ADVERTISEMENT

‘ಎಲ್ಲಾ ತಾಲ್ಲೂಕುಗಳಲ್ಲಿ ಕ್ಷಿಪ್ರ ಆರೋಗ್ಯ ಪಡೆ’

ಬಿಸಿಲಿನ ಝಳ, ನೀರಿನಿಂದ ಹರಡುವ ರೋಗ ಮುನ್ನೆಚ್ಚರಿಕೆ ವಹಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 5:31 IST
Last Updated 17 ಏಪ್ರಿಲ್ 2017, 5:31 IST
‘ಎಲ್ಲಾ ತಾಲ್ಲೂಕುಗಳಲ್ಲಿ ಕ್ಷಿಪ್ರ ಆರೋಗ್ಯ ಪಡೆ’
‘ಎಲ್ಲಾ ತಾಲ್ಲೂಕುಗಳಲ್ಲಿ ಕ್ಷಿಪ್ರ ಆರೋಗ್ಯ ಪಡೆ’   
ಬೀದರ್: ಬೇಸಿಗೆ ಬಿಸಿಲಿನ ತಾಪ ಹೆಚ್ಚಾಗಿದೆ. ಜಿಲ್ಲೆಯ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿರುವುದು ಕಂಡುಬಂದಿದೆ.

ಹೀಗಾಗಿ ನೀರಿನಿಂದ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆರ್‌. ಸೆಲ್ವಮಣಿ ತಿಳಿಸಿದ್ದಾರೆ.
 
ಕುಡಿಯುವ ನೀರಿನ ಸುರಕ್ಷತೆಗಾಗಿ ಸಾರ್ವಜನಿಕರು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಸಿದ್ದಾರೆ.
 
ಬಿಸಿಲಿನ ಝಳದಿಂದ ಅಸ್ತವ್ಯಸ್ಥಗೊಂಡ ವ್ಯಕ್ತಿಗಳಿಗೆ ಚಿಕಿತ್ಸೆ ಹಾಗೂ ಸಲಹೆ ಸೂಚನೆ ನೀಡಲು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕ್ಷಿಪ್ರ ಆರೋಗ್ಯ ಪಡೆ ರಚನೆ ಮಾಡಲಾಗಿದೆ. ಅಗತ್ಯವಿದ್ದಲ್ಲಿ ನೆರವು ಪಡೆಯಬಹುದು ಎಂದು ತಿಳಿಸಿದ್ದಾರೆ.
 
ಮನೆಯಲ್ಲಿ ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡಬೇಕು, ನೀರಿನ ಮೂಲಗಳ ಹತ್ತಿರ ಇರುವ ತಿಪ್ಪೆ ಗುಂಡಿಗಳನ್ನು ಸ್ಥಳಾಂತರಿಸಬೇಕು, ನೀರು ಸರಬರಾಜು ಆಗುವ ಪೈಪ್‌ ಸೋರಿಕೆ ಆಗುತ್ತಿದ್ದಲ್ಲಿ ಕೂಡಲೇ ದುರಸ್ತಿ ಅಥವಾ ಬದಲಾಯಿಸಬೇಕು.
 
ಕುಡಿಯುವ ನೀರಿನ ಮೂಲದ ಸುತ್ತಮುತ್ತ ಪಾತ್ರೆ ಹಾಗೂ ಬಟ್ಟೆ ತೊಳೆಯಬಾರದು. ಬಾವಿ, ಮೇಲ್ಮಟ್ಟದ ಟ್ಯಾಂಕ್‌, ಕಿರು ನೀರು ಸರಬರಾಜು ಟ್ಯಾಂಕ್‌ಗಳು ಗುಣಮಟ್ಟದ ಬ್ಲೀಚಿಂಗ್ ಪುಡಿಯಿಂದ ಕ್ಲೋರಿನೇಷನ್ ಮಾಡಬೇಕು ಎಂದು ತಿಳಿಸಿದ್ದಾರೆ.
 
