ADVERTISEMENT

ಆರ್ಯವೈಶ್ಯ ವಿದ್ಯಾರ್ಥಿ ನಿಲಯ ಆರಂಭ

ವಾಸವಿ ಜಯಂತಿಯಲ್ಲಿ ಆರ್ಯವೈಶ್ಯ ಸಮಾಜ ಜಿಲ್ಲಾ ಅಧ್ಯಕ್ಷ ಡಿ.ಆರ್‌.ಚಿದ್ರಿ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 9:05 IST
Last Updated 26 ಏಪ್ರಿಲ್ 2018, 9:05 IST

ಹುಮನಾಬಾದ್: ‘ಜಿಲ್ಲಾ ಕೇಂದ್ರದಲ್ಲಿ ಶೀಘ್ರ ಆರ್ಯವೈಶ್ಯ ವಿದ್ಯಾರ್ಥಿ ವಸತಿ ನಿಲಯ ಆರಂಭಿಸಲು ನಿರ್ಧರಿಸಲಾಗಿದೆ’ ಎಂದು ಸಮಾಜ ಜಿಲ್ಲಾ ಘಟಕ ಅಧ್ಯಕ್ಷ ಡಿ.ಆರ್.ಚಿದ್ರಿ ಹೇಳಿದರು.

ಪಟ್ಟಣದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ವಾಸವಿ ಮಾತೆ 4636ನೇ ಜಯಂತಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ವಿದ್ಯಾರ್ಥಿ ವಸತಿ ನಿಲಯ ನಿರ್ಮಾಣಕ್ಕಾಗಿ ಒಂದು ಎಕರೆ ಜಮೀನಿನ ಅಗತ್ಯವಿದೆ. ಸಮಾಜ ಜಿಲ್ಲಾ ಘಟಕ ಮಾಜಿ ಅಧ್ಯಕ್ಷ ಸಿಂಧೊಲ್‌ ಅವರ ಅವಧಿಯಲ್ಲೇ ಈ ಬಗ್ಗೆ ತೀರ್ಮಾನವಾಗಿತ್ತು. ಅದನ್ನು ತಮ್ಮ ಅವಧಿಯಲ್ಲಿ ಅಗತ್ಯ ನಿವೇಶನ ಗುರುತಿಸಿ, ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

ವಿಶೇಷ ಉಪನ್ಯಾಸ ನೀಡಿದ ಪ್ರೊ.ರಾಜೇಂದ್ರ ಉಪ್ಪಲ್ಲಿ ಮಾತನಾಡಿ, ‘ಆರ್ಯವೈಶ್ಯ ಸಮಾಜ ಕೇವಲ ವ್ಯಾಪಾರ ಕ್ಷೇತ್ರಕಷ್ಟೇ ಸೀಮಿತವಾಗಿಲ್ಲ, ಅಶೋಕ ಚಕ್ರವರ್ತಿ, 12ನೇ ಶತಮಾಶನದ ವೀರ ವೀರಾಗಿಣಿ ಅಕ್ಕಮಹಾದೇವಿ, 14ನೇ ಶತಮಾನದ ದಾಸಶ್ರೇಷ್ಟ ಪುರಂದರದಾಸರು ಸಹ ಆರ್ಯವೈಶ್ಯರೆ. ದೇಶದ ಖ್ಯಾತ ಉದ್ಯಮಿಗಳಾದ ಟಾಟಾ, ಬಿರ್ಲಾ, ರಿಲಾಯನ್ಸ್‌ ಕಂಪೆನಿ ಅಂಬಾನಿ ಒಡೆಯರು ಸಹ ಆರ್ಯವೈಶ್ಯರೇ. ಯಾವುದೇ ಕೆಲಸ ಕೀಳೆಂದು ಭಾವಿಸದೇ ದುಡಿದರೆ ಜೀವನದಲ್ಲಿ ಶಾಂತಿ ನೆಮ್ಮದಿ ಸಿಗಲು ಸಾಧ್ಯ’ ಎಂದರು.

ನಾಗರಾಜ ರಘೋಜಿ ಮಾತನಾಡಿದರು. ಆರ್ಯವೈಶ್ಯ ಸಮಾಜ ತಾಲ್ಲೂಕು ಘಟಕ ಅಧ್ಯಕ್ಷ ಡಾ.ವಿ.ಆರ್‌.ಚಿದ್ರಿ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ, ಪ್ರೋತ್ಸಾಹಿಸಲಾಯಿತು.ಮಾಣಿಕಪ್ಪ ಆರ್‌.ಗಾದಾ, ಸಂಧ್ಯಾರಾಣಿ ರಘೋಜಿ, ರೋಹಿಣಿ ವಿ.ತಾಡಪತ್ರಿ, ನರೋತ್ತಮ ವಿ.ಉದಗಿರೆ, ದತ್ತಪ್ಪ ಜಾಜಿ, ನಾರಾಯಣರಾವ್‌ ಜಾಜಿ, ಪ್ರೇಮ ಜಾಜಿ, ಪ್ರಣಾವತಿ, ರಾಜಶ್ರಿ, ಅಶೋಕ ಡಿ.ಜಾಜಿ ಪ್ರಭು ಜಾಜಿ, ದತ್ತಾತ್ರಯ ಹಣಕುಣಿ, ಡಾ.ಚೈತ್ರಾನಂದ ಗಾದಾಮ, ವೆಂಕಟೇಶ ಜಾಜಿ ಇದ್ದರು.

ಜಯಶ್ರಿ ಪ್ರಾರ್ಥಿಸಿದರು. ಲಕ್ಷ್ಮಣರಾವ್‌ ಹಣಕುಣಿ ಸ್ವಾಗತಿಸಿದರು. ನಾರಾಯಣರಾವ್‌ ಚಿದ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಖಾ ಉಪ್ಪಲ್ಲಿ ನಿರೂಪಿಸಿದರು. ಮನೋಜ ಬುನ್ನಾ ವಂದಿಸಿದರು. ಪಟ್ಟಣದಲ್ಲಿ ವಾಸವಿ ಮಾತೆ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.

**
ಆರ್ಯವೈಶ್ಯ ಸಮಾಜ ಪ್ರಗತಿ ಪಥದಲ್ಲಿದೆ. ವ್ಯಾಪಾರ ಜತೆಗೆ ಶಿಕ್ಷಣ ಕ್ಷೇತ್ರದಲ್ಲೂ ನಮ್ಮವರು ನಿರೀಕ್ಷೆಗೆ ಮೀರಿದ ಸಾಧನೆ ಮಾಡಿದ್ದಾರೆ. ಶೇ 25ರಷ್ಟಿರುವ ಸಮುದಾಯದ ಬಡವರ ಪ್ರಗತಿ ಅಗತ್ಯವಿದೆ
– ಡಾ.ವಿ.ಆರ್‌.ಚಿದ್ರಿ, ತಾಲ್ಲೂಕು ಆರ್ಯವೈಶ್ಯ ಸಮಾಜ, ಅಧ್ಯಕ್ಷ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.