ADVERTISEMENT

ಟೆಕಿ ವಿಜಯಲಕ್ಷ್ಮಿ ಹತ್ಯೆ ಪ್ರಕರಣ: ದೆಹಲಿಯಲ್ಲಿ ಸೆರೆಸಿಕ್ಕ ಹಂತಕ!

ಇಮ್ಮಡಿಹಳ್ಳಿಯಲ್ಲಿ ನಡೆದಿದ್ದ ಕೃತ್ಯ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2018, 19:12 IST
Last Updated 22 ಆಗಸ್ಟ್ 2018, 19:12 IST
ಹರೀಶ್ ಕುಮಾರ್
ಹರೀಶ್ ಕುಮಾರ್   

ಬೆಂಗಳೂರು: ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಸಿಗುತ್ತಿದ್ದಂತೆಯೇ ತನ್ನನ್ನು ದೂರ ಮಾಡುತ್ತಿದ್ದಾಳೆ ಎಂದು ಭಾವಿಸಿ ಪ್ರೇಯಸಿಯನ್ನು ಉಸಿರುಗಟ್ಟಿಸಿ ಕೊಂದಿದ್ದ ಜಿಮ್‌ ತರಬೇತುದಾರ ಹರೀಶ್ ಕುಮಾರ್ ಅಲಿಯಾಸ್ ರೂಪೇಶ್‌ನನ್ನು (24) ವೈಟ್‌ಫೀಲ್ಡ್ ಪೊಲೀಸರು ದೆಹಲಿಯಲ್ಲಿ ಸೆರೆಹಿಡಿದಿದ್ದಾರೆ.

ಆ.19ರಂದು ಇಮ್ಮಡಿಹಳ್ಳಿಯ ಮನೆಯಲ್ಲಿ ವಿಜಯಲಕ್ಷ್ಮಿ (23) ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮನೆ ಮಾಲೀಕರು ‘ಹರೀಶ್ ಎಂಬಾತ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ. ಆತನೇ ಕೊಲೆ ಮಾಡಿರಬಹುದು’ ಎಂಬ ಸಂಶಯ ವ್ಯಕ್ತಪಡಿಸಿದ್ದರು. ಆತನ ಬಗ್ಗೆ ಮೃತರ ತಮ್ಮ ನಿತೀಶ್‌ನನ್ನು ವಿಚಾರಿಸಿದಾಗ, ‘ಹರೀಶ್ ಸಹ ದೆಹಲಿಯವನು. ಅಕ್ಕನ ಸ್ನೇಹಿತ’ ಎಂದು ಹೇಳಿದ. ಮೊಬೈಲ್ ಕರೆ ವಿವರ (ಸಿಡಿಆರ್) ಆಧರಿಸಿ ಬುಧವಾರ ರಾತ್ರಿ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ಹೇಳಿದರು.

ಹರೀಶ್, ದೆಹಲಿಯಲ್ಲಿ ಜಿಮ್ ಸೆಂಟರ್ ನಡೆಸುತ್ತಿದ್ದ. ವಿಜಯಲಕ್ಷ್ಮಿ ಆತನ ಬಳಿಯೇ ಜಿಮ್ ತರಬೇತಿ ಪಡೆಯುತ್ತಿದ್ದರು. ಈ ರೀತಿಯಾಗಿ ಆರಂಭವಾದ ಪರಿಚಯ, ಕ್ರಮೇಣ ಪ್ರೀತಿಗೆ ತಿರುಗಿತ್ತು. ದೆಹಲಿಯಲ್ಲಿ ವ್ಯಾಸಂಗ ಮುಗಿಸಿದ ವಿಜಯಲಕ್ಷ್ಮಿಗೆ ಬೆಂಗಳೂರಿನ ಐಟಿಪಿಎಲ್‌ನಲ್ಲಿರುವ ‘ಎಂಯು–ಸಿಗ್ಮಾ’ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಸಿಕ್ಕಿತು. ಆ.1ರಂದು ಅವರು ನಗರಕ್ಕೆ ಬಂದು ಕಂಪನಿ ಸೇರಿಕೊಂಡಿದ್ದರು.