ನೀರಿನ ಸಂಗ್ರಹಣೆ ಮಾಡುವ ಮೇಲ್ಮಟ್ಟದ ತೊಟ್ಟಿ ಮತ್ತು ಮಿನಿ ವಾಟರ್ ತೊಟ್ಟಿಗಳನ್ನು ಕಡ್ಡಾಯವಾಗಿ 7 ದಿನಗಳಿಗೊಮ್ಮೆ ತೊಳೆದು ಸ್ವಚ್ಛಗೊಳಿಸಬೇಕು. ಬಾವಿ, ಕೊಳವೆಬಾವಿಗಳ ಬಳಿ ಕನಿಷ್ಠ 100 ಅಡಿ ಸುತ್ತಮುತ್ತ ತಿಪ್ಪೆ ಗುಂಡಿ ಇರದಂತೆ ನೋಡಿಕೊಳ್ಳಬೇಕು. ಮಲ ವಿಸರ್ಜನೆ ಮಾಡುವುದನ್ನು ಕಡ್ಡಾಯ ನಿಷೇಧಿಸಬೇಕು ಹೇಳಿದರು.
 
ಸಾರ್ವಜನಿಕರು ಮನೆಯ ಹೊರಗಡೆ ಸೇವನೆ ಮಾಡುವ ಆಹಾರ ಮತ್ತು ತಂಪು ಪಾನೀಯಗಳ ಗುಣಮಟ್ಟ ಹಾಗೂ ತಯಾರು ಮಾಡುವ ಪರಿಸರದ ಬಗ್ಗೆ ಗಮನ ಹರಿಸಬೇಕು. ರಸ್ತೆ ಬದಿಯಲ್ಲಿ ಮಾರುವ ತೆರೆದಿಟ್ಟ ಆಹಾರ ಪದಾರ್ಥಗಳನ್ನು ಹಾಗೂ ಕತ್ತರಿಸಿದ ಹಣ್ಣು ಹಂಪಲು ಸೇವನೆ ಮಾಡಬಾರದು ಎಂದು ಹೇಳಿದ್ದಾರೆ. 
 
ಬಿಸಿಲಿನಿಂದ ವ್ಯಕ್ತಿ ತೊದಲು ಮಾತು ಅಥವಾ ಅರ್ಥರಹಿತವಾಗಿ ಬಡಬಡಿಸಿದಲ್ಲಿ ಕೂಡಲೇ ನೆರಳಿನ ಪ್ರದೇಶಕ್ಕೆ ಕರೆದೊಯ್ದು ಕೆಳಗೆ ಮಲಗಿಸಿ, ಕಾಲುಗಳನ್ನು ಮೇಲಕ್ಕೆತ್ತಿ, ಹಣೆ, ಕತ್ತು, ಪಾದ ತೊಡೆಯ ಸಂದುಗಳನ್ನು ಒದ್ದೆ ಬಟ್ಟೆಯಿಂದ ಒರೆಸಬೇಕು. ಬಳಿಕ ಸ್ವಲ್ಪ ಸಕ್ಕರೆ, ಉಪ್ಪು ಬೆರೆತ ನೀರನ್ನು ನಿಧಾನವಾಗಿ ಕುಡಿಸಬೇಕು. ಹತ್ತಿರದ ವೈದ್ಯರನ್ನು ಕರೆಸಬಹುದು ಅಥವಾ 108ಕ್ಕೆ ಕರೆ ಮಾಡಬಹುದು ಎಂದು ತಿಳಿಸಿದ್ದಾರೆ.
 
