ADVERTISEMENT

ಅತಿಥಿ ಶಿಕ್ಷಕರ ನೇಮಕ ಶೀಘ್ರ ಮಾಡಿಕೊಳ್ಳಿ

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 6:28 IST
Last Updated 13 ಜುಲೈ 2017, 6:28 IST

ಬೀದರ್‌: ‘ಶಿಕ್ಷಕರ ಕೊರತೆ ಇರುವ ಪ್ರೌಢಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡುವ ಪ್ರಕ್ರಿಯೆ ಚುರುಕುಗೊಳಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅವರು  ಮಾತನಾಡಿದರು. ‘ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವ ಕಾರಣ  ಪಾಠ ಬೋಧನೆಗೆ ತೊಂದರೆಯಾಗುತ್ತಿದೆ. ಈ ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಳಬೇಕು’  ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಮಾತನಾಡಿ, ‘ಅರ್ಹ ಅಭ್ಯರ್ಥಿಗಳನ್ನು ಗೌರವಧನದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಆಯಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್ ವಿಷಯಗಳಿಗೆ ಪ್ರಥಮ ಆದ್ಯತೆ ನೀಡಲು ತಿಳಿಸಲಾಗಿದೆ. ಅನುದಾನಿತ ಪ್ರಾಥಮಿಕ ಶಾಲೆಗಳ ಹೆಚ್ಚುವರಿ ಶಿಕ್ಷಕರನ್ನು ಅಗತ್ಯವಿರುವ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮರು ಹೊಂದಾಣಿಕೆ ಮಾಡಲಾಗಿದೆ’ ಎಂದು ತಿಳಿಸಿದರು.

ADVERTISEMENT

ಕಾಮಗಾರಿ ವಿಳಂಬ: ‘ಕುಡಿಯುವ ನೀರಿನ ಕ್ರಿಯಾ ಯೋಜನೆ ಸಿದ್ಧಪಡಿಸಿದ ಕಾರಣ ಕಾಮಗಾರಿಗಳು ವಿಳಂಬವಾಗುತ್ತಿವೆ’ ಎಂದು ಸಭೆಯಲ್ಲಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಗ್ರಾಮೀಣ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಮಕೃಷ್ಣ  ಮಾತನಾಡಿ, ‘ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಕುಡಿಯುವ ನೀರಿನ ಕ್ರಿಯಾ ಯೋಜನೆ ಸಿದ್ಧಪಡಿಸಿ ಜುಲೈ ಅಂತ್ಯದೊಳಗೆ ಅನುಮೋದನೆ ಪಡೆದುಕೊಳ್ಳುವಂತೆ ಸೂಚನೆ ನೀಡಿದ್ದರು. ಚುನಾಯಿತ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಹೇಳಿದರು.

‘ಪ್ರಸ್ತುತ ಜಿಲ್ಲೆಯಲ್ಲಿ ಮಳೆಯ ಕೊರತೆ ಉಂಟಾಗಿದೆ. ಮೂರು ವಾರಗಳಿಂದ ಒಣ ಹವೆ ಮುಂದುವರಿದಿದೆ. ಜಿಲ್ಲೆಯಲ್ಲಿ ಇದುವರೆಗೆ 3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. 27 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹೈಬ್ರಿಡ್ ಜೋಳ, 63 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ, 20 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಉದ್ದು, 27 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು, 1.21 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸೋಯಾ ಬಿತ್ತನೆ ಮಾಡಲಾಗಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್‌ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಕಾಶ ಪಾಟೀಲ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.