ADVERTISEMENT

‘ಕರ್ನಾಟಕ ದರ್ಶನ’ ಜಾಥಾ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 5:54 IST
Last Updated 12 ಜುಲೈ 2017, 5:54 IST

ಬೀದರ್: ‘ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ) ಸಿಬ್ಬಂದಿಯಲ್ಲಿ ಏಕತೆ ಹಾಗೂ ಆರೋಗ್ಯ ಜಾಗೃತಿ ಮೂಡಿಸುವ ದಿಸೆಯಲ್ಲಿ ಜುಲೈ 12 ರಿಂದ 25ರವರೆಗೆ  ಕರ್ನಾಟಕ ದರ್ಶನ ಸೈಕಲ್‌ ಜಾಥಾ ನಡೆಯಲಿದೆ’ ಎಂದು ಕೆಎಸ್‌ಆರ್‌ಪಿ ಎಡಿಜಿಪಿ ಭಾಸ್ಕರ್‌ರಾವ್ ತಿಳಿಸಿದರು.

ಇಲ್ಲಿಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಾಥಾದಲ್ಲಿ ನಾಲ್ವರು ಅಧಿಕಾರಿಗಳು ಸೇರಿ ಒಟ್ಟು 60 ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ. ಬೀದರ್‌ನಿಂದ ಆರಂಭವಾಗುವ ಜಾಥಾ ಕಲಬುರ್ಗಿ, ವಿಜಯಪುರ, ಬೆಳಗಾವಿ, ಗದಗ, ಮುನಿರಾಬಾದ್, ಶಿಗ್ಗಾವಿ, ಶಿವಮೊಗ್ಗ, ಮಂಗಳೂರು, ಹಾಸನ, ಮೈಸೂರು ಮಾರ್ಗವಾಗಿ ಸಂಚರಿಸಿ ಬೆಂಗಳೂರು ತಲುಪಿ ಮುಕ್ತಾಯವಾಗಲಿದೆ’ ಎಂದು ಹೇಳಿದರು.

‘ಕೆಎಸ್‌ಆರ್‌ಪಿ ಸಿಬ್ಬಂದಿ ಪ್ರತಿಯೊಂದು ಬಟಾಲಿಯನ್‌ಗೆ ಭೇಟಿ ಕೊಡಲಿರುವುದರಿಂದ ಅವರಲ್ಲಿ  ನಾವೆಲ್ಲ ಒಂದೇ ಎನ್ನುವ ಭಾವನೆ ಮೂಡಲಿದೆ. ಜಾಥಾದ ಸಂದರ್ಭದಲ್ಲಿ ರಾಜ್ಯದ ಐತಿಹಾಸಿಕ ತಾಣಗಳನ್ನು ವೀಕ್ಷಿಸಲು ಸಾಧ್ಯವಾಗಲಿದೆ. ಹೀಗಾಗಿ ಸೈಕಲ್‌ ಜಾಥಾಕ್ಕೆ ‘ಕರ್ನಾಟಕ ದರ್ಶನ’ ಎಂದು ಹೆಸರಿಡಲಾಗಿದೆ. ಸಿಬ್ಬಂದಿ ನಿತ್ಯ 115ರಿಂದ 220 ಕಿ.ಮೀ ವರೆಗೆ ಕ್ರಮಿಸಲಿದ್ದಾರೆ. 14 ದಿನಗಳಲ್ಲಿ 1,750 ಕಿ.ಮೀ ಕ್ರಮಿಸಿ  ಯಾತ್ರೆ ಪೂರ್ಣಗೊಳಿಸಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಪೊಲೀಸ್‌ ಸಿಬ್ಬಂದಿ ಒತ್ತಡದಲ್ಲೇ ಕೆಲಸ ಮಾಡುವ ಸ್ಥಿತಿ ಇದೆ. ಮಾನಸಿಕ ಒತ್ತಡದಿಂದ ಹೊರ ಬರಲು ಇಂತಹ ಜಾಥಾಗಳು ನೆರವಾಗಲಿವೆ. ಜಾಥಾ ಮೂಲಕ ಸ್ವಚ್ಛ ಭಾರತ ಅಭಿಯಾನ, ಬಯಲು ಶೌಚ ಹಾಗೂ ಪರಿಸರ ಮಾಲಿನ್ಯದಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗೆಗೂ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲಾಗುವುದು’ ಎಂದು ಹೇಳಿದರು.

‘ಜಿಲ್ಲಾ ಕೇಂದ್ರಗಳಲ್ಲಿ ಸಸಿಗಳನ್ನು ನೆಡಲಾಗುವುದು. ಪರಿಸರ ಸಮತೋಲನ ಕಾಪಾಡಲು ಪ್ರತಿಯೊಬ್ಬರು ಸಸಿ ನೆಟ್ಟು ಬೆಳೆಸುವಂತೆ ಮನವರಿಕೆ ಮಾಡಲಾಗುವುದು’ ಎಂದು ತಿಳಿಸಿದರು. ‘ಪ್ರತಿ ವರ್ಷ ಸೈಕಲ್‌ ಜಾಥಾ ನಡೆಸಲಾಗುವುದು. ಮುಂದಿನ ವರ್ಷ ಮಹಿಳಾ ಸಿಬ್ಬಂದಿಯನ್ನೂ ಜಾಥಾದಲ್ಲಿ ಸೇರಿಸಿಕೊಳ್ಳಲಾಗುವುದು.

ಪ್ರತಿ ವರ್ಷ ಹೊಸ ವ್ಯಕ್ತಿಗಳನ್ನು ಆಯ್ಕೆ ಮಾಡಿ ಕರ್ನಾಟಕ ದರ್ಶನ ಮಾಡಲು ಅವಕಾಶ ಕಲ್ಪಿಸಲಾಗುವುದು. ಆಸ್ಟ್ರಿಯಾದಿಂದ ಫ್ರಾನ್ಸ್‌ ವರೆಗೆ ನಡೆಯುವ ಟೂರ್‌ ದಿ ಫ್ರಾನ್ಸ್‌ ಸೈಕಲ್‌ ರ್‌್ಯಾಲಿಯಿಂದ ಪ್ರೇರಣೆಗೊಂಡು ಕರ್ನಾಟಕ ದರ್ಶನ ಸೈಕಲ್‌ ಜಾಥಾ ಆಯೋಜಿಸಲಾಗಿದೆ’ ಎಂದು ಹೇಳಿದರು.ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ ನಿಕಮ್, ಕೆಎಸ್‌ಆರ್‌ಪಿ 6ನೇ ಪಡೆ ಕಮಾಂಡೆಂಟ್ ಬಸವರಾಜ ಜಿಳ್ಳೆ ಇದ್ದರು.

* * 

ಸೈಕಲ್‌ ಜಾಥಾದ ಸಂದರ್ಭದಲ್ಲಿ ಬಯಲು ಶೌಚದಿಂದಾಗಿ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ನೀಡಲಾಗುವುದು.
ಭಾಸ್ಕರ್‌ರಾವ್, ಕೆಎಸ್‌ಆರ್‌ಪಿ ಎಡಿಜಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.