ADVERTISEMENT

ಅಪರೂಪಕ್ಕೆ ಬಾಗಿಲು ತೆರೆಯುವ ಮತ್ಸ್ಯಾಲಯ

ಚಂದ್ರಕಾಂತ ಮಸಾನಿ
Published 13 ನವೆಂಬರ್ 2017, 5:50 IST
Last Updated 13 ನವೆಂಬರ್ 2017, 5:50 IST

ಬೀದರ್: ನಗರದ ಕೆ.ಎಚ್‌.ಬಿ.ಕಾಲೊನಿಯಲ್ಲಿ 22 ವರ್ಷಗಳ ಹಿಂದೆ ಆರಂಭವಾಗಿರುವ ಮತ್ಸ್ಯಾಲಯ ಇಂದಿಗೂ ಜನರಿಗೆ ಹತ್ತಿರವಾಗಿಲ್ಲ. ಮೀನುಗಾರಿಕೆ ಇಲಾಖೆ ಸಿಬ್ಬಂದಿ ಅಪರೂಪಕ್ಕೆ ಬಾಗಿಲು ತೆರೆಯುವ ಕಾರಣ ಪ್ರವಾಸಿಗರಿಗೆ ಅಲಂಕಾರಿಕ ಮೀನುಗಳ ವೀಕ್ಷಣೆ ಸಾಧ್ಯವಾಗುತ್ತಿಲ್ಲ. ಜಿಲ್ಲೆಯ ವಿವಿಧೆಡೆಯಿಂದ ಜಿಲ್ಲಾ ಕೇಂದ್ರಕ್ಕೆ ಅಲಂಕಾರಿಕ ಮೀನುಗಳ ವೀಕ್ಷಣೆಗೆ ಬರುವ ಮಕ್ಕಳು ಪ್ರತಿ ಬಾರಿಗೂ ನಿರಾಶೆಯಿಂದ ಮರಳುತ್ತಿದ್ದಾರೆ. ಪ್ರವಾಸಿಗರೂ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಮತ್ಸ್ಯಾಲಯದ ಸುತ್ತಲೂ ಹುಲ್ಲು, ಗಿಡಗಂಟಿಗಳು ಬೆಳೆದಿವೆ. ಕಟ್ಟಡದ ಬಣ್ಣ ಮಾಸಿ ಹೋಗಿ ಕಳೆಗುಂದಿದೆ. ಆವರಣದಲ್ಲಿ ಹಾವುಗಳು ತಿರುಗಾಡುತ್ತಿವೆ. ಉದ್ಯಾನದಲ್ಲಿ ಇರುವ ಮತ್ಸ್ಯಾಲಯದ ನಿರ್ವಹಣೆಗೆ ನಿಯೋಜಿಸಿರುವ ಮಹಿಳೆ ಸಿಬ್ಬಂದಿ ಕಚೇರಿಯಲ್ಲಿ ಒಂಟಿಯಾಗಿ ಕುಳಿತುಕೊಳ್ಳಲು ಭಯಪಡುತ್ತಿದ್ದಾರೆ.

1994ರ ಜನವರಿ 26ರಂದು ಅಂದಿನ ಸಾರಿಗೆ ಸಚಿವ ಭೀಮಣ್ಣ ಖಂಡ್ರೆ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಬೀದರ್‌ ಶಾಸಕರಾಗಿದ್ದ ನಾರಾಯಣರಾವ್ ಮನ್ನಳ್ಳಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆದಿತ್ತು. ಜಿಲ್ಲಾ ಪಂಚಾಯಿತಿ ಅಡಿಯಲ್ಲಿ ಭೂಸೇನಾ ನಿಗಮವು  ಕಟ್ಟಡ ನಿರ್ಮಾಣ ಮಾಡಿತು.

ADVERTISEMENT

ಮರು ವರ್ಷ ಅಂದರೆ 1995ರ ಆಗಸ್ಟ್ 15 ರಂದು ಅಂದಿನ ಬಂಧಿಖಾನೆ ಸಚಿವ ಮೆರಾಜುದ್ದೀನ್‌ ಪಟೇಲ್‌ ಕಟ್ಟಡ ಉದ್ಘಾಟಿಸಿದ್ದರು. ಶಾಸಕರಾಗಿದ್ದ ಜುಲ್ಫೇಕಾರ ಹಾಸ್ಮಿ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಪ್ರಕಾಶ ಕಾಳೆಕರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆರಂಭದ ವರ್ಷದಲ್ಲಿ ಮತ್ಸ್ಯಾಲಯ ಚೆನ್ನಾಗಿಯೇ ಇತ್ತು. ನಿರ್ವಹಣೆಯ ಸಮಸ್ಯೆಯಿಂದಾಗಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡ ವ್ಯರ್ಥವಾಗಿದೆ.

