ADVERTISEMENT

ಕೈಗಾರಿಕೆ ತರಬೇತಿ ಪಡೆದವರಿಗೆ ಇಸ್ರೊದಲ್ಲೂ ಅವಕಾಶ

ಚಂದ್ರಕಾಂತ ಮಸಾನಿ
Published 17 ಏಪ್ರಿಲ್ 2017, 7:36 IST
Last Updated 17 ಏಪ್ರಿಲ್ 2017, 7:36 IST
ಕೈಗಾರಿಕೆ ತರಬೇತಿ ಪಡೆದವರಿಗೆ ಇಸ್ರೊದಲ್ಲೂ ಅವಕಾಶ
ಕೈಗಾರಿಕೆ ತರಬೇತಿ ಪಡೆದವರಿಗೆ ಇಸ್ರೊದಲ್ಲೂ ಅವಕಾಶ   
ಬೀದರ್:  ಭವಿಷ್ಯದ ಬದುಕು ರೂಪಿಸಿಕೊಳ್ಳಲು ದೃಢ ನಿರ್ಧಾರ ತೆಗೆದುಕೊಳ್ಳುವ ಪ್ರಮುಖ ಘಟ್ಟ ಎಸ್ಸೆಸ್ಸೆಲ್ಸಿ. ಪ್ರಸ್ತುತ ಎಸ್ಸೆಸ್ಸೆಲ್ಸಿ ನಂತರ ಅನೇಕ ಕೋರ್ಸ್‌ಗಳಿದ್ದರೂ ಅವುಗಳ ಬಗೆಗೆ ಸರಿಯಾದ ತಿಳಿವಳಿಕೆ ಇಲ್ಲದೆ ಗೊಂದಲಕ್ಕೆ ಒಳಗಾಗುವವರೇ ಹೆಚ್ಚು.
 
ಕೆಲವರಂತೂ ಮುಂದೆ ನೋಡಿದರಾಯಿತು ಎಂದು ಪಿಯುಸಿ ಕಲಾ ಅಥವಾ ವಾಣಿಜ್ಯ ವಿಭಾಗಕ್ಕೆ ಪ್ರವೇಶ ಪಡೆದು ನಿರ್ಧಾರವನ್ನೇ ಮುಂದೂಡುತ್ತಾರೆ. ಕೊನೆಗೆ ಯಾವ ವಿಷಯದಲ್ಲೂ ಪರಿಣತಿ ಪಡೆಯದೆ ನಿರುದ್ಯೋಗಿಗಳಾಗಿ ಅಲೆಯುತ್ತಾರೆ. ಕೈಗಾರಿಕೆ ತರಬೇತಿ ಪಡೆದವರಿಗೆ ಮಾತ್ರ ನಿರುದ್ಯೋಗ ಸಮಸ್ಯೆ ಕಾಡುವುದೇ ಇಲ್ಲ.
 
ಕೈಗಾರಿಕೆ ತರಬೇತಿ ಪಡೆದವರಿಗೆ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆ, ಕಂಪೆನಿಗಳಲ್ಲಿ ಉದ್ಯೋಗಾವಕಾಶ ಲಭ್ಯ ಇದೆ. ನೌಕರಿ ಸಿಗದಿದ್ದರೂ ಸ್ವ ಉದ್ಯೋಗ ಆರಂಭಿಸಿ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಅವಕಾಶ ಇದೆ.
 
ಈಗಂತೂ ನಗರ ಪ್ರದೇಶದಲ್ಲಿ ಅನೇಕ ಕೈಗಾರಿಕೆಗಳು ತಲೆ ಎತ್ತಿವೆ. ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸಲು ಗುಣಮಟ್ಟದ ಉತ್ಪಾದನೆಗೆ ಒತ್ತು ನೀಡುತ್ತಿವೆ. ಕೈಗಾರಿಕೆಗಳ ಪ್ರತಿನಿಧಿಗಳು ಗುಣಮಟ್ಟದ ಶಿಕ್ಷಣ ನೀಡುತ್ತಿರುವ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ತರಬೇತಿ ಹಂತದಲ್ಲಿರುವಾಗಲೇ ತಾಂತ್ರಿಕ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿವೆ.  
 