ADVERTISEMENT

ಮೊದಲು ಪೇಯಿಂಗ್ ಗೆಸ್ಟ್‌ ಕಟ್ಟಡವೊಂದರಲ್ಲಿ ಉಳಿದುಕೊಂಡಿದ್ದ ಅವರು, ನಂತರ ಗೆಳೆಯ ಹರೀಶ್‌ಗೆ ಕರೆ ಮಾಡಿ ನಗರಕ್ಕೆ ಕರೆಸಿಕೊಂಡಿದ್ದರು. ಆತ ಚನ್ನಸಂದ್ರದಲ್ಲಿ ಬಾಡಿಗೆ ಮನೆಯೊಂದನ್ನು ಹುಡುಕಿದ್ದ. ಒಂದೆರಡು ದಿನ ಅಲ್ಲೇ ಇದ್ದ ಇಬ್ಬರೂ, ಸರಿ ಹೋಗಲಿಲ್ಲವೆಂದು ಇಮ್ಮಡಿಹಳ್ಳಿಯಲ್ಲಿ ಇನ್ನೊಂದು ಮನೆ ನೋಡಿದ್ದರು. ಆ.11ರಂದು ಹೊಸ ಮನೆಗೆ ವಾಸ್ತವ್ಯ ಬದಲಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಪೂರ್ತಿ ಬದಲಾದಳು: ‘ಬೆಂಗಳೂರಿಗೆ ಬಂದ ನಂತರ ಗೆಳತಿಯ ವರ್ತನೆ ಪೂರ್ತಿ ಬದಲಾಯಿತು. ಏನಾದರೂ ಕೆಲಸ ಆಗಬೇಕೆಂದಾಗ ಮಾತ್ರ ನನಗೆ ಕರೆ ಮಾಡುತ್ತಿದ್ದಳು. ‘ನೀನು ಅವಿದ್ಯಾವಂತ. ಈಗ ನಿನಗಿಂತ ನಾನೇ ಹೆಚ್ಚು ದುಡಿಯುತ್ತೇನೆ’ ಎಂದು ಹೀಯಾಳಿಸಲು ಶುರು ಮಾಡಿದ್ದಳು. ರಾತ್ರಿ 1 ಗಂಟೆಯಾದರೂ ಬೇರೊಬ್ಬನಿಗೆ ಕರೆ ಮಾಡಿ ಮಾತನಾಡುತ್ತಿದ್ದಳು. ಈ ವಿಚಾರವಾಗಿ ಮನಸ್ತಾಪ ಶುರುವಾಗಿತ್ತು’ ಎಂದು ಆರೋ‍ಪಿ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಹೇಳಿದರು.

‌‘ಆ.16ರ ಸಂಜೆ ನಾನು ಫೋನ್ ಮಾಡಿದರೆ ಕರೆ ಸ್ವೀಕರಿಸಲಿಲ್ಲ. ಸಂದೇಶಕ್ಕೂ ಪ್ರತಿಕ್ರಿಯಿಸಲಿಲ್ಲ. ಸಿಟ್ಟಿನಲ್ಲಿ ಕಂಪನಿ ಹತ್ತಿರವೇ ಹೋಗಿ ಜಗಳವಾಡಿದ್ದೆ. ಸಹೋದ್ಯೋಗಿಗಳ ಎದುರು ಗಲಾಟೆ ಮಾಡಿದ್ದರಿಂದ ಕೆರಳಿದ ಆಕೆ, ಮನೆಗೆ ಬಂದ ನಂತರ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದಳು. ರಾತ್ರಿ 11 ಗಂಟೆವರೆಗೂ ನಮ್ಮಿಬ್ಬರ ನಡುವೆ ವಾಗ್ವಾದ ನಡೆಯಿತು. ಆಕೆ ನನ್ನನ್ನು ಜೋರಾಗಿ ತಳ್ಳಿದಾಗ ತಲೆ ಗೋಡೆಗೆ ಬಡಿದು ರಕ್ತ ಬರಲಾರಂಭಿಸಿತು.’

‘ಆ ನಂತರವೇ ನಾನೂ ಪ್ರೇಯಸಿ ವಿರುದ್ಧ ತಿರುಗಿಬಿದ್ದೆ. ಕೋಪದ ಭರದಲ್ಲಿ ಕುತ್ತಿಗೆ ಹಿಸುಕಿದೆ. ಆಕೆ ಸತ್ತೇ ಹೋದಳು. ನಂತರ ಹಾಸಿಗೆ ಮೇಲೆ ಮಲಗಿಸಿ, ಹೊರಗಿನಿಂದ ಚಿಲಕ ಹಾಕಿಕೊಂಡು ಅಮೃತಸರಕ್ಕೆ ಹೊರಟುಬಿಟ್ಟೆ’ ಎಂದು ಆತ ಹೇಳಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.

ದಾಖಲೆಗಾಗಿ ಮತ್ತೆ ಬಂದ

ಪ್ರೇಯಸಿ ಸತ್ತಿರುವ ವಿಚಾರ ಹೊರಗಿನವರಿಗೆ ಗೊತ್ತಾಗಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳಲು ಆತ ಆ.19ರ ರಾತ್ರಿ ಪುನಃ ನಗರಕ್ಕೆ ಬಂದಿದ್ದ. ಅದೇ ದಿನ ರಾತ್ರಿ ಪ್ರಕರಣ ಬೆಳಕಿಗೆ ಬಂದಿತ್ತು. ಕೂಡಲೇ, ಮೊದಲು ಬಾಡಿಗೆಗೆ ಪಡೆದಿದ್ದ ಚನ್ನಸಂದ್ರದ ಮನೆಗೆ ತೆರಳಿದ ಆರೋಪಿ, ಅಲ್ಲಿದ್ದ ತನ್ನ ಕೆಲ ದಾಖಲೆಗಳನ್ನು ತೆಗೆದುಕೊಂಡು ದೆಹಲಿಯತ್ತ ಹೊರಟಿದ್ದ. ಹಂತಕನ ಪತ್ತೆಗೆ ರಚನೆಯಾಗಿದ್ದ ಪಿಎಸ್‌ಐ ಟಿ.ಸೋಮಶೇಖರ್ ನೇತೃತ್ವದ ತಂಡವು, ಸಿಡಿಆರ್ ಸುಳಿವು ಆಧರಿಸಿ ಹರೀಶ್‌ನನ್ನು ಬೆನ್ನಟ್ಟಿತ್ತು. ಕೊನೆಗೆ ದೆಹಲಿಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ನಗರಕ್ಕೆ ಕರೆತಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.