ADVERTISEMENT

ಈಸ್ಟರ್‌ ಹಬ್ಬ: ಸಾಮೂಹಿಕ ಪ್ರಾರ್ಥನೆ

ಶ್ರದ್ಧಾ, ಭಕ್ತಿಯ ಬೆಳಕಿನ ಹಬ್ಬ: ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 5:27 IST
Last Updated 17 ಏಪ್ರಿಲ್ 2017, 5:27 IST
ಬೀದರ್: ಈಸ್ಟರ್‌ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭಾನುವಾರ ಕ್ರೈಸ್ತರು ಶ್ರದ್ಧಾ, ಭಕ್ತಿಯಿಂದ ಆಚರಿಸಿದರು.
 
ಈಸ್ಟರ್‌ ಹಬ್ಬ ಪ್ರಯುಕ್ತ ನಗರದ ಮಂಗಲಪೇಟ್‌ನ ಸೇಂಟ್‌ ಪೌಲ್ ಮೆಥೋಡಿಸ್ಟ್‌ ಚರ್ಚ್‌ನ ಸಮೀಪದ ಮಿರ್ಜಾಪುರ ಗವಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು.
 
ಕ್ರೈಸ್ತರು ಬೆಳಿಗ್ಗೆ 5.30 ಗಂಟೆಗೆ ಮಿರ್ಜಾಪುರ ಗವಿ ಆವರಣದಲ್ಲಿ ಸೇರಿದರು. ಸುಮಾರು ಮೂರು ಗಂಟೆಗಳ ಕಾಲ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಸಾವಿರಾರೂ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಸಾಮೂಹಿಕ ಪ್ರಾರ್ಥನೆ ಬಳಿಕ ಸೇಂಟ್‌ ಪೌಲ್‌ ಮೆಥೋಡಿಸ್ಟ್‌ ಚರ್ಚ್‌ನ ಜಿಲ್ಲಾ ಮೇಲ್ವಿಚಾರಕ ಎ. ಸಿಮಿಯೋನ್‌ ಅವರು ದೈವ ಸಂದೇಶ ನೀಡಿದರು.
 
ರೆವರೆಂಡ್‌ ಇ. ಸುನಂದಕುಮಾರ, ರೆವರೆಂಡ್‌ ಆನಂದ ಹೊಸೂರ, ರೆವರೆಂಡ್‌ ಇ. ಸುಂದರರಾಜ್‌, ಎಸ್‌.ಎಸ್‌. ತುಕಾರಾಮ ಇದ್ದರು.
 
ಹುಮನಾಬಾದ್ ವರದಿ: ಏಸುಕ್ರಿಸ್ತನ ಪುನರ್ಜನ್ಮದ ಪ್ರತೀಕದ ಈಸ್ಟರ್‌ ಸಂಡೆ (ಬೆಳಕಿನ ಹಬ್ಬ)ವನ್ನು ಪಟ್ಟಣದ ಸೀಮೋನ್ಸ್‌ ಮೆಥೊಡಿಸ್ಟ್‌ ಚರ್ಚ್‌ನಲ್ಲಿ ಭಾನುವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. 
 
ಸಭಾ ಪಾಲಕ ರೆವರೆಂಡ್‌ ಫ್ರಾನ್ಸಿಸ್‌ ಜಯವಂತ ಅವರ ನೇತೃತ್ವದಲ್ಲಿ ಕ್ರೈಸ್ತರು ದೀಪ ಬೆಳಗಿಸುವ ಮೂಲಕ ಭಕ್ತಿ ನಮನ ಸಲ್ಲಿಸಿದರು. ನಂತರ ಸಭಾ ಪಾಲಕ ಜಯವಂತ ಏಸುಕ್ರಿಸ್ತ ಸಿಲುಬೆಗೇರಿದ ನಂತರ ಕೊಟ್ಟ ವಾಣಿಯಂತೆ ಮೂರು ದಿನಗಳಲ್ಲಿ ಜನ್ಮಪಡೆದ ಕುರಿತು ಸಂದೇಶ ವಾಚಿಸಿದರು. ಏಶಪ್ಪ ತಂಡದವರು ಭಜನೆ ಮೂಲಕ ದೇವರಿಗೆ ಪಾರ್ಥನೆ ಸಲ್ಲಿಸಿದರು. 
 
ಪ್ರಭುದಾಸ ಹೊಸಮನಿ, ಶಾಮವೆಲ್‌, ವೀರಣ್ಣ ದರ್ಗೆ, ಯಡ್ವರ್ಡ್‌, ಅಶೋಕ ಪಿ.ಹೊಸಮನಿ ಇದ್ದರು. ಬೆಳಗಿನ ಜಾವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳಿಂದ ವೃದ್ಧರವರೆಗಿನ 500ಕ್ಕೂ ಅಧಿಕ ಜನರು ಭಾಗವಹಿಸಿದ್ದರು. 
 