ಮತ್ಸ್ಯಾಲಯದ ಒಂದು ಬದಿಗೆ ಪುರಾತನ ಬಾವಿ, ಇನ್ನೊಂದು ಬದಿಯಲ್ಲಿ ಈಜುಕೊಳ ಇದೆ. ಮುಂಭಾಗದಲ್ಲಿ ಬಾಲಭವನ ಹಾಗೂ ಬಾಲಭವನದ ಕಚೇರಿ ಇದೆ. ಬಾಲಭವನದಲ್ಲಿ ಆಗಾಗ ಅನೇಕ ಕಾರ್ಯಕ್ರಮಗಳು ನಡೆಯುತ್ತವೆ. ತಾಲ್ಲೂಕು ಕೇಂದ್ರಗಳಿಂದಲೂ ಅನೇಕ ಮಕ್ಕಳು ಬರುತ್ತಾರೆ.

‘ಜಿಲ್ಲೆಯ ಗ್ರಾಮೀಣ ಪ್ರದೇಶದಿಂದ ಬರುವ ಮಕ್ಕಳು ಅಲಂಕಾರಿಕ ಮೀನುಗಳನ್ನೇ ನೋಡಿಲ್ಲ. ಬಾಲಭವನಕ್ಕೆ ಬಂದಾಗ ಬೀಗವೇ ಕಾಣಿಸುತ್ತದೆ. ಮೀನುಗಳು ಒಂದೆಡೆ ಇರಲಿ ಸಿಬ್ಬಂದಿಯನ್ನೂ ನೋಡಿಲ್ಲ’ ಎಂದು ಬಾಲಭವನಕ್ಕೆ ತಮ್ಮ ಮಕ್ಕಳನ್ನು ಕರೆತಂದಿದ್ದ ಬಸವಕಲ್ಯಾಣದ ವೀರೇಶ ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಜನರಿಂದ ತೆರಿಗೆ ರೂಪದಲ್ಲಿ ಸಂಗ್ರಹವಾದ ಹಣವನ್ನು ಅಧಿಕಾರಿಗಳು ಹೇಗೆ ಪೋಲು ಮಾಡುತ್ತಾರೆ ಎನ್ನುವುದಕ್ಕೆ ಮತ್ಸ್ಯಾಲಯ ಒಂದು ಉದಾಹರಣೆ ಆಗಿದೆ. ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

‘ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಕಚೇರಿಯಲ್ಲಿ ಒಬ್ಬಳೇ ಕುಳಿತುಕೊಳ್ಳಲು ಭಯವಾಗುತ್ತಿದೆ ಎಂದು ಅನೇಕ ಬಾರಿ ಹೇಳಿದ್ದಾರೆ. ಆದರೂ ಅವರು ಮತ್ಸ್ಯಾಲಯದ ನಿರ್ವಹಣೆ ಮಾಡುತ್ತಿದ್ದಾರೆ. ಮೀನುಗಳಿಗೆ ನಿತ್ಯ ಆಹಾರ ಕೊಡುತ್ತಾರೆ’ ಎನ್ನುತ್ತಾರೆ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮಹಮ್ಮದ್‌ ರೆಹಮಾನ್‌.

‘ಮತ್ಸ್ಯಾಲಯದಲ್ಲಿ ಶಾರ್ಕ್, ಗೋಲ್ಡ್‌, ಎಂಜಿಲ್‌, ಗೊಪ್ಪಿ ಸೇರಿ ಎಂಟು ವಿಧದ ಮೀನುಗಳು ಇವೆ. ಇನ್ನು ಅಲ್ಲಿ ವಿಜಿಟರ್ಸ್‌ ಬುಕ್‌ ಇಟ್ಟು ನಿತ್ಯ ಎಷ್ಟು ಜನ ಭೇಟಿ ನೀಡುತ್ತಾರೆ ಎನ್ನುವ ಮಾಹಿತಿ ಪಡೆಯಲಾಗುವುದು. ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.