ಬೆಂಗಳೂರು, ಮುಂಬೈ, ಪುಣೆ ಹಾಗೂ ಹೈದರಾಬಾದ್‌ನಲ್ಲಿರುವ ನಾಮಾಂಕಿತ ಕಂಪೆನಿಗಳು ಪ್ರತಿ ವರ್ಷ  ಬೀದರ್‌ನಲ್ಲಿರುವ  ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಗೆ ಬಂದು ಕ್ಯಾಂಪಸ್‌ ಸಂದರ್ಶನ ನಡೆಸಿ ಸ್ಥಳದಲ್ಲೇ ನೇಮಕಾತಿ ಆದೇಶ ನೀಡುತ್ತಿವೆ.
 
ಇದರಿಂದಾಗಿ ಐಟಿಐಗೆ ಬೇಡಿಕೆಯೂ ಹೆಚ್ಚಿದೆ. ಮೆರಿಟ್‌ ಆಧಾರದ ಮೇಲೆ ಸಂಸ್ಥೆಗಳು ಪ್ರವೇಶ ಕಲ್ಪಿಸುತ್ತಿರುವ ಕಾರಣ ಪ್ರತಿಭಾವಂತರಿಗೆ ಸುಲಭವಾಗಿ ಪ್ರವೇಶ ಲಭಿಸುತ್ತಿದೆ. ಇಸ್ರೊ ಸಹಿತ ತಾಂತ್ರಿಕ ಹುದ್ದೆಗಳಿಗೆ ಐಟಿಐ ಅಭ್ಯರ್ಥಿಗಳನ್ನೇ ನೇಮಕ ಮಾಡಿಕೊಳ್ಳುತ್ತಿದೆ.
 
ಶಿಷ್ಯವೇತನ: ಸರ್ಕಾರ, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಮಾಸಿಕ ₹500 ಶಿಷ್ಯವೇತನ ಕೊಡುತ್ತದೆ. ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಜತೆಗೆ ಟೂಲ್‌ಕಿಟ್, ಟ್ಯಾಬ್, ಲೇಖನ ಸಾಮಗ್ರಿ, ಸೋಲಾರ್ ಖಂದಿಲು, ಸಮವಸ್ತ್ರ, ಬೂಟ್ ಮತ್ತು ಸಾಕ್ಸ್ ವಿತರಿಸಲಾಗುತ್ತದೆ.
 
ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಅಭ್ಯರ್ಥಿಗಳು ತಾಂತ್ರಿಕ ಇಲಾಖೆಯ ವೆಬ್‌ಸೈಟ್ www.emptrg.kar.nic.in,  www.detkarnataka.org.in ನಲ್ಲಿ ಮಾಹಿತಿ ಪಡೆಯಬಹುದು ಎಂದು ತಿಳಿಸುತ್ತಾರೆ ಸರ್ಕಾರಿ ಐಟಿಐ ಕಾಲೇಜಿನ ಪ್ರಾಚಾರ್ಯ ಶಿವಶಂಕರ ಟೋಕರೆ (99869 52288).
 
ಉದ್ಯೋಗ ಮತ್ತು ತರಬೇತಿ ಇಲಾಖೆಯು ಪ್ರವೇಶ ಕುರಿತು ಅಧಿಸೂಚನೆ ಹೊರಡಿಸುತ್ತದೆ. ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿರುವ 10 ಸಂಸ್ಥೆ ಹಾಗೂ 10 ಕೋರ್ಸ್‌ಗಳ ಪೈಕಿ ಒಂದನ್ನು ಆದ್ಯತೆಯ ಮೇಲೆ ಆಯ್ಕೆ ಮಾಡಿಕೊಳ್ಳಲು ಅವಕಾಶ ಇರುತ್ತದೆ.
 
ಮೆರಿಟ್‌ ಆಧಾರದ ಮೇಲೆ ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳಿಗೆ ಸರ್ಕಾರಿ ಸಂಸ್ಥೆಗಳಲ್ಲಿ ಪ್ರವೇಶ ನೀಡಲಾಗುತ್ತದೆ. ಖಾಸಗಿ ಸಂಸ್ಥೆಗಳೂ ಇದ್ದು, ವಿದ್ಯಾರ್ಥಿಗಳು ಮೂಲಸೌಕರ್ಯ ಇರುವ ಕಾಲೇಜುಗಳ ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಪ್ರವೇಶ ಪಡೆಯುವುದು ಸೂಕ್ತ ಎನ್ನುತ್ತಾರೆ.
 
