ADVERTISEMENT

ಕಲ್ಲಂಗಡಿ ಬೇಸಾಯ: ರೈತರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 9:11 IST
Last Updated 17 ನವೆಂಬರ್ 2017, 9:11 IST

ಬೀದರ್‌: ಕಲ್ಲಂಗಡಿ ಬೆಳೆಯಲು ಸದ್ಯ ಸಕಾಲ ಇದೆ. ರೈತರು ವೈಜ್ಞಾನಿಕ ಬೇಸಾಯ  ಕ್ರಮಗಳನ್ನು ಅನುಸರಿಸಿದರೆ ಕಲ್ಲಂಗಡಿಯಲ್ಲಿ ನಿರೀಕ್ಷೆಗೂ ಅಧಿಕ ಆದಾಯ ಗಳಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಾವಗೆ ತಿಳಿಸಿದ್ದಾರೆ. ಟರ್ಬೂಜ್‌, ವಾಟರ್‌ಮೆಲಾನ್ ಎಂದು ಕರೆಯಲಾಗುವ ಕಲ್ಲಂಗಡಿಯನ್ನು ಈಗ ಜಿಲ್ಲೆಯಲ್ಲೂ ಹೆಚ್ಚು ಬೆಳೆಯಲಾಗುತ್ತಿದೆ ಎಂದು ಹೇಳಿದ್ದಾರೆ.

ಜೇಡಿ ಮಣ್ಣು ಸೂಕ್ತ: ಕಲ್ಲಂಗಡಿ ಬೆಳೆಗೆ ನೀರು ಬಸಿದು ಹೋಗುವ ಮರಳು ಮಿಶ್ರಿತ ಜೇಡಿ ಮಣ್ಣು ಸೂಕ್ತ. ನದಿ ತೀರದ ಪ್ರದೇಶದಲ್ಲಿ ಅಧಿಕ ಇಳುವರಿ ಪಡೆಯಬಹುದು. ಕಲ್ಲಂಗಡಿಯನ್ನು ಎಲ್ಲ ಕಾಲದಲ್ಲಿ ಬೆಳೆಯಬಹುದಾದರೂ ನವೆಂಬರ್‌ನಿಂದ ಫೆಬ್ರುವರಿ ವರೆಗಿನ ಅವಧಿಯಲ್ಲಿ ಬೆಳೆಯುವ ಹಣ್ಣುಗಳು ಉತ್ತಮ ಮತ್ತು ರುಚಿಕಟ್ಟಾಗಿರುತ್ತವೆ.

ತಳಿಗಳು: ಅರ್ಕಾಮಾಣಿಕ್ ತಳಿಯ ಬೆಳೆ 100-120 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಹಸಿರು ಪಟ್ಟಿಯ ಕಾಯಿಗಳಾಗಿದ್ದು, 4-6 ಕಿ.ಗ್ರಾಂ. ತೂಕ ಹೊಂದಿರುತ್ತವೆ. ಅರ್ಕಾ ಜ್ಯೋತಿ ತೂಕ 6-8 ಕಿ.ಗ್ರಾಂ. ಇರುತ್ತದೆ. ಅರ್ಕಾ ಮುತ್ತು, ಶುಗರ್‌ ಬೇಬಿ ತಳಿಗಳಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿರುತ್ತದೆ. ಇವು ರೋಗ ನಿರೋಧಕ ಶಕ್ತಿಯನ್ನು ಹೊಂದಿವೆ. ಬಿತ್ತನೆಗೆ ಪ್ರತಿ ಹೆಕ್ಟೇರ್‌ಗೆ 750 ರಿಂದ 1125 ಗ್ರಾಂ. ಬೀಜಗಳು ಬೇಕಾಗುತ್ತವೆ ಎಂದು ತಿಳಿಸಿದ್ದಾರೆ.