ಭಾಲ್ಕಿ ವರದಿ: ಏಸು ಜನರಿಗಾಗಿ ಪ್ರಾಣತ್ಯಾಗ ಮಾಡಿ ಎಲ್ಲರಿಗೂ ಆದರ್ಶ ಮಾರ್ಗ ತೋರಿದ್ದರು ಎಂದು ಹುಲಸೂರ ಸರ್ಕಾರಿ ಕಾಲೇಜಿನ ಉಪನ್ಯಾಸಕ ಸುಂದರ್‌ರಾಜ್‌ ಹೇಳಿದರು.
 
ಪಟ್ಟಣದ ರೈಲ್ವೆ ಸ್ಟೇಷನ್ ಎದುರಗಡೆಯ ಪೇಥ್ ಎ.ಜಿ. ಚರ್ಚ್‌ನಲ್ಲಿ ಭಾನುವಾರ ಬೆಳಿಗ್ಗೆ ಏಸುಕ್ರಿಸ್ತರ ಪುನರುತ್ಥಾನದ ನಿಮಿತ್ತ ಹಮ್ಮಿಕೊಂಡಿದ್ದ ಬೆಳಕಿನ ಹಬ್ಬದ ಆರಾಧನೆಯಲ್ಲಿ ಮಾತನಾಡಿದರು.
 
ಜಗತ್ತಿನ ಕರುಣಾಮಯಿ, ಮಹಾನ್ ಪುರುಷ ಏಸು ಮರಣಹೊಂದಿದ ಮೂರು ದಿನಗಳಲ್ಲಿ ಪುನರುತ್ಥಾನವಾದ ದಿನವನ್ನು ಬೆಳಕಿನ ಹಬ್ಬವನ್ನಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.
 
ಬದುಕಿನಲ್ಲಿ ಉತ್ತಮ ನಡೆ-ನುಡಿ ಮೈಗೂಡಿಸಿಕೊಂಡು ಬಾಳಿದರೆ ನಾವು ದೈವಿಕೃಪೆಗೆ ಪಾತ್ರರಾಗುತ್ತೇವೆ. ಜೀವನದಲ್ಲಿ ಎದುರಾಗುವ ಕಷ್ಟ-ಸುಖಗಳನ್ನು ದೈವಿಇಚ್ಛೆ ಎಂದು ಅರಿತು ಶಾಂತಿ, ತಾಳ್ಮೆಯಿಂದ ಬದುಕಬೇಕು ಎಂದು ಸಲಹೆ ನೀಡಿದರು.
 
ಚರ್ಚ್‌ನ ಸಭಾಪಾಲಕ ರಾಜಕುಮಾರ ಬೋರಾಳೆ ಮಾತನಾಡಿ, ಪ್ರಪಂಚದ ಎಲ್ಲ ಜೀವರಾಶಿಗಳೊಂದಿಗೆ ಪ್ರೀತಿಯಿಂದ ಇರಬೇಕು ಎಂಬುದು ಏಸುವಿನ ತತ್ವವಾಗಿದೆ. ಬದುಕಿನ ಜಂಜಾಟದಿಂದ ಮುಕ್ತವಾಗಿರಲು ಎಲ್ಲರೂ ಏಸುವಿನ ತತ್ವ, ಆದರ್ಶಗಳಂತೆ ಬಾಳುವುದು ಇಂದಿನ ಜರೂರು ಎಂದರು. ಕ್ರೈಸ್ತರು ಶುಭ್ರ, ಬಿಳಿ ಬಣ್ಣದ ಬಟ್ಟೆ ಧರಿಸಿಕೊಂಡು ಆರಾಧನೆಯಲ್ಲಿ ಪಾಲ್ಗೊಂಡಿದ್ದರು.
 
ಚರ್ಚ್‌ನ ಪ್ರಮುಖರಾದ ಸುಧಾಕರ ಸಾಗರ, ದೇವಿದಾಸ ರೇಷ್ಮೆ, ರಾಜಕುಮಾರ ಎಂ.ಪಿ, ಸತೀಶ ಮಾಳಕೆ, ಶಂಕರ, ಮುರಳೀಧರ ಅರ್ಜುನ, ದತ್ತಪ್ಪಾ ಶಿಂಧೆ, ಸಂಜು ಮೇತ್ರೆ, ಎನ್. ಬಿ. ರಾಜಕುಮಾರ, ಧನರಾಜ್‌ ಸ್ಟೀಫನ್, ಕಾಶೀಬಾಯಿ, ಚಂದ್ರಮ್ಮಾ, ಸುನೀತಾ, ಸೇಲ್ವಾರಾಣಿ, ಅಲ್ಮಾ, ಸುಮಂಗಲಾ ಇದ್ದರು. ಚರ್ಚ್‌ನ ಪ್ರಧಾನ ಕಾರ್ಯದರ್ಶಿ ಜೀವನ ಬೇಂದ್ರೆ ನಿರೂಪಿಸಿ, ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.