ಒಂದು ವರ್ಷದ ಅವಧಿಯಲ್ಲಿ ವಿವಿಧ ಕಂಪೆನಿಗಳು ಕಾಲೇಜಿನಲ್ಲಿ ಕ್ಯಾಂಪಸ್‌ ಸಂದರ್ಶನ ನಡೆಸಿ 330 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಸ್ಥಳದಲ್ಲೇ ನೇಮಕಾತಿ ಆದೇಶ ನೀಡಿವೆ. ನಮ್ಮ ಸಂಸ್ಥೆಯಲ್ಲಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳು ತಿಂಗಳಿಗೆ ₹ 20,000 ದಿಂದ ₹55,000  ವರೆಗೂ ವೇತನ ಪಡೆಯುತ್ತಿದ್ದಾರೆ ಎಂದು ವಿವರಿಸುತ್ತಾರೆ.
 
‘ಬೀದರ್‌ನ ಸರ್ಕಾರಿ ಐಟಿಐನಲ್ಲಿ ಎಲೆಕ್ಟ್ರಾನಿಕ್‌ ಮೆಕ್ಯಾನಿಕ್‌ ಕೋರ್ಸ್‌ ಮುಗಿಸಿದ ವರ್ಷದಲ್ಲೇ ಕೆಇಬಿಯಲ್ಲಿ ಲೈನ್‌ಮನ್‌ ಹುದ್ದೆಗೆ ನೇಮಕಾತಿ ಆಯಿತು. ಮರು ವರ್ಷ ಭಾರತೀಯ ಅಂತರಿಕ್ಷ ಸಂಶೋಧನಾ ಕೇಂದ್ರ (ಇಸ್ರೊ) ನಡೆಸಿದ ಪರೀಕ್ಷೆಯಲ್ಲಿ ಪಾಸಾದೆ.  ಇದೀಗ ಇಸ್ರೊದಲ್ಲಿ ಟೆಕ್ನಿಷಿಯನ್‌ ಆಗಿದ್ದೇನೆ.
 
ಪ್ರತಿ ತಿಂಗಳು ₹ 50,000  ಸಂಬಳ ಬರುತ್ತಿದೆ. ಕೈಗಾರಿಕೆ ತರಬೇತಿ ಪಡೆದವರಿಗೆ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲೂ ಉದ್ಯೋಗ ಅವಕಾಶ ಇದೆ. ಕೈಗಾರಿಕೆ ತರಬೇತಿ ಪಡೆದವರು ನಿರುದ್ಯೋಗಿಯಾಗಲು ಸಾಧ್ಯವೇ ಇಲ್ಲ’ ಎಂದು ಔರಾದ್‌ ತಾಲ್ಲೂಕಿನ ಜೋಜನಾ ಗ್ರಾಮದ ಸತೀಶ ಜೋಜನಾ ಹೇಳುತ್ತಾರೆ. ಹೆಚ್ಚಿನ ಮಾಹಿತಿಗೆ:  ಬೀದರ್ ಐಟಿಐ– 08482-234188 ಬಸವಕಲ್ಯಾಣ  08481-256930
***
ಬೀದರ್ ಜಿಲ್ಲೆಯಲ್ಲಿ 79 ಐಟಿಐ
ಜಿಲ್ಲೆಯಲ್ಲಿ ಬೀದರ್, ಬಸವಕಲ್ಯಾಣ, ಹುಮನಾಬಾದ್‌, ಔರಾದ್‌, ಭಾಲ್ಕಿ, ಕಮಲನಗರದಲ್ಲಿ ಕೈಗಾರಿಕೆ ತರಬೇತಿ ಸಂಸ್ಥೆಗಳಿವೆ. ಸರ್ಕಾರಿ ಹಾಗೂ ಅನುದಾನಿತ ತಲಾ ಆರು ಹಾಗೂ ಅನುದಾನ ರಹಿತ 67 ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಗಳು ಕಾರ್ಯನಿರ್ವಹಿಸುತ್ತಿವೆ.
ಈ ಸಂಸ್ಥೆಗಳಲ್ಲಿ ಡ್ರೆಸ್ ಮೇಕಿಂಗ್ ಫ್ಯಾಶನ್ ಡಿಸೈನಿಂಗ್, ಇಂಟೀರಿಯರ್ ಡೆಕೊರೇಟರ್ ಆ್ಯಂಡ್ ಡಿಸೈನಿಂಗ್, ಕೋಪಾ (ಕಂಪ್ಯೂಟರ್), ವೆಲ್ಡರ್ ಒಂದು ವರ್ಷದ ತರಬೇತಿ ಪಡೆಯಬಹುದಾಗಿದೆ. ಎಂಆರ್‌ಎಸಿ, ಫಿಟ್ಟರ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಎಲೆಕ್ಟ್ರಿಷಿಯನ್ ಇವು ಎರಡು ವರ್ಷದ ಕೋರ್ಸ್‌ಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.