ADVERTISEMENT

ಬೇಸಾಯ ಕ್ರಮಗಳು: ಭೂಮಿಯನ್ನು ಸರಿಯಾಗಿ ಉಳುಮೆ ಮಾಡಿ ಹದಗೊಳಿಸಬೇಕು. 2.5 ಮೀಟರ್ ಅಂತರದಲ್ಲಿ ಸಾಲುಗಳನ್ನು ಬಿಡಬೇಕು. ಸಾಲುಗಳಲ್ಲಿ 1 ಮೀಟರ್ ಅಂತರದಲ್ಲಿ ಬೀಜ ನಾಟಿ ಮಾಡುವ ಸ್ಥಳಗಳಲ್ಲಿ ಗುಣಿಗಳನ್ನು ಮಾಡಿ ಹೆಕ್ಟೇರ್‌ಗೆ 25 ಟನ್ ಕೊಟ್ಟಿಗೆ ಗೊಬ್ಬರ ಮತ್ತು 250 ಕಿ.ಗ್ರಾಂ. ಅಮೋನಿಯಂ ಸಲ್ಫೇಟ್, 500 ಕಿ.ಗ್ರಾಂ. ಸುಪರ್ ಫಾಸ್ಫೇಟ್‌ ಮತ್ತು 150 ಕಿ.ಗ್ರಾಂ. ಎಂ.ಓ.ಪಿ. ಗೊಬ್ಬರವನ್ನು ಗುಣಿಗಳಲ್ಲಿ ಹಾಕಿ ಮಣ್ಣಿನಲ್ಲಿ ಬೆರೆಸಬೇಕು. ನಂತರ ಪ್ರತಿ ಗುಣಿಗಳಲ್ಲಿ 3-4 ಬೀಜಗಳನ್ನು ಊರಬೇಕು. ಬಳಿಕ ಮೊಳಕೆ ಬಂದವುಗಳಲ್ಲಿ ಸದೃಢವಾದ ಎರಡು ಸಸಿಗಳನ್ನು ಬಿಟ್ಟು ಉಳಿದ ಸಸಿಗಳನ್ನು ಕಿತ್ತು ಹಾಕಬೇಕು.

ಬೀಜಗಳನ್ನು ಊರಿದ 1 ತಿಂಗಳ ನಂತರ ಮತ್ತೆ 250 ಕಿ.ಗ್ರಾಂ. ಅಮೋನಿಯಂ ಸಲ್ಫೇಟ್ ಗೊಬ್ಬರವನ್ನು ಬೆಳೆಯಿಂದ 15 ಸೆಂ.ಮೀ. ಅಂತರದಲ್ಲಿ 2.5 ಸೆಂ.ಮೀ. ಆಳದಲ್ಲಿ ಕೊಟ್ಟು ಮಣ್ಣು ಮುಚ್ಚಬೇಕು. ನಂತರ ಮುಖ್ಯ ಬಳ್ಳಿಯ ಕುಡಿಗಳನ್ನು 6ನೇ ಗಿಣ್ಣಿನ ನಂತರ ಚಿವುಟಬೇಕು. ಇದರಿಂದ ಹೆಚ್ಚು ಕವಲುಗಳನ್ನು ಬಿಡುತ್ತವೆ.

ಬಳ್ಳಿಯಲ್ಲಿ ಉತ್ತಮವಾದ 3-4 ಕಾಯಿಗಳನ್ನು ಬಿಟ್ಟು ಉಳಿದ ಕಾಯಿಗಳನ್ನು ತೆಗೆಯುವುದರಿಂದ ಉತ್ತಮ ಗಾತ್ರದ ಹಣ್ಣುಗಳನ್ನು ಪಡೆಯಬಹುದು. ಹದ ಅರಿತು ನೀರು ಕೊಡಬೇಕು. ಒಂದು ವೇಳೆ ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ಮತ್ತು ಅನಿಯಮಿತವಾಗಿ ನೀರು ಕೊಟ್ಟರೆ ಕಾಯಿಗಳು ಸೀಳುತ್ತವೆ. ಮಣ್ಣಿನಲ್ಲಿ ಬೋರಾನ್ ಕೊರತೆಯಿಂದಲೂ ಕಾಯಿಗಳು ಸೀಳುವುದುಂಟು. ಕೀಟ, ರೋಗಗಳು ಕಾಣಿಸಿಕೊಂಡರೆ ತಾಲ್ಲೂಕು ತೋಟಗಾರಿಕೆ ಅಧಿಕಾರಿ ಅಥವಾ ತೋಟಗಾರಿಕೆ ವಿಷಯ ತಜ್ಞ ಡಾ.ವಿ.ಎಸ್. ರೇವಣ್ಣವರ್ ಅವರ ಮೊಬೈಲ್ ಸಂಖ್ಯೆ 9482053985ಗೆ ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕರು
ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.