ADVERTISEMENT

ಅಜ್ಞಾನ ಕಳೆಯುವುದು ಗುರುವಿನ ಪರಮ ಗುರಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 9:45 IST
Last Updated 12 ಜನವರಿ 2017, 9:45 IST

ಭಾಲ್ಕಿ: ಜೀವನದ ನಿಜಾರ್ಥವನ್ನು ಅರಿಯದೆ ಅಜ್ಞಾನದಲ್ಲಿ ತೊಳಲಾಡುವ ಮಾನವರನ್ನು ಸುಜ್ಞಾನದ ಕಡೆಗೆ ಕೊಂಡೊಯ್ಯುವುದು ಗುರುವಿನ ಪರಮ ಗುರಿ ಎಂದು ಹಿಮವತ ಕೇದಾರ ಪೀಠದ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯರು ನುಡಿದರು.

ತಾಲ್ಲೂಕಿನ ಹಲಬರ್ಗಾ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ 4ನೇ ಸಿದ್ದರಾಮೇಶ್ವರ ಜಾತ್ರೆ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಗು ತಾಯಿಯ ಗರ್ಭಾವಸ್ಥೆಯಲ್ಲಿ ಇರುವಾಗಲೇ ಸಂಸ್ಕಾರ ನೀಡುವ ಕಾರ್ಯ ಪ್ರಾರಂಭವಾಗುತ್ತದೆ. ಪ್ರತಿಯೊಬ್ಬರು ತಾಯಿ ಮತ್ತು ಗುರುವಿನ ಉದರದ ಮೂಲಕ ಎರಡು ಸಾರಿ ಜನ್ಮ ತಾಳುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು.

ಸತ್ಸಂಗದಿಂದ ದುರ್ಗುಣ, ಬೆಳಕಿಂದ ಕತ್ತಲೆ, ನಿರ್ಮೋಹದಿಂದ ಮೋಹ ದೂರವಾಗುತ್ತವೆ. ಪ್ರತಿದಿನ ಭಸ್ಮ ಧಾರಣೆಯಿಂದ ಮನಃ ಶುದ್ಧವಾಗಿ, ಭಗವಂತನ ಪ್ರಾಪ್ತಿಯಾಗುತ್ತದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಬಡ, ನಿರ್ಗತಿಕ ಮಕ್ಕಳಿಗೆ ಅನ್ನ, ಆಶ್ರಯ ಜತೆಗೆ ಗುಣಾತ್ಮಕ ಶಿಕ್ಷಣ ನೀಡುತ್ತಿರುವ ವೀರಶೈವ ಮಠಗಳ ಸ್ವಾಮೀಜಿಗಳ ಕಾರ್ಯ ಅನುಕರಣೀಯ ಎಂದು ಪ್ರಶಂಸಿಸಿದರು.

ಮನದಲ್ಲಿ ತುಂಬಿರುವ ಮೈಲಿಗೆ ತೊಳೆದುಕೊಳ್ಳಲು ಭಕ್ತರು ಗುರುವಿಗೆ ಶರಣಾಗಬೇಕಾಗುತ್ತದೆ. ದೇಶದ ಅತ್ಯಮೂಲ್ಯ ಸಂಪತ್ತಾಗಿರುವ ಯುವಕರು ದುಶ್ಚಟ, ದುರ್ಗುಣಗಳಿಂದ ದೂರಾಗಿ ಸಂತಸದ ಬಾಳು ನಡೆಸಲು ಇಂತಹ ಸಮಾರಂಭಗಳು ಆಗಾಗೆ ನಡೆಯುವುದು ಅತ್ಯವಶ್ಯಕ. ಗ್ರಾಮದಲ್ಲಿ ಸುಮಾರು 11 ದಿನಗಳಿಂದ ನಡೆಯುತ್ತಿರುವ ಜಾತ್ರೆ ಉತ್ತಮ ಅಧ್ಯಾತ್ಮಿಕ ವಾತಾವರಣ ಸೃಷ್ಟಿ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಲ್ಯಾಣ ಮಂಟಪ ನಿರ್ಮಾಣಕ್ಕೆ ₹10 ಲಕ್ಷ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು. ರಾಚೋಟೇಶ್ವರ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಮನುಷ್ಯ ಕೊಟ್ಟಿದ್ದು ಮನೆ ತನಕ, ಗುರು ಕೊಟ್ಟಿದ್ದು ಕೊನೆ ತನಕ. ಜೀವನ ಸಾರ್ಥಕತೆಗೆ ಗುರುವಿನ ಪಾದದ ಕೆರವಾಗಿ ಇರಬೇಕು ಎಂದು ಹೇಳಿದರು.

ಅದ್ಧೂರಿ ಮೆರವಣಿಗೆ: ಕಾರ್ಯಕ್ರಮಕ್ಕೂ ಮುಂಚೆ ಗ್ರಾಮದ ಹೊರವಲಯದಿಂದ ಸಾರೋಟಿಯಲ್ಲಿ ಹೊರಟ ಕೇದಾರ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯರ ವೈಭವದ ಮೆರವಣಿಗೆ ರಾಮನಗರ, ಬೊಮ್ಮಗೊಂಡೇಶ್ವರ, ಗಾಂಧಿ ವೃತ್ತದ ಮೂಲಕ ರಾಚೋಟೇಶ್ವರ ಮಠ ತಲುಪಿತು.

ಮೆರವಣಿಗೆಯುದ್ದಕ್ಕೂ ಮಹಿಳೆಯರು ತಲೆಯ ಮೇಲೆ ಕಳಸ ಹೊತ್ತು ಸಾಗಿದರು. ಡಿಜೆ ಸೌಂಡ್‌ನಲ್ಲಿ ಮೊಳಗಿದ ಭಕ್ತಿಗೀತೆಗಳಿಗೆ ಭಕ್ತರು ಭಾವ ಪರವಶರಾಗಿ ಹೆಜ್ಜೆ ಹಾಕಿ ಭಕ್ತಿ ಮೆರೆದರು.

ಹುಡುಗಿಯ ವಿರೂಪಾಕ್ಷ ಶಿವಾಚಾರ್ಯರು, ಉದಗೀರ್‌ನ ಶಂಭುಲಿಂಗ ಶಿವಾಚಾರ್ಯರು, ಬರದಿಪೂರದ ಶಿಖಾಮಣಿ ಆಯುದ್ಧಗಿರಿ ಮಹಾರಾಜ, ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶೀತಲ ಹಣಮಂತರಾವ ಚವ್ಹಾಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಚಮ್ಮಾ ಎಂ.ಮೂಲಗೆ, ಜಿಲ್ಲಾ ಪಂಚಾಯಿತಿ ಸದಸ್ಯ ಅಂಬಾದಾಸ ಕೋರೆ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ, ಹಣಮಂತರಾವ ಚವ್ಹಾಣ, ತಾಲ್ಲೂಕು ಪಂಚಾಯಿತಿ ಸದಸ್ಯ ಸುಧಾಕರ ಮಾಳಗೆ, ರಮೇಶ ಪ್ರಭಾ, ಸಂಜುಕುಮಾರ ಪ್ರಭಾ, ವೈಜಿನಾಥ ಮೂಲಗೆ, ದತ್ತಾತ್ರಿ ಮೂಲಗೆ, ಮಲ್ಲಿಕಾರ್ಜುನ ಚಲವಾ, ಉತ್ತಮ ನಾಗೂರೆ, ಸತೀಶ ಮಡಿವಾಳ, ಪ್ರದೀಪ ಮೇತ್ರಸ್ಕರ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.