಧರಿಸಿ ಬೆಂಗಳೂರಿನಲ್ಲಿ ಚಿತ್ರೋತ್ಸವ ನಡೆಯಲಿದೆ. ಹಾಸ್ಯ ಚಿತ್ರಗಳಿಗೆ ಹೆಚ್ಚಿನ ಉತ್ತೇಜನ ನೀಡುವುದೇ ಇದರ ಉದ್ದೇಶ. ಪ್ರತಿವರ್ಷವೂ ಕಿರುಚಿತ್ರೋತ್ಸವ ಹಮ್ಮಿಕೊಳ್ಳಲಾಗುವುದು’ ಎಂದರು.

ಹಿರಿಯ ನಟ ಶಿವರಾಂ ಮಾತನಾಡಿ, ‘ರಾಜ್ಯ ಸರ್ಕಾರಕ್ಕೆ ಫಿಲ್ಮ್‌ ಸಿಟಿ ನಿರ್ಮಿಸುವ ಆಸಕ್ತಿ ಇಲ್ಲ. ವ್ಯವಸ್ಥಿತವಾಗಿ ಅದನ್ನು ಮುಂದೂಡುವ ಪ್ರಯತ್ನ ನಡೆಯುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಈ ಹಿಂದೆ ಹೆಸರಘಟ್ಟ, ಮೈಸೂರಿನಲ್ಲಿ ಸ್ಥಾಪಿಸುವುದಾಗಿ ಸರ್ಕಾರ ಹೇಳಿತ್ತು. ಈಗ ರಾಮನಗರದಲ್ಲಿ ಚಲನಚಿತ್ರ ವಿಶ್ವವಿದ್ಯಾಲಯ ಮತ್ತು ಫಿಲ್ಮ್‌ ಸಿಟಿ ನಿರ್ಮಾಣ ಮಾಡುವುದಾಗಿ ಹೇಳಲಾಗುತ್ತಿದೆ. ಮೈಸೂರಿನಲ್ಲಿ ಸ್ಥಾಪಿಸಿದ್ದ ಚಲನಚಿತ್ರ ವಿಶ್ವವಿದ್ಯಾಲಯದ ಸ್ಥಿತಿ ಏನಾಗಿದೆ ಎಂಬ ಅರಿವು ಸರ್ಕಾರಕ್ಕಿಲ್ಲ. ಹೊಸ ಸರ್ಕಾರ ಬಂದಾಗಲೆಲ್ಲಾ ಒಂದೊಂದು ಭರವಸೆ ನೀಡಲಾಗುತ್ತಿದೆ’ ಎಂದು ಟೀಕಿಸಿದರು.

ಟಾಲಿವುಡ್‌, ಕಾಲಿವುಡ್‌ಗೆ ಹೋಲಿಸಿದರೆ ಕನ್ನಡ ಚಿತ್ರರಂಗ ಇನ್ನೂ ಪರಿಪೂರ್ಣವಾಗಿ ಬೆಳೆದಿಲ್ಲ. ಚಂದನವನದ ಬೆಳವಣಿಗೆಗೆ ಫಿಲ್ಮ್‌ ಸಿಟಿಯ ಅಗತ್ಯವಿದೆ. ಸರ್ಕಾರ ಇಚ್ಛಾಶಕ್ತಿ ‍ಪ್ರದರ್ಶಿಸಿ ತ್ವರಿತವಾಗಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ. ಚಿನ್ನೇಗೌಡ, ಗೌರವ ಕಾರ್ಯದರ್ಶಿ ಭಾ.ಮ. ಹರೀಶ್‌, ನರಸಿಂಹರಾಜು ಅವರ ಪತ್ನಿ ಶಾರದಮ್ಮ, ಪುತ್ರಿ ಸುಧಾ ನರಸಿಂಹರಾಜು ಮತ್ತು ಕುಟುಂಬದ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.