ADVERTISEMENT

‘ಕನ್ನಡ ಭಾಷೆ ಬೆಳೆಸುವ ಕೆಲಸ ವೇದಿಕೆಗೆ ಸೀಮಿತವಾಗದಿರಲಿ’

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2017, 9:20 IST
Last Updated 3 ಮಾರ್ಚ್ 2017, 9:20 IST

ಔರಾದ್: ಕನ್ನಡ ಕಟ್ಟುವ ಕೆಲಸ ಸಮ್ಮೇಳನ ಮತ್ತು ವೇದಿಕೆಗೆ ಮಾತ್ರ  ಸೀಮಿತವಾಗಬಾರದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಡಾ.ರಾಜೇಂದ್ರ ಯರನಾಳೆ ಹೇಳಿದರು.

ತಾಲ್ಲೂಕಿನ ಠಾಣಾಕುಶನೂರಿನಲ್ಲಿ ಬುಧವಾರ ತಾಲ್ಲೂಕು ಮಟ್ಟದ 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಅವರು, ಕನ್ನಡ ಬೆಳೆಸುವ ಹೆಚ್ಚಿನ ಜವಾಬ್ದಾರಿ ಯುವಕರು ಮತ್ತು ಶಿಕ್ಷಕರ ಮೇಲಿದೆ. ಕನ್ನಡ ಶಾಲೆಗಳು ಉಳಿಯಲು ಶಿಕ್ಷಕರು ಕೆಲಸ ಮಾಡಬೇಕು. ಕನ್ನಡ ಶಾಲೆಗಳ ಬಗ್ಗೆ ಇರುವ ನಕಾರಾತ್ಮಕ ಭಾವನೆ ಹೋಗಲಾಡಿಸಬೇಕು ಎಂದು ಸಲಹೆ ನೀಡಿದರು.

ಉಪನ್ಯಾಸಕಿ ರತ್ನಾ ಪಾಟೀಲ ಮಾತನಾಡಿ, ಈಗಲೂ ಗ್ರಾಮೀಣ ಭಾಗದಲ್ಲಿ ಕನ್ನಡ ಜೀವಂತ ಇದೆ. ಕನ್ನಡ ಉಳಿಸುವ ಕೆಲಸ ಪಟ್ಟಣ ಪ್ರದೇಶದಲ್ಲಿ ಆಗಬೇಕಿದೆ ಎಂದು ಹೇಳಿದರು.

ಹೆಡಗಾಪುರ ಶಿವಲಿಂಗ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಶಂಭುಲಿಂಗ ಶಿವಾಚಾರ್ಯರು, ಸಮ್ಮೇಳನಾಧ್ಯಕ್ಷ ಬಾ.ನಾ. ಸೋಲಾಪುರೆ, ಕಸಾಪ ಜಿಲ್ಲಾ ಅಧ್ಯಕ್ಷ ಸುರೇಶ ಚನಶೆಟ್ಟಿ, ತಾಲ್ಲೂಕು ಅಧ್ಯಕ್ಷ ಜಗನ್ನಾಥ ಮೂಲಗೆ, ಪ್ರಶಾಂತ ಮಠಪತಿ, ಬಸವರಾಜ ಬಲ್ಲೂರ, ಮಾಜಿ ಶಾಸಕ ಗುಂಡಪ್ಪ ವಕೀಲ, ಸುಧಾಕರ ಕೊಳ್ಳೂರ್, ಸೂರ್ಯಕಾಂತ ಸಿಂಗೆ, ಮಲ್ಲಿಕಾರ್ಜುನ ಟಂಕಸಾಲೆ  ಇದ್ದರು. ಶಾಲಿವಾನ ಉದಗಿರೆ ಸ್ವಾಗತಿಸಿದರು. ಬಾಲಾಜಿ ಅಮರವಾಡಿ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ಬೇಲೂರೆ ವಂದಿಸಿದರು.

ನಿರ್ಣಯ ಮಂಡನೆ: ಸಮಾರೋಪ ಮುನ್ನ ಬಹಿರಂಗ ಅಧಿವೇಶನದಲ್ಲಿ ಸಮ್ಮೇಳನದ ಆರು ಪ್ರಮುಖ ನಿರ್ಣಯ ಮಂಡಿಸಿ ಅಂಗೀಕರಿಸಲಾಯಿತು. ಪ್ರಾಥಮಿಕ ಹಂತದಲ್ಲಿ ಮಾತೃಭಾಷೆ ಮಾಧ್ಯಮ ಕಡ್ಡಾಯವಾಗಬೇಕು.

ಬೀದರ್–ನಾಂದೇಡ್ ಹೊಸ ರೈಲು ಮಾರ್ಗ, ಠಾಣಾಕುಶನೂರ ವಿರಕ್ತ ಮಠದ ಜೀರ್ಣೋದ್ಧಾರ, ಗಡಿ ಭಾಗದ ಎಲ್ಲ ಊರು ಮತ್ತು ತಾಂಡಾಗಳಲ್ಲಿ ಕನ್ನಡ ಮಾಧ್ಯಮ ಶಾಲೆ ಆರಂಭಿಸಬೇಕು. ತಾಲ್ಲೂಕಿನ ಕೆರೆಗಳ ಜೀರ್ಣೋದ್ಧಾರ, ನೆಕಾರಿಕೆ, ಕುಂಬಾರಿಕೆಯಂತಹ ಗ್ರಾಮೀಣ ಗುಡಿ ಕೈಗಾರಿಕೆ ಪ್ರೋತ್ಸಾಹಿಸಲು ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.