ಕ್ಷಿಪ್ರ ಆರೋಗ್ಯ ಪಡೆ ಅಧಿಕಾರಿಗಳ ದೂರವಾಣಿ ಸಂಖ್ಯೆ ಹೀಗಿದೆ: ಜಿಲ್ಲಾ ಕ್ಷಿಪ್ರ ಆರೋಗ್ಯ ಪಡೆಯ ಮುಖ್ಯಸ್ಥ ಡಾ. ಶಿವಶಂಕರ.ಬಿ (9449843246), ಬೀದರ್ ತಾಲ್ಲೂಕು– ಡಾ. ಪ್ರವೀಣ ಹೂಗಾರ (7026186620), ಔರಾದ್‌– ಡಾ. ಮಹೇಶ ಬಿರಾದಾರ (9448568187), ಭಾಲ್ಕಿ– ಡಾ. ಶರಣಯ್ಯ ಸ್ವಾಮಿ (9448100173), ಹುಮನಾಬಾದ್– ಡಾ. ಅಶೋಕ ಮೈಲಾರೆ (9448349647), ಬಸವಕಲ್ಯಾಣ– ಡಾ. ಶರಣಪ್ಪ ಮುಡಬಿ (9986936986) ಅವರನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.
***
ಬೇಸಿಗೆಯಲ್ಲಿ ವಹಿಸಬೇಕಾದ ಕಾಳಜಿ
lಸಡಿಲವಾದ, ತೆಳು ಬಣ್ಣದ ಹತ್ತಿಯ ಬಟ್ಟೆ ಧರಿಸಬೇಕು.
lಮನೆ ಹೊರಗಡೆ ಹೋದಾಗ ಕಡ್ಡಾಯವಾಗಿ ಛತ್ರಿ (ಕೊಡೆ) ಬಳಸಬೇಕು.
lಸಾಧ್ಯವಾದಷ್ಟು ಮೇಲಿಂದ ಮೇಲೆ ಶುದ್ಧವಾದ ನೀರನ್ನು ಕುಡಿಯಬೇಕು.
lಆಗಾಗ ಉಪ್ಪು ಸಕ್ಕರೆ ಮಿಶ್ರಿತ ನೀರನ್ನು ಕುಡಿಯಬೇಕು. ಹಣ್ಣಿನ ರಸ,ಪಾನಕಗಳನ್ನು ಕುಡಿಯಬೇಕು. ದ್ರವ ಆಹಾರ ಸೇವಿಬೇಕು.
lಹತ್ತಿಯ ನುಣುಪಾದ ಬಟ್ಟೆ / ಟಿಶ್ಯೂ ಕರವಸ್ತ್ರದಿಂದ ಬೆವರನ್ನು ಒರೆಸಿಕೊಳ್ಳಬೇಕು.
lನೀರು, ಮಜ್ಜಿಗೆ, ಎಳನೀರು, ಕಲ್ಲಂಗಡಿ ಸೇವನೆ ಅತ್ಯಂತ ಉಪಯುಕ್ತ.

ಬೇಸಿಗೆಯಲ್ಲಿ ಇವು ಹಾನಿಕರ
lಬಿಗಿಯಾದ ಗಾಢ ಬಣ್ಣದ ಬಟ್ಟೆ ಧರಿಸಬಾರದು.
lಕುಷನ್ ಯುಕ್ತ ಕುರ್ಚಿಯಲ್ಲಿ ಕೂಡಬೇಡಿ.
lಬೇವರನ್ನು ಒರೆಸಲು ಒರಟಾದ ಬಟ್ಟೆಯನ್ನು ಉಪಯೋಗಿಸಬಾರದು.
lಕಾಫಿ, ಟೀ ಅತಿ ಸಕ್ಕರೆ ಅಂಶವುಳ್ಳ ಪಾನೀಯನ್ನು ಹೆಚ್ಚಾಗಿ ಸೇವಿಸಬಾರದು.
lಬಿಸಿಯಾದ ಮಸಾಲೆಯುಕ್ತ ಆಹಾರ ತಿನ್ನಬೇಡಿ.
lಬಿಗಿಯಾದ ಗಾಳಿಯಾಡದ ಪಾದರಕ್ಷೆ/ ಶೂ ಧರಿಸಬೇಡಿ.
lಮಾಂಸಾಹಾರ ಸೇವನೆ ಕಡಿಮೆ ಮಾಡಿ ಮತ್ತು ಮದ್ಯಪಾನ ನಿಷೇಧಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.